ವಿಜಯ ದಿವಸ್ ಆಚರಣೆ | ಕಾರ್ಗಿಲ್ ಯೋಧ ಕ್ಯಾಪ್ಟನ್ ಕಾಲಿಯಾರಿಗೆ ದ್ರೋಹ ಬಗೆದ ಬಿಜೆಪಿ

Date:

Advertisements
ಇವತ್ತು ನಾವು ವಿಜಯ್ ದಿವಸ್ ಆಚರಿಸಿ, ನಮ್ಮ ಐನೂರು ಸೈನಿಕರ ಸಾವಿಗೆ ಕಾರಣರಾದ ವಾಜಪೇಯಿ ಹಾಗೂ ಬಿಜೆಪಿಯ ಗುಣಗಾನ ಮಾಡುತ್ತಿದ್ದೇವೆ. ಎಂಥಾ ದೇಶಭಕ್ತಿ? ಆದರೆ, ಕ್ಯಾಪ್ಟನ್ ಕಾಲಿಯಾರ ತಂದೆ ಎನ್.ಕೆ ಕಾಲಿಯಾ ಇವತ್ತಿಗೂ ಒಬ್ಬಂಟಿಯಾಗಿ ತನ್ನ ಪುತ್ರನಿಗೆ ನ್ಯಾಯ ದೊರಕಿಸಿ ಕೊಡಲು ಹೋರಾಡುತ್ತಿದ್ದಾರೆ.

ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸಿದ ವಾಜಪೇಯಿ ಸರ್ಕಾರ, ಕಾರ್ಗಿಲ್ ಘರ್ಷಣೆಗೆ ತನ್ನ ಅಸಾಮರ್ಥ್ಯ, ಉದಾಸೀನ, ಅಸಡ್ಡೆತನ ಕಾರಣವೆನ್ನುವುದನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಿತು. ಆದರೆ, ಅಲ್ಲಿ ಯುದ್ದವಾಗಿರಲೇ ಇಲ್ಲ – ಅದೊಂದು ಕಾರ್ಯಾಚರಣೆ ಮಾತ್ರವೇ ಆಗಿತ್ತು. ಬಿಜೆಪಿ ಅಧಿಕಾರದಲ್ಲಿದ್ದುದ್ದರಿಂದ ಅದನ್ನು ಯುದ್ದ ಎಂದು ಬಣ್ಣಿಸಿ, ಸುಮಾರು ಐದು ಸಾವಿರ ಪಾಕಿಸ್ತಾನಿ ಸೈನಿಕರು, ಭಾರತದೊಳಗೆ 50 ರಿಂದ 80 ಚದರ ಕಿಲೋಮೀಟರಿನಷ್ಟು ಒಳಗೆ ಬಂದರೂ ಮಲಗಿದ್ದ ನಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಡಲಾಯಿತು.

ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಗಾಲ್ವಾನ್ ಪ್ರದೇಶದಲ್ಲಿ ಚೀನಾ ಏನು ಮಾಡಿತ್ತೋ ಅದನ್ನೇ ಅಂದು ಪಾಕಿಸ್ತಾನ ಮಾಡಿತ್ತು. ಹಿಮಪಾತದ ಸಮಯದಲ್ಲಿ ಎರಡೂ ದೇಶಗಳ ಸೈನಿಕರು ಗಡಿಗಳಲ್ಲಿರುವ ತಮ್ಮ ತಮ್ಮ ಪೋಸ್ಟ್‌ಗಳಿಂದ ಕೆಳಕ್ಕಿಳಿದು ತಮ್ಮ ಸ್ವಸ್ಥಾನಗಳಿಗೆ ಮರಳುತ್ತಾರೆ. ಮಾರ್ಚ್ ಕೊನೆಗೆ, ಎಪ್ರಿಲ್‌ನಲ್ಲಿ ಹಿಮ ಕರಗಿ, ವಾತಾವರಣ ತಿಳಿಗೊಳ್ಳುವಾಗ ಪುನಃ ಗಡಿಯಲ್ಲಿ ಗಸ್ತು ಆರಂಭವಾಗುತ್ತೆ. 1999ರಲ್ಲಿ ಪಾಕಿಸ್ತಾನ ಹಿಮಪಾತ ಆರಂಭವಾದಾಗ ಹಿಂದಕ್ಕೆ ಸರಿದಿತ್ತಾದರೂ ಉಭಯ ದೇಶದ ಸೈನಿಕರು ಗಸ್ತು ತಿರುಗಲು ಆರಂಭಿಸುವ ಬಹುಮೊದಲೇ, ಅಂದರೆ, ಫೆಬ್ರವರಿ ತಿಂಗಳಿನಲ್ಲೇ ನಮ್ಮ ಗಡಿಯೊಳಗೆ ನುಸುಳಿ ಕಾರ್ಗಿಲ್ ಪ್ರದೇಶವನ್ನು ಅತಿಕ್ರಮಿಸಿ 132 ಬಹುಮುಖ್ಯ ಆಯಕಟ್ಟಿನ ಸ್ಥಳಗಳಲ್ಲಿ ತನ್ನ ಸೇನಾ ತುಕಡಿಗಳನ್ನು ಸ್ಥಾಪಿಸಿತ್ತು.

ಭಾರತದ ಗುಪ್ತಚರ ಇಲಾಖೆ ಸರ್ಕಾರಕ್ಕೆ ಪಾಕಿಸ್ತಾನ ಇಂಥದೊಂದು ಕೃತ್ಯಕ್ಕೆ ಕೈಹಾಕುತ್ತಿದೆಯೆಂದು ಎಚ್ಚರಿಕೆ ಕೊಟ್ಟಿತ್ತು. ಮಿಲಿಟರಿ ಇಂಟೆಲಿಜೆನ್ಸ್ ಕೂಡಾ ಇದರ ಉಲ್ಲೇಖ ಮಾಡಿತ್ತು. ಆದರೆ, ಗಡದ್ದಾಗಿ ನಿದ್ದೆ ಮಾಡುತ್ತಿದ್ದ ಸರ್ಕಾರ ಎಚ್ಚೆತ್ತುಕೊಳ್ಳಲೇ ಇಲ್ಲ. ಎಪ್ರಿಲ್ ತಿಂಗಳು ಮುಗಿಯುವ ಮೊದಲೇ ಪಾಕಿಸ್ತಾನ, ಭಾರತದ ಸುಮಾರು 50 ರಿಂದ 80 ಚದರ ಕಿಲೋಮೀಟರ್ ಭೂಪ್ರದೇಶವನ್ನು ಅತಿಕ್ರಮಿಸಿತ್ತು.

Advertisements

ಈ ಅತಿಕ್ರಮಣದ ಬಗ್ಗೆ, ಭಾರತದ ಗಡಿಯೊಳಗೆ ಪಾಕ್ ಸೈನಿಕರು ಇರುವುದರ ಬಗ್ಗೆ ಮೊಟ್ಟಮೊದಲು ಮೇ 3, 1999 ರಂದು ಸೇನೆಗೆ ಸುದ್ದಿ ಕೊಟ್ಟಿದ್ದು ಕಾರ್ಗಿಲ್ ಪ್ರದೇಶದ ಕೆಲ ಕುರಿಗಾಹಿಗಳು. ಈ ಅತಿಕ್ರಮಣದ ಸುದ್ದಿ ಸಿಗುತ್ತಲೇ 4ನೇ ಜಾಟ್ ರೆಜಿಮೆಂಟ್‌ನ ಕ್ಯಾಪ್ಟನ್ ಸೌರಭ್ ಕಾಲಿಯಾ ಹಾಗೂ ಆತನ ಸಂಗಡಿಗರಾದ ಭಂವರ್ ಲಾಲ್ ಭಗಾರಿಯಾ, ಅರ್ಜುನ್ ರಾಮ್, ನರೇಶ್ ಸಿಂಗ್, ಮೂಲಾ ರಾಮ್ ಕಾಕ್ಸರ್ ಪ್ರದೇಶದ ಬಜರಂಗ್ ಪೋಸ್ಟ್ ಬಳಿ ಪಾಕ್ ಅತಿಕ್ರಮಣದ ಪ್ರಮಾಣ ತಿಳಿಯಲು ಹೋದರು. ಅಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ, ಕ್ಯಾಪ್ಟನ್ ಕಾಲೀಯಾ ಹಾಗೂ ಅವರ ನಾಲ್ಕೂ ಮಂದಿ ಸಂಗಡಿಗರನ್ನು ಪಾಕ್ ಬಂಧಿಸಿತು. ಹದಿನೈದು ದಿನಗಳಿಗಿಂತಾ ಹೆಚ್ಚಿನ ಕಾಲ ಅವರನ್ನು ಬಂಧಿಯಾಗಿಸಿದ್ದ ಪಾಕಿಸ್ತಾನ ಅವರಿಗೆ ಚಿತ್ರಹಿಂಸೆ ಕೊಟ್ಟು ಕೊಂದಿತ್ತು. ಜೂನ್ 9, 1999ರಂದು ಅವರ ದೇಹಗಳನ್ನು ಭಾರತಕ್ಕೆ ಹಸ್ತಾಂತರಿಸಿದಾಗ ಅವರ ದೇಹದ ಮೇಲೆಲ್ಲಾ ಚಿತ್ರಹಿಂಸೆಯ ಕುರುಹುಗಳಿದ್ದವು. ಅವರ ದೇಹದ ಮೇಲೆ ಸಿಗರೇಟ್‌ನಿಂದ ಸುಟ್ಟಿದ್ದ ಗುರುತುಗಳಿದ್ದು, ಕಿವಿಯ ತಮಟೆಗಳನ್ನು ಕಾದ ರಾಡ್‍ನಿಂದ ಚುಚ್ಚಲಾಗಿತ್ತು. ಹಲ್ಲುಗಳು ಉದುರಿ, ಮೈಮೂಳೆಗಳು, ತಲೆಬುರುಡೆ ಮುರಿದಿತ್ತು. ಅವರ ಮೂಗನ್ನು ಕತ್ತರಿಸಿ, ತುಟಿಗಳನ್ನು ಸೀಳಿ, ಕಣ್ಣುಗಳನ್ನು ಕೀಳಲಾಗಿತ್ತು. ಯಾವ ಥರದ ಚಿತ್ರಹಿಂಸೆ ಎಂದರೆ ಅವರ ವೃಷಣಗಳನ್ನು ಕೂಡಾ ತುಂಡರಿಸಿದ್ದರು ಪಾಕ್ ಸೈನಿಕರು. ಇವರ ದೇಹವನ್ನು ನೋಡಿದ, ಸ್ವತಃ ಯೋಧರಾಗಿದ್ದ, ಅಂದಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅತ್ತಿದ್ದರು.

ಇವರ ಬಂಧನವಾಗುತ್ತಲೇ ಎಚ್ಚೆತ್ತ ವಾಜಪೇಯಿ ಸರ್ಕಾರ ಪಾಕ್ ಸೈನಿಕರನ್ನು ನಮ್ಮ ನೆಲದಿಂದ ಹೊರಹಾಕಲು ಆಪರೇಷನ್ ವಿಜಯ್ ಆರಂಭಿಸಿತು. ಭಾರತ ಕಾರ್ಯಾಚರಣೆಯಲ್ಲಿ ವಿಜಯಿಯಾಯಿತು. ಅತಿಕ್ರಮಣಕ್ಕೊಳಗಾಗಿದ್ದ ನಮ್ಮ ಭೂಭಾಗ ನಮಗೆ ಸಿಕ್ಕಿತು. ಆದರೆ, ಈ ಕಾರ್ಯಾಚರಣೆಯಲ್ಲಿ ನಾವು 500 ರಷ್ಟು ಸೈನಿಕರನ್ನು ಕಳೆದುಕೊಂಡೆವು. ಈ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಒಂದಿಂಚೂ ಅಧಿಕ ಭೂಭಾಗ ಸಿಗಲಿಲ್ಲ. ಬದಲಾಗಿ ನಮ್ಮದೇ ಭೂಭಾಗವನ್ನು ಪಾಕ್ ಸೈನಿಕರ ಕೈಯಿಂದ ಬಿಡಿಸಿಕೊಳ್ಳಲು ಐನೂರು ಯೋಧರನ್ನು ಕಳೆದುಕೊಂಡೆವು. ಯಾಕೆ? ಯಾಕೆಂದರೆ ನಮ್ಮ ಅಂದಿನ ಸರ್ಕಾರದ ಅಸಾಮರ್ಥ್ಯ, ಉದಾಸೀನ ಹಾಗೂ ವೈಫಲ್ಯದಿಂದ.

ಸೌರಭ್ ಕಾಲಿಯಾ
ಸೌರಭ್ ಕಾಲಿಯಾ

ಇವರು ಎಂಥಾ ದ್ರೋಹಿಗಳೆಂದರೆ ಇವರ ಉದಾಸೀನ ಹಾಗೂ ವೈಫಲ್ಯದ ಕಾರಣದಿಂದ ಪಾಕಿಸ್ತಾನಿ ಸೈನಿಕರ ಕೈಯಲ್ಲಿ ಚಿತ್ರಹಿಂಸೆಗೊಳಗಾಗಿ ಮೃತಪಟ್ಟ ಸೌರಭ್ ಕಾಲಿಯಾನಿಗೆ ಕಾರ್ಗಿಲ್ ನಂತರ ಪರಮವೀರ ಚಕ್ರವಾಗಲಿ, ಮಹಾವೀರ ಚಕ್ರವಾಗಲಿ, ವೀರಚಕ್ರವಾಗಲಿ ಅಥವಾ ಕಾರ್ಗಿಲ್ ಯೋಧರಿಗೆ ಕೊಟ್ಟ ಯಾವುದೇ ಸೇನಾ ಶೌರ್ಯ ಪದಕವನ್ನಾಗಲೀ ಕೊಡಲೇ ಇಲ್ಲ. ಹಾಗೆ ಕೊಟ್ಟಿದ್ದರೆ ಆತ ಹೇಗೆ ಮತ್ತು ಏಕೆ ಮೃತಪಟ್ಟ ಎನ್ನುವುದು ಎಲ್ಲರಿಗೂ ತಿಳಿಯುತ್ತಿತ್ತು. ಶೌರ್ಯ ಪದಕ ಬಿಡಿ, ಕ್ಯಾಪ್ಟನ್ ಸೌರಭ್ ಕಾಲಿಯಾರ ಕುಟುಂಬ ಇದನ್ನು ವಾರ್ ಕ್ರೈಮ್‌ಆಗಿ ಪರಿಗಣಿಸಿ, ಪಾಕಿಸ್ತಾನವನ್ನು ಅಂತಾರಾಷ್ಟೀಯ ನ್ಯಾಯಾಲಯಕ್ಕೆ ಎಳೆಯಬೇಕೆಂದು ಸರ್ಕಾರವನ್ನು ಕೇಳಿಕೊಂಡರೂ, ಅಂದಿನ ಸರ್ಕಾರ ಏನೂ ಮಾಡದೇ ಸುಮ್ಮನಾಯಿತು.

ಕಾಲಿಯಾರ ತಂದೆ ಮಾತ್ರ ಏಕಾಂಗಿಯಾಗಿ ಹೋರಾಟ ಮಾಡಿ ಅನೇಕ ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸಂಪರ್ಕಿಸಿ, ಕ್ಯಾಪ್ಟನ್ ಕಾಲೀಯಾ ಹಾಗೂ ಅವರ ಸಂಗಡಿಗರಿಗೆ ನ್ಯಾಯ ಒದಗಿಸಬೇಕೆಂದು ಕೇಳಿಕೊಂಡರು. 2004ರಲ್ಲಿ ಬ್ರಿಟನ್ ತಾನು ಭಾರತದ ಸೇನೆಯಿಂದ ಈ ಬಗ್ಗೆ ವಿವರಗಳನ್ನು ಕೇಳಿದ್ದರೂ, ಭಾರತ ಯಾವುದೇ ವಿವರ ಕೊಡಲಿಲ್ಲ. ಇಸ್ರಾಯೇಲ್ ತನಗೆ ಪಾಕಿಸ್ತಾನದೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧಗಳಿಲ್ಲ ಎಂದೇಳಿ ನುಣುಚಿಕೊಂಡಿತು. ಜರ್ಮನಿಯೊಂದು ಪಾಕಿಸ್ತಾನ ಸರ್ಕಾರವನ್ನು ಸಂಪರ್ಕಿಸಿದರೂ, ಪಾಕಿಸ್ತಾನ ಅವರ ಪ್ರಶ್ನೆಗಳಿಗೆ ಉತ್ತರ ಕೊಡಲೇ ಇಲ್ಲ. ಇದು ಮುಂದೆ ಯುಪಿಎ ಸರ್ಕಾರ ಬಂದಾಗಲೂ ಬದಲಾಗಲೇ ಇಲ್ಲ. ಕೊನೆಗೆ ಒಂದು ಕಡೆಯಿಂದ ಇನ್ನೊಂದು ಕಡೆ, ಮತ್ತೊಂದು ಕಡೆ ಅಲೆದು ಸಾಕಾದ ಕ್ಯಾಪ್ಟನ್ ಕಾಲಿಯಾರ ತಂದೆ 2009ರಲ್ಲಿ ವಾಜಪೇಯಿ ಸರ್ಕಾರ ಹಾಗೂ ಯುಪಿಎ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಾ, “ನಾನಿವತ್ತು ಭಾರತೀಯ ಎಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತೆ. ನಮ್ಮ ದೇಶದ ನಾಯಕರಿಗೆ ಬೆನ್ನಹುರಿಯೇ ಇಲ್ಲ. ವಾಜಪೇಯಿ ಸರ್ಕಾರ ಎಲ್ಲ ಸಹಕಾರ ಕೊಡುತ್ತೇನೆಂದು ಹೇಳಿದರೂ, ಏನೂ ಮಾಡಲಿಲ್ಲ. ಅವರ ನಂತರ ಬಂದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವೂ ಏನೂ ಮಾಡಲಿಲ್ಲ,” ಎಂದು ಹೇಳಿದ್ದರು.

ವಾಜಪೇಯಿ ಕಾಲದಿಂದಲೂ ಸುಮ್ಮನಿದ್ದ ಬಿಜೆಪಿಗರು, ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಹವಣಿಸಿ ರಾಜೀವ್ ಚಂದ್ರಶೇಖರ್ ಮುಖಾಂತರ ಹೊಸ ಅಭಿಯಾನವನ್ನು ಆರಂಭಿಸಿದರು. ರಾಜೀವ್ ಚಂದ್ರಶೇಖರ್ ಅವರು ವಿಶ್ವಸಂಸ್ಥೆಯ ಒಂದು ಅಂಗಸಂಸ್ಥೆಯಲ್ಲಿ ಇದರ ಬಗ್ಗೆ ಒಂದು ಮನವಿಯನ್ನು ಕ್ಯಾಪ್ಟನ್ ಕಾಲೀಯಾರ ತಂದೆ ಎನ್.ಕೆ ಕಾಲಿಯಾರ ಮುಖಾಂತರ ಹಾಕಿದರು. 2014ರ ಲೋಕಸಭೆ ಚುನಾವಣೆಯ ಮೊದಲು ಬಿಜೆಪಿ, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇದರ ಬಗ್ಗೆ ಪುಂಖಾನುಪುಂಖವಾಗಿ ಮಾತಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಕ್ಯಾಪ್ಟನ್ ಕಾಲೀಯಾರಿಗೆ ನ್ಯಾಯ ಒದಗಿಸುವುದಾಗಿ ಹೇಳಿದರು.

ಈ ವರದಿ ಓದಿದ್ದೀರಾ?: ಭಾರತದ ಕೆಲ ಪ್ರದೇಶಗಳಿಗೆ ತೆರಳಬೇಡಿ ಎಂದ ಅಮೆರಿಕ; ಮೋದಿ ನೇತೃತ್ವದ ಭಾರತಕ್ಕೆ ಇದೆಂಥಾ ಅಪಮಾನ?

ಚುನಾವಣೆಯಲ್ಲಿ ಬಿಜೆಪಿ ಗೆದ್ದು, ನರೇಂದ್ರ ಮೋದಿ ಪ್ರಧಾನಿಯಾದರು. ಪ್ರಧಾನಿಯಾಗಿ ಕೆಲ ಸಮಯದಲ್ಲೇ, ಅಂದರೆ ಸೆಪ್ಟೆಂಬರ್ 2014ರಲ್ಲಿ ಎನ್‍.ಕೆ ಕಾಲಿಯಾ ಸುಪ್ರೀಂ ಕೋರ್ಟಿನಲ್ಲಿ ಇದರ ಬಗ್ಗೆ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ದಾಖಲಿಸಿದರು. ಇದನ್ನಾಲಿಸಿದ ಸುಪ್ರೀಮ್ ಕೋರ್ಟ್ ನರೇಂದ್ರ ಮೋದಿಯವರ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡಲು ಆರು ವಾರಗಳ ಕಾಲಾವಕಾಶ ಕೊಟ್ಟು, ‘ಭಾರತ ಸರ್ಕಾರ ಯಾಕೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿಲ್ಲ’ ಎಂದು ಕೇಳಿತು. ಇದಕ್ಕೆ ಉತ್ತರಿಸಿದ ಸರ್ಕಾರ ಹಿಂದಿನ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಕೋರ್ಟಿಗೆ ವರದಿ ಕೊಟ್ಟಿತ್ತಾದರೂ, ತಾನು ಮುಂದೇನು ಮಾಡುತ್ತೇನೆಂದು ಹೇಳಲಿಲ್ಲ.

ಚುನಾವಣೆಗೆ ಮೊದಲು ಎನ್.ಕೆ ಕಾಲಿಯಾರಿಗೆ ಸಂಪೂರ್ಣ ಸಹಕಾರ ಕೊಡುತ್ತೇನೆಂದು ಭರವಸೆಯಿತ್ತ ಪಕ್ಷ, ಕೋರ್ಟಿನಲ್ಲಿ ಅಂದು ಉಲ್ಟಾ ಹೊಡೆದು ಎನ್.ಕೆ ಕಾಲಿಯಾರ PILನ ಔಚಿತ್ಯವನ್ನೇ ಪ್ರಶ್ನಿಸಿತು. ವಿದೇಶಿ ರಾಷ್ಟ್ರವೊಂದರ ವಿಷಯದಲ್ಲಿ PIL ದಾಖಲಿಸಲು ಸಾಧ್ಯವಿಲ್ಲವೆಂದೂ, ವಿದೇಶಾಂಗ ನೀತಿ ಸರ್ಕಾರದ ಕೆಲಸವೆಂದು ಹೇಳಿ ಎನ್.ಕೆ ಕಾಲಿಯಾರ ಬೆನ್ನಿಗಿರಿಯಿತು. ಆದರೆ, ಎನ್‍.ಕೆ ಕಾಲಿಯಾ ಹಾಗೂ ಅವರ ಕುಟುಂಬ, ಇನ್ನೂ ಕೆಲ ನಿವೃತ್ತ ಸೈನಿಕರು ನರೇಂದ್ರ ಮೋದಿಯವರ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿದಾಗ ಫೀಲ್ಡಿಗಿಳಿದ ಅಂದಿನ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್, ಜೂನ್ 2015ರ ಆರಂಭದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಹೋಗುವ ಬಗ್ಗೆ ಯೋಚಿಸುವುದಾಗಿ ಹೇಳಿದರು. ಆದರೆ, ಯೂ-ಟರ್ನ್‌ಗೆ ಹೆಸರುವಾಸಿಯಾದ ಸರ್ಕಾರ ಎರಡು ತಿಂಗಳು ಕಳೆಯುತಲೇ, ಅಂದರೆ, ಆಗಸ್ಟ್ 2015ರ ಕೊನೆಯಲ್ಲಿ ಪಾಕಿಸ್ತಾನದ ಅನುಮತಿಯಿಲ್ಲದೇ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಹೋಗಲಾಗುವುದಿಲ್ಲ ಎಂದು ಹೇಳಿ ಕ್ಯಾಪ್ಟನ್ ಕಾಲೀಯಾರಿಗೆ ಕೊನೆಗೂ ದ್ರೋಹ ಬಗೆಯಿತು.

ಇವತ್ತು ನಾವು ಕಾರ್ಗಿಲ್ ವಿಜಯ್ ದಿವಸ್ ಆಚರಿಸಿ, ನಮ್ಮ ಐನೂರು ಸೈನಿಕರ ಸಾವಿಗೆ ಕಾರಣರಾದ ವಾಜಪೇಯಿ ಹಾಗೂ ಬಿಜೆಪಿಯ ಗುಣಗಾನ ಮಾಡುತ್ತಿದ್ದೇವೆ. ಎಂಥಾ ದೇಶಭಕ್ತಿ? ಆದರೆ, ಕ್ಯಾಪ್ಟನ್ ಕಾಲಿಯಾರ ತಂದೆ ಎನ್.ಕೆ ಕಾಲಿಯಾ ಇವತ್ತಿಗೂ ಒಬ್ಬಂಟಿಯಾಗಿ ತನ್ನ ಪುತ್ರನಿಗೆ ನ್ಯಾಯ ದೊರಕಿಸಿ ಕೊಡಲು ಹೋರಾಡುತ್ತಿದ್ದಾರೆ.

– ಅಲ್ಮೆಡಾ ಗ್ಲಾಡ್ಸನ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X