ವಿಶ್ವಗುರು ಮೋದಿ ಬಗ್ಗೆ ಕಂಗನಾ ರಣಾವತ್ ಹಾಡಿ ಹೊಗಳಿ ಬರೆದಿದ್ದರು. ಇವರು ಈ ಪೋಸ್ಟ್ ಹಾಕಿದ್ದಕ್ಕೆ ಬಿಜೆಪಿಯ ಯಾವೊಬ್ಬ ನಾಯಕರಿಂದ ಶಹಬ್ಬಾಸ್ಗಿರಿ ಸಿಗಲಿಲ್ಲ. ಬದಲಾಗಿ, ಟೀಕೆ ಸಿಕ್ತು. ಹಾಕಿರುವ ಪೋಸ್ಟ್ ಅನ್ನೇ ಡಿಲೀಟ್ ಮಾಡಿಸಿದ್ರು. ಅದು ಕೂಡ ಮೋದಿಯನ್ನ ಹೊಗಳಿ ಮಾಡಿದ್ದ ಟ್ವೀಟ್...
ಕಂಗನಾ ರಣಾವತ್- ನಟನೆ, ಅಭಿನಯ, ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೆ ಸುದ್ದಿಯಾದ ನಟಿ, ರಾಜಕಾರಣಿ. ಅವರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಲವಾರು ಬಾರಿ ಟ್ರೋಲ್ಗೆ ಗುರಿಯಾಗಿದ್ದಾರೆ. ಅನ್ನಧಾತರ ಬಗ್ಗೆ ಕೆಟ್ಟದಾಗಿ ಮಾತನಾಡಿ ಸೆಕ್ಯುರಿಟಿ ಗಾರ್ಡ್ ಒಬ್ಬರಿಂದ ಕಪಾಳಮೋಕ್ಷಕ್ಕೂ ಗುರಿಯಾಗಿದ್ದಾರೆ. ಹೀಗೆ… ಒಂದಿಲ್ಲೊಂದು ಹೇಳಿಕೆ ಕೊಡುವುದು, ವಿವಾದಾತ್ಮಕವಾಗಿ ವರ್ತಿಸುವುದು ಹಾಗೂ ಮೋದಿ ಅವರ ಸಮರ್ಥನೆಗಾಗಿ ವಾಟ್ಸ್ಆ್ಯಪ್ನಲ್ಲಿ ಬರುವ ಸುಳ್ಳುಗಳನ್ನೇ ಅವಲಂಬಿಸುವುದು- ನಾನಾ ರೀತಿಯಲ್ಲಿ ಕಂಗನಾ ಸುದ್ದಿಯಲ್ಲಿರುತ್ತಾರೆ.
ಈ ಹಿಂದೆ, 2020ರಲ್ಲಿ ದೆಹಲಿ ಗಡಿಗಳಲ್ಲಿ ನಡೆದ ಐತಿಹಾಸಿಕ ರೈತ ಹೋರಾಟದ ಸಮಯದಲ್ಲಿ ಪ್ರತಿಭಟನಾನಿರತ ರೈತರನ್ನು ‘ಭಯೋತ್ಪಾದಕರು’ ಎಂದು ಕರೆದು, ಆಕ್ರೋಶಕ್ಕೆ ತುತ್ತಾಗಿದ್ದರು. ಆ ನಂತರ ಅವರ ಸಾಮಾಜಿಕ ಜಾಲತಾಣ ಖಾತೆಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಆ ನಂತರದಲ್ಲಿ 2021ರಲ್ಲಿ ಬಿಡುಗಡೆಯಾಗಿದ್ದ ಕಂಗನಾ ರಣಾವತ್ ಅವರ ‘ಎಮರ್ಜೆನ್ಸಿ’ ಚಿತ್ರದ ಟ್ರೈಲರ್ನಲ್ಲಿ 1975ರ ತುರ್ತು ಪರಿಸ್ಥಿತಿಯ ಸಮಯವನ್ನು ಚಿತ್ರಿಸುವಾಗ ಸಿಖ್ ಸಮುದಾಯವನ್ನು ಅವಮಾನಿಸಿ ಚಿತ್ರೀಕರಿಸಿದ್ದ ದೃಶ್ಯಗಳು ಕಂಡುಬಂದಿದ್ದವು. ಇದು ಸಿಖ್ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.
ಇನ್ನು, ಬಿಜೆಪಿಯನ್ನು ಟೀಕಿಸುವವರು, ಪ್ರತಿಭಟನೆ ನಡೆಸುವವರ ವಿರುದ್ಧ ಕಂಗನಾ ಆಗಾಗ್ಗೆ ನಾಲಿಗೆ ಹರಿಬಿಟ್ಟಿರುವ ಉದಾಹರಣೆಗಳಿವೆ. ಅಲ್ಲದೆ, ಬಿಜೆಪಿ ಮತ್ತು ಮೋದಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಸುಳ್ಳು, ನಕಲಿ ಪೋಸ್ಟ್ಗಳನ್ನು ಹಂಚಿಕೊಂಡು ಟ್ರೋಲ್ಗೂ ಒಳಗಾಗಿದ್ದಾರೆ. ಇದೀಗ, ಅಂತಹ ಯಡವಟ್ಟಿನೊಂದಿಗೆ ಬಿಜೆಪಿಯನ್ನೇ ಕಂಗನಾ ರಣಾವತ್ ಟ್ರೋಲ್ ಮಾಡಿದ್ದಾರೆ. ‘ಮೊದಲು ಹಾಕಿದ್ದ ಪೋಸ್ಟ್ ಒಂದನ್ನು ಡಿಲೀಟ್ ಮಾಡಿ, ಆ ಪೋಸ್ಟ್ ಅನ್ನು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸೂಚನೆಯಂತೆ ಡಿಲೀಟ್ ಮಾಡಿದ್ದೇನೆ. ನನ್ನ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ವಿಷಾಧಿಸುತ್ತೇನೆ’ ಎಂದು ಹೇಳುವ ಮೂಲಕ, ಬಿಜೆಪಿಗರನ್ನೇ ಮುಜುಗರಕ್ಕೀಡು ಮಾಡಿದ್ದಾರೆ.
ಅಂದಹಾಗೆ, ಕಂಗನಾ ಇತ್ತೀಚೆಗೆ, ಟ್ವಿಟರ್ನಲ್ಲಿ ಒಂದು ಪೋಸ್ಟ್ ಮಾಡಿದ್ದರು. ಆ ಪೋಸ್ಟ್ ‘ಭಾರತ-ಪಾಕ್ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ನಾನೇ. ನಾನು ಹೇಳಿದ್ದಕ್ಕೆ ಎರಡೂ ರಾಷ್ಟ್ರಗಳು ಕದನ ವಿರಾಮ ಘೋಷಿಸಿವೆ’ ಎಂದು ಹೇಳಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕುರಿತಾಗಿತ್ತು.
ಕಂಗನಾ ಮೊದಲು ಹಾಕಿದ್ದ ಪೋಸ್ಟ್, ಅಂದರೆ ಡಿಲೀಟ್ ಮಾಡಲಾಗಿರುವ ಪೋಸ್ಟ್ನಲ್ಲಿ, ‘ಪ್ರೇಮ ನಷ್ಟಕ್ಕೆ ಕಾರಣವೇನಿರಬಹುದು? ಅವರು ಅಮೆರಿಕದ ಅಧ್ಯಕ್ಷರು. ಆದರೆ ವಿಶ್ವದ ಅತ್ಯಂತ ಪ್ರೀತಿಯ ನಾಯಕ ಭಾರತೀಯ ಪ್ರಧಾನಿ. ಟ್ರಂಪ್ ಅವರದ್ದು ಎರಡನೇ ಅವಧಿಯ ಅಧಿಕಾರ. ಆದರೆ, ಭಾರತೀಯ ಪ್ರಧಾನಿ ಮೋದಿ ಅವರದ್ದು ಮೂರನೇ ಅವಧಿ. ನಿಸ್ಸಂದೇಹವಾಗಿ ಟ್ರಂಪ್ ಆಲ್ಫಾ ಪುರುಷ ಆದರೆ ನಮ್ಮ ಪ್ರಧಾನಿ ಮೋದಿ ಅವರು ಸಬ್ ಆಲ್ಫಾ ಪುರುಷ ಕಾ ಬಾಪ್’ ಎಂದು ಬರೆದುಕೊಂಡಿದ್ದರು.
ಆದರೆ, ಆ ನಂತರ, ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದರು. ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ ಕಂಗನಾ ತಾವು ಏಕೆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದೇನೆಂದು ಇನ್ನೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಆ ಪೋಸ್ಟ್ನಲ್ಲಿ, ‘ಭಾರತದಲ್ಲಿ ಉತ್ಪಾದನೆ ಮಾಡಬೇಡಿ ಎಂದು ಆ್ಯಪಲ್ ಸಿಇಒ ಟಿಮ್ ಕುಕ್ಗೆ ಸೂಚಿಸಿರುವ ಡೊನಾಲ್ಡ್ ಟ್ರಂಪ್ ಕುರಿತಂತೆ ನಾನು ಮಾಡಿದ್ದ ಪೋಸ್ಟ್ ಅನ್ನು ಅಳಿಸಿ ಹಾಕುವಂತೆ ಗೌರವಾನ್ವಿತ ರಾಷ್ಟ್ರೀಯ ಅಧ್ಯಿಕ್ಷ ಜೆ.ಪಿ.ನಡ್ಡಾ ಸೂಚಿಸಿದ ನಂತರ, ನಾನು ಆ ಪೋಸ್ಟ್ ಅನ್ನು ಅಳಿಸಿ ಹಾಕಿದ್ದೇನೆ. ನಾನು ನನ್ನ ತೀರಾ ವೈಯಕ್ತಿಕ ಅಭಿಪ್ರಾಯವನ್ನು ಪೋಸ್ಟ್ ಮಾಡಿದ್ದಕ್ಕೆ ವಿಷಾದಿಸುತ್ತೇನೆ. ನನಗೆ ನೀಡಿದ ನಿರ್ದೇಶನದನ್ವಯ, ತಕ್ಷಣವೇ ಆ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ನಿಂದ ಅಳಿಸಿ ಹಾಕಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ಎರಡನೇ ಪೋಸ್ಟ್ ಹಾಕುವ ಮೂಲಕ ಕಂಗನಾ ನೆಟ್ಟಿಗರ ಟ್ರೋಲ್ಗೆ ಗುರಿಯಾಗಿದ್ದಾರೆ. ತಾವು ಟ್ರೋಲ್ಗೆ ಒಳಗಾಗುವುದಲ್ಲದೆ, ಬಿಜೆಪಿಯನ್ನೂ ಟ್ರೋಲ್ಗೆ ಸಿಲುಕಿಸಿದ್ದಾರೆ. ಮಾತ್ರವಲ್ಲದೆ, ಟ್ರಂಪ್ ಅವರನ್ನು ಟೀಕಿಸುವ ಧೈರ್ಯ ಭಾರತದ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಯಾವೊಬ್ಬ ನಾಯಕರಿಗೂ ಇಲ್ಲ. ಅವರು ಟೀಕಿಸುವುದಕ್ಕೆ ಉಳಿದವರನ್ನೂ ಬಿಡುವುದಿಲ್ಲ ಎಂಬ ಸಂದೇಶವನ್ನು ಕಂಗನಾ ರವಾನೆ ಮಾಡಿದ್ದಾರೆ!
When you need permission to speak and orders to delete, it’s not loyalty it’s slavery dressed as patriotism.#KanganaRanaut #Trump #Modi #Apple pic.twitter.com/vQEp2gvenf
— SHRADDHA (슈라다) (@immaturemirror) May 15, 2025
ಕಂಗಾನಾ ಅವರು ಡಿಲೀಟ್ ಮಾಡಿದ ಪೋಸ್ಟ್ನ ಸ್ಕ್ರೀನ್ ಶಾಟ್ ಮತ್ತು ಹೊಸ ಪೋಸ್ಟ್ನ ಸ್ಕ್ರೀನ್ ಶಾಟ್ಗಳನ್ನು ಇಟ್ಟುಕೊಂಡು ನೆಟ್ಟಿಗರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಕಂಗನಾ ಟ್ವೀಟ್ ಡಿಲೀಟ್ ಮಾಡಿದ್ದು ಯಾಕೆ? ಇದು ವೈಯಕ್ತಿಕ ಅಸೂಯೆಯೇ ಅಥವಾ ರಾಜತಾಂತ್ರಿಕ ಅಭದ್ರತೆಯೇ. ಕಂಗನಾ ರಣಾವತ್ ಕೇವಲ ಎರಡೇ ಟ್ವೀಟ್ಗಳಲ್ಲಿ ಇಡೀ ಬಿಜೆಪಿಯನ್ನು ಬಯಲು ಮಾಡಿದ್ದಾರೆ. ಅವರು ವಿಶ್ವಗುರು ಪ್ರಧಾನಿ ಎಂದು ಕರೆಯಲ್ಪಡುವ ಮೋದಿ ಅವರನ್ನೂ ಬಹಿರಂಗಗೊಳಿದ್ದಾರೆ’ ಎಂದು ನೆಟ್ಟಿಗರು ಹೇಳಿದ್ದಾರೆ.
ವಿಶ್ವಗುರು ಮೋದಿ ಬಗ್ಗೆ ಕಂಗನಾ ರಣಾವತ್ ಹಾಡಿ ಹೊಗಳಿ ಬರೆದಿದ್ದರು. ಇವರು ಈ ಪೋಸ್ಟ್ ಹಾಕಿದ್ದಕ್ಕೆ ಬಿಜೆಪಿಯ ಯಾವೊಬ್ಬ ನಾಯಕರಿಂದ ಶಹಬ್ಬಾಸ್ಗಿರಿ ಸಿಗಲಿಲ್ಲ. ಬದಲಾಗಿ, ಟೀಕೆ ಸಿಕ್ತು. ಹಾಕಿರುವ ಪೋಸ್ಟ್ ಅನ್ನೇ ಡಿಲೀಟ್ ಮಾಡಿಸಿದ್ರು. ಅದು ಕೂಡ ಮೋದಿಯನ್ನ ಹೊಗಳಿ ಮಾಡಿದ್ದ ಟ್ವೀಟ್… ಸಡನ್ ಆಗಿ ಬಿಜೆಪಿಗರು ಮೋದಿಯನ್ನ ಹೊಗಳಿ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿಸುವುದಕ್ಕೆ ಕಾರಣ ಏನು? ತಮ್ಮ ಪಕ್ಷದವರೇ, ತಮ್ಮದೇ ಪಕ್ಷದವರ ಪರವಾಗಿ ಹಾಡಿ ಹೊಗಳಿ ಟ್ವೀಟ್ ಮಾಡಿದ್ದರೂ ಡಿಲೀಟ್ ಮಾಡಿಸಿದ್ದಾರೆ.
ಕಟ್ಟಕಡೆಯದಾಗಿ ಉಳಿಯುವ ಪ್ರಶ್ನೆ ಏನೆಂದ್ರೆ, ಅಮೆರಿಕಾದ ಅಧ್ಯಕ್ಷ ಟ್ರಂಪ್ಗೆ ಈ ಬಿಜೆಪಿಗರು ಯಾಕೆ ಇಷ್ಟೊಂದು ಹೆದರುತ್ತಿದ್ದಾರೆ?