ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬಜೆಟ್‌ನಲ್ಲಿ ವೃತ್ತಿ ತೆರಿಗೆಯನ್ನು ಏರಿಸಲಾಗಿದೆ. 200 ರೂ. ಇದ್ದ ವೃತ್ತಿ ತೆರಿಗೆ 300 ರೂ.ಗೆ ಏರಿಕೆಯಾಗಿದೆ.
ತೆರಿಗೆ ಅಧಿನಿಯಮದ ಅಡಿಯಲ್ಲಿ ಸಂಬಳ ಅಥವಾ ಮಜೂರಿ ಪಡೆಯುವ ವ್ಯಕ್ತಿಗಳು ವಾರ್ಷಿಕವಾಗಿ ವೃತ್ತಿ ತೆರಿಗೆ ಪಾವತಿಸಬೇಕು. ಆ ತೆರಿಗೆಯನ್ನು 200 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲು ತೆರಿಗೆ ಅಧಿನಿಯಮಕ್ಕೆ ತಿದ್ದುಪಡಿ ತರಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಸ್ತುತ ಆರ್ಥಿಕ ವರ್ಷದ ಬಜೆಟ್ 4,09,000 ಕೋಟಿ ರೂ. ಆಗಿದೆ. ಇದಕ್ಕಾಗಿ, ಒಟ್ಟು 2,92,477 ಕೋಟಿ ರೂ. ರಾಜಸ್ವ ಸ್ವೀಕೃತಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ರಾಜಸ್ವ ಸ್ವೀಕೃತಿಯಲ್ಲಿ 2,08,100 ಕೋಟಿ ರೂ. ಸ್ವಂತ ತೆರಿಗೆ ರಾಜಸ್ವ, 16,500 ಕೋಟಿ ರೂ. ತೆರಿಗೆಯೇತರ ರಾಜಸ್ವ, ಕೇಂದ್ರ ಸರ್ಕಾರದಿಂದ ಸ್ವೀಕೃತಿ 67,877 ಕೋಟಿ ರೂ. ಇವೆ. ಜೊತೆಗೆ, ಒಟ್ಟು 1,16,000 ಕೋಟಿ ರೂ. ಸಾಲ ಮತ್ತು 170 ಕೋಟಿ ರೂ.ಗಳ ಋಣೇತರ ಬಂಡವಾಳ ಸ್ವೀಕೃತಿಗೆ ಸರ್ಕಾರ ಮುಂದಾಗಿದೆ.