ತೆರಿಗೆ ಪಾಲು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರವು ತಾರತಮ್ಯ ಮಾಡುತ್ತಿದೆ. 15ನೇ ಹಣಕಾಸಿನ ಆಯೋಗದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಅದನ್ನು ಕೇಂದ್ರ ಸರ್ಕಾರ ಸರಿಪಡಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು. “ರಾಜ್ಯಗಳ ಏಕೀಕರಣವಾಗಿ 68 ವರ್ಷಗಳಾಗಿವೆ. 1973ರವರೆಗೆ ರಾಜ್ಯ ಕರ್ನಾಟಕ ಆಗಿರಲಿಲ್ಲ, ಮೈಸೂರು ರಾಜ್ಯ ಆಗಿತ್ತು. 1973 ನವೆಂಬರ್ 1 ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಅಂತ ಹೆಸರು ಇಡಲಾಯಿತು. ಕರ್ನಾಟಕವೆಂದು ನಾಮಕರಣವಾಗಿ 51 ವರ್ಷ ತುಂಬುತ್ತಿದೆ. ಮರುನಾಮಕರಣವಾಗಿ 50 ವರ್ಷ ಆದಾಗ ಬಿಜೆಪಿ ಸರ್ಕಾರ ರಾಜ್ಯದಲ್ಲಿತ್ತು. ಅವರು 50ನೇ ವರ್ಷದ ಆಚರಣೆ ಮಾಡಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇಡೀ ವರ್ಷ ಸಂಭ್ರಮಾಚರಣೆ ಮಾಡಿದ್ದೇವೆ” ಎಂದಿದ್ದಾರೆ.
“ನಾವೆಲ್ಲರೂ ವ್ಯವಹಾರದಲ್ಲಿ ಕನ್ನಡ ಬಳಕೆ ಜೊತೆಗೆ, ಎಲ್ಲರೊಂದಿಗೂ ಕನ್ನಡದಲ್ಲೇ ಮಾತಾಡುವ ಶಪಥ ಮಾಡಬೇಕು. ಬೇರೆ ಭಾಷಿಕರಿಗೂ ಕನ್ನಡ ಕಲಿಸಬೇಕು. ನಾವು ನಮ್ಮ ಭಾಷೆಯನ್ನು ಯಾವುದೇ ಕಾರಣಕ್ಕೂ ಬಲಿಕೊಡುವಷ್ಟು ಉದಾರಿಗಳಾಗಬಾರದು. ಕನ್ನಡ ಅಭಿಮಾನ ಬಿಟ್ಟುಕೊಡಬಾರದು. ಜೊತೆಗೆ, ಅಭಿಮಾನ ದುರಾಭಿಮಾನವಾಗದೆಂಬ ಎಚ್ಚರಿಕೆಯೂ ಇರಬೇಕು. ಕೆಲವು ರಾಜ್ಯಗಳಲ್ಲಿ ಭಾಷಾ ದುರಾಭಿಮಾನ ಇದೆ. ನಮ್ಮ ರಾಜ್ಯದಲ್ಲಿ ಅಭಿಮಾನ ಇದೆ. ಅಭಿಮಾನ ಇದ್ದರೆ ಮಾತ್ರ ಕನ್ನಡ ಉಳಿಸಲು ಬೆಳೆಸಲು ಸಾಧ್ಯ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?; ಕರ್ನಾಟಕಕ್ಕೆ ತೆರಿಗೆ ಅನ್ಯಾಯ | ಕೇಂದ್ರ ಸಮರ್ಥಿಸುವ ಆರ್ ಅಶೋಕ್, ನಾಚಿಕೆ ಆಗಲ್ವಾ?
“ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಆಗುತ್ತಿದೆ. ಮಹಾರಾಷ್ಟ್ರ ಬಿಟ್ಟರೆ ಅತೀ ಹೆಚ್ಚು ತೆರಿಗೆ ಕೊಡುವ ರಾಜ್ಯ ಕರ್ನಾಟಕ. ನಾವು 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಕೊಟ್ಟರೂ ವಾಪಸ್ ಪಡೆಯುತ್ತಿರೋದು ಕೇವಲ 50-60 ಸಾವಿರ ಕೋಟಿ ರೂ. ಮಾತ್ರ. ಅಂದರೆ, 1 ರೂ.ನಲ್ಲಿ 14-15 ಪೈಸೆ ಮಾತ್ರ ನಮಗೆ ವಾಪಸ್ ಕೊಡುತ್ತಿದ್ದಾರೆ. ನಾವು ಮುಂದುವರೆದ ರಾಜ್ಯ ಎಂದು ತೆರಿಗೆ ಪಾಲಿನಲ್ಲಿ ಅನ್ಯಾಯ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.