ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿರಸ್ಕರಿಸಿಲ್ಲ ಎಂದು ರಾಜಭವನ ಸ್ಪಷ್ಟೀಕರಣ ನೀಡಿದೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಥಾವರ್ ಚಂದ್ ಗೆಹ್ಲೋಟ್, “ಅಧಿವೇಶನ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕನ್ನಡ ಕಡ್ಡಾಯ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿಲ್ಲ, ಸರ್ಕಾರಕ್ಕೆ ವಾಪಸ್ ಕಳಿಸಲಾಗಿದೆ” ಎಂದಿದ್ದಾರೆ.
Hon’ble Governor did not reject the ordinance mandating 60% Kannada on nameplates for businesses; it was returned to the state government with advice to present it before both houses of the state legislature. pic.twitter.com/gCUAUXXkpo
— Thaawarchand Gehlot (@TCGEHLOT) January 31, 2024
“ಅಧಿವೇಶನ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕನ್ನಡ ಕಡ್ಡಾಯ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿಲ್ಲ, ಸರ್ಕಾರಕ್ಕೆ ವಾಪಸ್ ಕಳಿಸಲಾಗಿದೆ. ಫೆಬ್ರವರಿ 12ರಿಂದ ವಿಧಾನಮಂಡಲ ಅಧಿವೇಶನ ನಿಗದಿಯಾಗಿದೆ. ಅಧಿವೇಶನದಲ್ಲೇ ಉಭಯ ಸದನಗಳಲ್ಲಿ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆಯುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ” ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಸ್ಪಷ್ಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಪ್ರತಿಕ್ರಿಯಿಸಿ, ” ಅಧಿವೇಶನ ನಿಗದಿ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ವಾಪಸ್ ಕಳಿಸಿದ್ದಾರೆ. ನಾವು ಸುಗ್ರೀವಾಜ್ಞೆ ಕಳಿಸಿದಾಗ ಅಧಿವೇಶನ ನಿಗದಿಯಾಗಿರಲಿಲ್ಲ. ಸುಗ್ರೀವಾಜ್ಞೆ ರಾಜ್ಯಪಾಲರ ಕೈಸೇರುವ ವೇಳೆಗೆ ಅಧಿವೇಶನ ನಿಗದಿಯಾಗಿದೆ. ಹೀಗಾಗಿ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದಾರೆ. ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸುತ್ತೇವೆ” ಎಂದಿದ್ದಾರೆ.