ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಿರ್ಮಾಣಗೊಂಡಿದ್ದ ಪರಶುರಾಮ ಥೀಮ್ ಪಾರ್ಕ್ನಲ್ಲಿ ಕಂಚಿನ ಪ್ರತಿಮೆಯಲ್ಲಿ ನಿರ್ಮಾಣದಲ್ಲಿ ಅಕ್ರಮದ ವಿಚಾರವು ಇಂದು ವಿಧಾನ ಪರಿಷತ್‌ನಲ್ಲಿ ಸದ್ದು ಮಾಡಿತು.
ಕಾರ್ಕಳದಲ್ಲಿ ಪರಶುರಾಮ ವಿಗ್ರಹ ದೋಷ ಪೂರಿತವಾಗಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಸ್ತಾಪ ಮಾಡಿದರು. ಅಲ್ಲದೆ, ತಪ್ಪಿತಸ್ಥ ಎಲ್ಲರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಹಿಂದಿನ ಸರ್ಕಾರದಲ್ಲಾದ ಎಡವಟ್ಟನ್ನು ನಮ್ಮ ಸರ್ಕಾರ ಬಯಲು ಮಾಡಿದೆ. ಪರಶುರಾಮ ಮೂರ್ತಿ ಹಗರಣದ ನಿಜವಾದ ಕಳ್ಳರನ್ನು ಪತ್ತೆ ಹಚ್ಚುತ್ತೇವೆ” ಎಂದು ತಿಳಿಸಿದರು.

“ಪ್ರತಿಮೆ ನಿರ್ಮಾಣದಲ್ಲಿನ ಅಕ್ರಮದ ಬಗ್ಗೆ ಸ್ಥಳೀಯರು ನನಗೆ ದೂರು ನೀಡಿದ್ದರು. ಪ್ರತಿಮೆ ಅರ್ಧ ಭಾಗ ಕಂಚು, ಇನ್ನರ್ಧ ಭಾಗ ಫೈಬರ್‌ನದ್ದಾಗಿತ್ತು. ಪರಶುರಾಮನ ಮೇಲೆ ಆ ಊರಿನ ಭಾಗದ ಜನರಿಗೆ ಗೌರವ, ನಂಬಿಕೆ ಇದೆ. ಆದರೆ ದೇವರ ಹೆಸರು ಹೇಳಿ ಹಣ ಕಬಳಿಸುವ ಕೆಲಸ ಆಗಿದೆ” ಎಂದು ಆರೋಪಿಸಿದರು.
ಈ ವೇಳೆ ಬಿಜೆಪಿ ಸದಸ್ಯೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ,” ನಿಮಗೆ ವಸ್ಥುಸ್ಥಿತಿ ಗೊತ್ತಿರುತ್ತದೆ. ನೀವು ಸಂಬಂಧಪಟ್ಟ ಇಲಾಖೆಯ ಮಂತ್ರಿಯಾಗಿದ್ದೀರಿ. ಅದನ್ನು ತನಿಖೆ ಮಾಡಿಸಿ. ಪೇಪರ್ನಲ್ಲಿ ಬಂದಿರುವುದನ್ನು ಹೇಳಬೇಡಿ” ಎಂದು ತಗಾದೆ ತೆಗೆದರು.
ಇದಕ್ಕೆ ಸ್ಪಷ್ಟೀಕರಣ ನೀಡಿದ ಸಚಿವ ತಂಗಡಗಿ, “ಇದು ನಮ್ಮ ಸರ್ಕಾರದಲ್ಲಿ ಆಗಿದ್ದಲ್ಲ, ಹಿಂದಿನ ಸರ್ಕಾರದಲ್ಲಿ ಆಗಿದ್ದು. ಈ ಬಗ್ಗೆ ಪೂರ್ಣ ಮಾಹಿತಿಯನ್ನು ತರಿಸಿಕೊಂಡಿದ್ದೇವೆ. ಅಕ್ರಮ ಆಗಿರುವ ಬಗ್ಗೆ ನಾನು ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದಾಗ ಸ್ಥಳೀಯರಾದ ಕೆ. ಸದಾಶಿವ ದೇವಾಡಿಗ, ಸೀತಾರಾಮ ಶೆಟ್ಟಿ ಸೇರಿದಂತೆ ಎಂಟರಿಂದ ಹತ್ತು ಮಂದಿ ದೂರು ಕೂಡ ನೀಡಿದ್ದಾರೆ. ಆ ಬಳಿಕ ನ್ಯಾ.ನಾಗಮೋಹನ ದಾಸ್ ಸಮಿತಿ ಸ್ಥಳಕ್ಕೆ ಭೇಟಿ ನೀಡಿತ್ತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ದೂರು ನೀಡಿದ್ದರು. ಹಾಗಾಗಿ, ನಮ್ಮ ಸರ್ಕಾರ ಪರಶುರಾಮ ಮೂರ್ತಿ ಹಗರಣದ ನಿಜವಾದ ಕಳ್ಳರು ಯಾರು ಎಂಬುದನ್ನು ಪತ್ತೆ ಹಚ್ಚಲು ಹೊರಟಿದೆ” ಎಂದು ತಿಳಿಸಿದರು.
“ಇದು ಬಿಜೆಪಿ ಅವಧಿಯಲ್ಲೇ ಆಗಿರುವುದರಿಂದ ಇದರ ಗುತ್ತಿಗೆದಾರ ಯಾರು? ಅದನ್ನು ಮಾಡಿಸಿದವರು ಯಾರು? ನಿರ್ಮಿತಿ ಕೇಂದ್ರದಿಂದ ಎಷ್ಟಾಗಿದೆ? ಎಂಬುದರ ಬಗ್ಗೆ ಇರುವ ಎಲ್ಲ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ. ಹಿಂದಿನ ಸರ್ಕಾರದಲ್ಲಿ ಆಗಿರುವುದರಿಂದ ಅದನ್ನು ನಾವು ಕ್ಲೀನ್ ಮಾಡುತ್ತಿದ್ದೇವೆ. ನ್ಯಾ.ನಾಗಮೋಹನ ದಾಸ್ ಸಮಿತಿಯ ವರದಿ ಆಧರಿಸಿ, ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಸಿಐಡಿ ಹೆಗಲಿಗೆ ತನಿಖೆ ನಡೆಸುವ ಜವಾಬ್ದಾರಿ ಕೊಟ್ಟಿದ್ದಾರೆ” ಎಂದು ತಿಳಿಸಿದರು.
ಬಿಜೆಪಿ ಸದಸ್ಯರಿಂದ ತಗಾದೆ
‘ದೇವರನ್ನು ತಲೆ ಮೇಲೆ ಹೊತ್ತುಕೊಂಡವರಿಂದ ಈ ಅಕ್ರಮ ಆಗಿದೆ’ ಎಂದು ಸಚಿವ ತಂಗಡಗಿ ನೀಡಿದ ಹೇಳಿಕೆಗೆ ತಗಾದೆ ತೆಗೆದ ಬಿಜೆಪಿ ಸದಸ್ಯರು, ಆಕ್ರೋಶ ಹೊರಹಾಕಿದರು.

ಜವಾಬ್ದಾರಿಯಿಂದ ಹೇಳಿಕೆ ಕೊಡಿ ಎಂದು ಬಿಜೆಪಿ ಸದಸ್ಯರು ಹೇಳಿದರು. ದೇವರ ತಲೆ ಮೇಲೆ ಹೊತ್ತು ಅಂದರೆ ಏನರ್ಥ ಎಂದು ಕೇಶವ ಪ್ರಸಾದ್ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ್ ಹೊರಟ್ಟಿ, ಎರಡೂ ಕಡೆಯ ಸದಸ್ಯರನ್ನ ಸಮಾಧಾನ ಮಾಡಿದರು.
ಪರಶುರಾಮ್ ಥೀಮ್ ಪಾರ್ಕ್ ಹಗರಣ ಸಿಐಡಿ ಹೆಗಲಿಗೆ
ಮಂಗಳೂರು, ಉಡುಪಿ ಭಾಗದವರು ಬಹಳ ದೈವ ಭಕ್ತರು. ಸಿಐಡಿ ತನಿಖೆಗೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ. ಸಿಐಡಿ ತನಿಖೆ ಮಾಡಿಸಿಯೇ ಮಾಡಿಸ್ತೇವೆ. ಕೆಳಗೆ ಕಂಚು, ಮೇಲೆ ಫೈಬರ್ ಇಟ್ಟ ಗುತ್ತಿಗೆದಾರರ ವಿಚಾರಣೆ ಮಾಡಲಾಗುತ್ತದೆ. ನಿಜವಾದ ಕಳ್ಳರಿಗೆ ಶಿಕ್ಷೆ ಕೊಡುತ್ತೇವೆ ಎಂದು ಸಚಿವ ತಂಗಡಗಿ ತಿಳಿಸಿದರು.