ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಕಮಲ್ ನಾಥ್ ಶನಿವಾರ ದೆಹಲಿಗೆ ತೆರಳಿದ್ದಾರೆ. ಅವರು ಬಿಜೆಪಿಗೆ ಸೇರುವ ಸಾಧ್ಯತೆಗಳಿವೆ ಎಂಬ ಊಹಾಪೋಹಗಳ ನಡುವೆ, ಇದೀಗ, ಕಮಲ್ ನಾಥ್ ಕೇಸರಿ ಪಕ್ಷದ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಕಮಲ್ ನಾಥ್ ಮತ್ತು ಅವರ ಪುತ್ರ ನಕುಲ್ ನಾಥ್ ಕಾಂಗ್ರೆಸ್ ತೊರೆಯುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಮಧ್ಯಪ್ರದೇಶದ ಏಕೈಕ ಕಾಂಗ್ರೆಸ್ ಸಂಸದ ನಕುಲ್ ನಾಥ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಯೋದಿಂದ ಪಕ್ಷದ ಹೆಸರನ್ನು ಕೈಬಿಟ್ಟಿದ್ದಾರೆ. ಇದು ಅವರು ಕಾಂಗ್ರೆಸ್ ತೊರೆಯುತ್ತಾರೆ ಎಂಬ ಚರ್ಚೆಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇದೀಗ, ಕಮಲ್ ನಾಥ್ ದೆಹಲಿಗೆ ತೆರಳಿರುವುದರಿಂದ ಊಹಾಪೋಹಗಳು ಮತ್ತಷ್ಟು ಹೆಚ್ಚಾಗಿವೆ.
ನಕುಲ್ ನಾಥ್ ಅವರು ಮಧ್ಯಪ್ರದೇಶದ ಛಿಂದ್ವಾರಾ ಲೋಕಸಭಾ ಕ್ಷೇತ್ರದಿಂದ 2019ರಲ್ಲಿ ಗೆಲುವು ಸಾಧಿಸಿದ್ದರು. ಇದೀಗ, ಕಾಂಗ್ರೆಸ್ ಘೋಷಣೆಗೂ ಮುನ್ನವೇ ಮುಂದಿನ ಚುನಾವಣೆಯಲ್ಲೂ ತಾವೇ ಅಭ್ಯರ್ಥಿಯೆಂದು ಫೆಬ್ರವರಿ ಆರಂಭದಲ್ಲಿ ಹೇಳಿಕೊಂಡಿದ್ದರು. ಅಲ್ಲದೆ, ಕಮಲ್ ನಾಥ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಚರ್ಚೆಗಳ ಬಗ್ಗೆಯೂ ಮಾತನಾಡಿದ್ದ ನಕುಲ್, ‘ಕಮಲ್ ನಾಥ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ’ ಎಂದಿದ್ದರು.