2025-26ನೇ ಸಾಲಿನ ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ತಿಳಿಸಿದ್ದಾರೆ. ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಲು ನಾನಾ ಯೋಜನೆಗಳನ್ನು ಮುಂದುವರೆಸಲು ಮತ್ತು ಹೊಸ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಬದ್ದವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕೆ ನೀಡಲಾಗಿರುವ ಅನುದಾನದ ಪ್ರಮುಖ ಅಂಶಗಳು;
- ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಹಂತದವರೆಗೂ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ಕರ್ನಾಟಕ ಪಬ್ಲಿಕ್ ಶಾಲೆಗಳ ಹೆಚ್ಚಳಕ್ಕೆ ಕ್ರಮ. ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವಿನೊಂದಿಗೆ 2,500 ಕೋಟಿ ರೂ. ವೆಚ್ಚದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ.
- ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಶಾಲೆಗಳಲ್ಲಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ನೀಡಲಾಗುತ್ತಿದ್ದ ಮೊಟ್ಟೆ/ಬಾಳೆಹಣ್ಣನ್ನು ವಾರದ ಆರು ದಿನವೂ ವಿಸ್ತರಣೆ. ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಹಯೋಗದೊಂದಿಗೆ 1,500 ಕೋಟಿ ರೂ. ವೆಚ್ಚದಲ್ಲಿ ಜಾರಿ.
- ಶಾಲಾ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಪ್ರಸ್ತುತ ವಾರದಲ್ಲಿ ಮೂರು ದಿನ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ಬಿಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ವಿತರಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ವಾರದ ಐದು ದಿನಗಳಿಗೆ ವಿಸ್ತರಣೆ. ಒಟ್ಟಾರೆ 100 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರದಿಂದ 25% ವೆಚ್ಚ ಪಾವತಿ.
- ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಗೌರವಧನವನ್ನು ತಲಾ 2,000 ರೂ. ಹೆಚ್ಚಳ.
- ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ನೀಡುತ್ತಿರುವ ಮಾಸಿಕ ಗೌರವಧನವನ್ನು ತಲಾ 1,000 ರೂ. ಹೆಚ್ಚಳ.
- ರಾಜ್ಯದ ಅರ್ಹ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಹಾಗೂ 50 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಣ.
- LKG ಯಿಂದ ದ್ವಿತೀಯ ಪಿ.ಯು.ಸಿ ವರೆಗಿನ ಎಲ್ಲ ತರಗತಿಗಳ ವಿದ್ಯಾರ್ಥಿಗಳು, ಆಯಾ ತರಗತಿಗೆ ತಕ್ಕಂತೆ ಕಲಿಕೆಯ ಮಟ್ಟ ಸುಧಾರಿಸಲು ʻಕಲಿಕಾ ಚಿಲುಮೆʼ ಕಾರ್ಯಕ್ರಮ. ಅದಕ್ಕಾಗಿ 5,000 ಶಾಲೆಗಳಿಗೆ ಒಟ್ಟು 70 ಕೋಟಿ ರೂ. ವೆಚ್ಚ.
- ʻಓದು ಕರ್ನಾಟಕʼ ಯೋಜನೆಯಡಿ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಕೌಶಲ್ಯಗಳನ್ನು ಅಭಿವೃದ್ಧಿಗೆ ಕ್ರಮ. 6 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ʻಮರುಸಿಂಚನʼ ಕಾರ್ಯಕ್ರಮ. AI ಆಧಾರಿತ ʻಕಲಿಕಾದೀಪʼ ಕಾರ್ಯಕ್ರಮ 2,000 ಶಾಲೆಗಳಿಗೆ ವಿಸ್ತರಣೆ. ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ವಿಧಾನದಲ್ಲಿ ನಾವೀನ್ಯತೆಗೆ ʻಜ್ಞಾನಸೇತುʼ ಕಾರ್ಯಕ್ರಮ.
- ʻವಿದ್ಯಾವಿಜೇತʼ ಕಾರ್ಯಕ್ರಮದಡಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 25,000 ವಿದ್ಯಾರ್ಥಿಗಳಿಗೆ CET/NEET/JEE ತರಬೇತಿ ನೀಡಲು 5 ಕೋಟಿ ರೂ. ಅನುದಾನ.
- ವಿದ್ಯಾರ್ಥಿಗಳಲ್ಲಿ ಮಾತೃಭಾಷೆಯ ಜೊತೆಗೆ ಆಂಗ್ಲಭಾಷೆಯ ಕೌಶಲ್ಯ ಬೆಳೆಸಲು ರಾಜ್ಯದ 4,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗವನ್ನು ಪ್ರಾರಂಭ.
- ರಾಜ್ಯದ 2,710 ಸರ್ಕಾರಿ ಪ್ರೌಢಶಾಲೆಗಳಲ್ಲಿ ಈಗಾಗಲೇ ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಇನ್ನೂ 500 ಶಾಲೆಗಳಿಗೆ ಸೌಲಭ್ಯ ವಿಸ್ತರಣೆ.
- ಸರ್ಕಾರಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ, ಶೌಚಾಲಯಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ 725 ಕೋಟಿ ರೂ. ಹಾಗೂ ಅಗತ್ಯ ಪೀಠೋಪಕರಣಗಳನ್ನು ಒದಗಿಸಲು 50 ಕೋಟಿ ರೂ. ಅನುದಾನ.
- ಮಧ್ಯಾಹ್ನ ಉಪಹಾರ ಯೋಜನೆಯಡಿ ರಾಜ್ಯದ 16,347 ಶಾಲೆಗಳ ಅಡುಗೆಮನೆ ಆಧುನೀಕರಣ ಮತ್ತು ಹೊಸ ಪಾತ್ರೆ ಪರಿಕರ ಖರೀದಿಗೆ 46 ಕೋಟಿ ರೂ..
- ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಅಡಿ 2೦೦ ಕೋಟಿ ರೂ. ವೆಚ್ಚದಲ್ಲಿ ಆಯ್ದ 50 ಶಾಲೆಗಳನ್ನು ಸುಸಜ್ಜಿತ ಕೆ.ಪಿ.ಎಸ್. ಶಾಲೆಗಳನ್ನಾಗಿ ಉನ್ನತೀಕರಣ.
- ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ. ಜೊತೆಗೆ ಶಿಕ್ಷಣ ಇಲಾಖೆಯಲ್ಲಿ ಇನ್ನೂ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತರ್ಕಬದ್ಧಗೊಳಿಸಿ 5,000 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ.
- ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಯುವಕರ ತರಬೇತಿ ಕೇಂದ್ರದ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಒದಗಿಸಲಾಗುವುದು.