ಕೇರಳದ ರೀತಿಯಲ್ಲಿಯೇ ಕರ್ನಾಟಕವನ್ನು ಭಯೋತ್ಪಾದಕರ ಅಡಗುತಾಣವನ್ನಾಗಿ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್‌ನ ಓಟ್ ಬ್ಯಾಂಕ್ ರಾಜಕಾರಣ ಹಾಗೂ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ದೆಹಲಿಯಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಭಯೋತ್ಪಾದಕರನ್ನು ರಕ್ಷಣೆ ಮಾಡ್ತಿದ್ದಾರೆ. ಕರ್ನಾಟಕ ರಾಜ್ಯ ಭಯೋತ್ಪಾದಕರಿಗೆ ಅಡಗುತಾಣವಾಗುತ್ತಿದೆ. ಈ ಹಿಂದೆ ಕೇರಳವು ಭಯೋತ್ಪಾದಕರಿಗೆ ಅಡಗುತಾಣವಾಗುತ್ತಿತ್ತು. ಈಗ ಕರ್ನಾಟಕವನ್ನು ಆ ರೀತಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆಲ್ಲ ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳೇ ಉದಾಹರಣೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿಯ ಹಿಂಡಲಗಾ ಜೈಲಿನಿಂದಲೇ ಜಯೇಶ್ ಪೂಜಾರಿ ಎನ್ನುವ ವ್ಯಕ್ತಿ ಕೇಂದ್ರದ ಮಂತ್ರಿ ನಿತಿನ್ ಗಡ್ಕರಿಯವರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಾನೆ. ಈ ಜಾಲವನ್ನು ತನಿಖೆ ಮಾಡಿದಾಗ ಜಯೇಶ್ ಪೂಜಾರಿಯನ್ನು ಅಫ್ಸರ್ ಪಾಷಾ ಅನ್ನುವ ವ್ಯಕ್ತಿ ಈತನನ್ನು ಜೈಲಿನಲ್ಲಿಯೇ ಮತಾಂತರಿಸಿ, ಶಾಹೀರ್ ಆಗಿ ಮಾಡಿದ್ದಾನೆ. ಕಾರಾಗೃಹಗಳಲ್ಲಿರುವ ಅಮಾಯಕ ಹಿಂದೂ ಯುವಕರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಯುವಕರು ಐಸಿಸ್ ಸೇರಿ ಬೇರೆ ಸಂಘಟನೆಗಳ ಜತೆ ಸಂಪರ್ಕ ಹೊಂದುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಮಂಗಳೂರು ಕುಕ್ಕರ್ ಬ್ಲಾಸ್ಟ್ ಘಟನೆಯಿಂದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡಿ, ಬದುಕಿ ಉಳಿದಿದ್ದಾರೆ. ಆದರೆ ಅವರು ಅಂಗವಿಕಲರಾಗಿ ಬದುಕುವ ಸ್ಥಿತಿ ಅವರಿಗೆ ಬಂದಿದೆ. ಕುಕ್ಕರ್ ಬಾಂಬ್ ಸಾಗಿಸುತ್ತಿದ್ದ ಆರೋಪಿ ಶಾರೂಕ್ ಇಂದು ಜೈಲಲ್ಲಿದ್ಧಾನೆ. ಹಾಗಾಗಿ ಮಂಗಳೂರಿನ ಘಟನೆಗೆ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಬಂಧವಿರುವುದು ಆವಾಗಲೇ ಹೇಳಿದ್ದೆ. ಆದರೆ ಕಾಂಗ್ರೆಸ್‌ನವರು ನಮ್ಮ ಬ್ರದರ್ಸ್ ಎಂದು ಹೇಳುತ್ತಾ ಓಟ್ ಬ್ಯಾಂಕ್ ರಾಜಕಾರಣ ಮಾಡಿತು. ಚುನಾವಣೆಗೋಸ್ಕರ ಬಿಜೆಪಿ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಆಗ ಆರೋಪಿಸಿದ್ದರು. ಈಗ ನಡೆಯುತ್ತಿರುವ ಬೆಳವಣಿಗೆಗಳು ಏನು ಸೂಚಿಸುತ್ತವೆ ಎಂದು ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಇಂದು ನಾವ್ಯಾರೂ ಸುರಕ್ಷಿತರಾಗಿಲ್ಲ. ಭಯೋತ್ಪಾದನಾ ಚಟುವಟಿಕೆಗಳು ಜೈಲಿನಿಂದಲೇ ನಡೆಯುತ್ತಿರುವುದು ಆಘಾತ ಉಂಟು ಮಾಡಿದೆ. ಇದಕ್ಕೆಲ್ಲ ಸಿದ್ದರಾಮಯ್ಯನವರ ಓಲೈಕೆ ರಾಜಕಾರಣ ಕಾರಣ. ಆದ್ದರಿಂದ ಕಾಂಗ್ರೆಸ್‌ನವರು ಓಲೈಕೆ ರಾಜಕಾರಣ ಬಿಟ್ಟು, ಇದನ್ನು ತಡೆಯಬೇಕಿದೆ. ದೇಶದ ಹಾಗೂ ಕರ್ನಾಟಕದ ರಕ್ಷಣೆಯ ಹಿತದೃಷ್ಟಿಯ ಬಗ್ಗೆ ಯೋಚನೆ ಮಾಡಬೇಕು. ಈ ಎಲ್ಲ ಪ್ರಕರಣವನ್ನು ಎನ್‌ಐಎಯ ಮೂಲಕ ತನಿಖೆ ನಡೆಸಲು ನೀಡುವಂತೆ ಆಗ್ರಹ ಮಾಡುತ್ತೇನೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.