ವಾಲ್ಮೀಕಿ ಪ್ರಕರಣದ ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ಈವರೆಗೆ ನಿರ್ದಿಷ್ಟ ಅಕ್ರಮಗಳ ಬಗ್ಗೆ ಮಾತ್ರ ಸಿಬಿಐ ತನಿಖೆ ನಡೆಸುತ್ತಿತ್ತು, ಆದರೆ ಇದೀಗ ಹೈಕೋರ್ಟ್ ಇಡೀ ಪ್ರಕರಣದ ಸಿಬಿಐ ತನಿಖೆಗೆ ಆದೇಶಿಸಿದೆ.
ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಎಲ್ಲಾ ತನಿಖಾ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ಹೈಕೋರ್ಟ್ ವಿಶೇಷ ತನಿಖಾ ತಂಡ(ಎಸ್‌ಐಟಿ) ಗೆ ನಿರ್ದೇಶಿಸಿದೆ. ಹಾಗೆಯೇ ವಿಸ್ತೃತವಾದ ಸ್ಥಿತಿಗತಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚಿಸಿದೆ.
ಇದನ್ನು ಓದಿದ್ದೀರಾ? ವಾಲ್ಮೀಕಿ ನಿಗಮ ಹಗರಣ | ಮಾಜಿ ಸಚಿವ ನಾಗೇಂದ್ರಗೆ ಜಾಮೀನು
ವಾಲ್ಮೀಕಿ ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಗೆ ಜೂನ್‌ನಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಬಳ್ಳಾರಿಯ ಕಾಂಗ್ರೆಸ್ ಸಂಸದ ಇ. ತುಕಾರಾಂ ಮತ್ತು ರಾಜ್ಯದ ಇತರೆ ಮೂವರು ಶಾಸಕರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿತ್ತು.
ಶಿವಮೊಗ್ಗ ಜಿಲ್ಲೆಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಪಿ ಅವರು ತಮ್ಮ ನಿವಾಸದಲ್ಲಿ 2024ರ ಮೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ನಂತರ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬೃಹತ್ ಅಕ್ರಮ ಬೆಳಕಿಗೆ ಬಂದಿದೆ. ಚಂದ್ರಶೇಖರ್ ಅವರು ತಮ್ಮ ಡೆತ್ ನೋಟ್‌ನಲ್ಲಿ ನಿಗಮದಲ್ಲಿ ನಡೆದಿರುವ ಗಂಭೀರ ಆರ್ಥಿಕ ಅವ್ಯವಹಾರಗಳ ಬಗ್ಗೆ ಆರೋಪಿಸಿದ್ದರು. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ.
