ತೆಲಂಗಾಣ ಸರ್ಕಾರವು ಕರ್ನಾಟಕಕ್ಕೆ ಭತ್ತ ಕೊಡುವುದಾಗಿ ಮತ್ತು ಛತ್ತೀಸಗಢ ಸರ್ಕಾರ ಕರ್ನಾಟಕಕ್ಕೆ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುವುದಾಗಿ ಹೇಳಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ಸರ್ಕಾರವೂ ನವೆಂಬರ್ ತಿಂಗಳಿನಿಂದ ಕೊಡುವುದಾಗಿ ತಿಳಿಸಿದೆ. ಎನ್‌ಸಿಸಿಎಫ್ ಕೇಂದ್ರಿಯ ಭಂಡಾರ, ನಫೆಡ್ನಿಂದ ಕೊಟೇಷನ್ ಕೇಳಿದ್ದೇವೆ. ಅವರು ಕೊಟ್ಟ ಬಳಿಕ ದರ, ಗುಣಮಟ್ಟ, ಪ್ರಮಾಣ ನೋಡಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಜನರಿಗೆ 10 ಕೆ.ಜಿ ಅಕ್ಕಿ ನೀಡಲು ಬೇರೆ ರಾಜ್ಯಗಳ ಸಂಪರ್ಕ ಮಾಡಲಾಗುತ್ತಿದೆ. ರಾಜ್ಯಕ್ಕೆ 2 ಲಕ್ಷದ 29 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕು. ಪಂಜಾಬ್ನವರ ಬಳಿ ಸ್ಟಾಕ್ ಇಲ್ಲ, ಆಂಧ್ರಪ್ರದೇಶದವರ ಬಳಿಯೂ ಅಕ್ಕಿ ಸಿಗುತ್ತಿಲ್ಲ. ಹಾಗಾಗಿ ಸರ್ಕಾರಿ ಸಂಸ್ಥೆಗಳ ಕೊಟೇಷನ್ ಕರೆದಿದ್ದೇವೆ. ದರ ಎಷ್ಟು ಏನು ಎನ್ನುವುದರ ಬಗ್ಗೆ ಚರ್ಚಿಸಲು ಶನಿವಾರ ಸಭೆ ಕರೆದಿದ್ದೇವೆ. ರಾಗಿ, ಜೋಗಿ ನಮ್ಮ ಬಳಿ ಇದೆ. ಆದರೆ, ಇವು ಎರಡು ತಿಂಗಳಿಗೆ ಮಾತ್ರ ಸಾಕಾಗುತ್ತದೆ ಎಂದು ಹೇಳಿದರು.
ಬಡವರ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದಿಂದ ತೊಂದರೆ
ಬಡವರ ಕಾರ್ಯಕ್ರಮಕ್ಕೆ ತೊಂದರೆ ನೀಡಬೇಕೆಂದು ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಅವರ ಬಳಿ ಲಕ್ಷಗಟ್ಟಲೆ ಟನ್ ಅಕ್ಕಿಯಿದೆ. ಖಾಸಗಿಯವರಿಗೆ ಹರಾಜು ಮಾಡುತ್ತಾರೆ. ಆದರೆ, ರಾಜ್ಯಗಳಿಗೆ ನೀಡುವುದಿಲ್ಲ ಎನ್ನುತ್ತಾರೆ. ಹಣ ನೀಡಿದರೂ ಕೊಡುವುದಿಲ್ಲ. 36.70 ರೂ. ಗಳ ವೆಚ್ಚದಲ್ಲಿ 1 ಕೆಜಿ ಅಕ್ಕಿ ಪಡೆಯಬಹುದು. ದ್ವೇಷದ ರಾಜಕಾರಣ ಮಾಡುವವರನ್ನು ಬಡವರ ವಿರೋಧಿ ಎನ್ನಬೇಕು ಎಂದರು.
ಯಡಿಯೂರಪ್ಪ ಅವರಿಗೆ ಯಾವ ನೈತಿಕತೆ ಇದೆ?
ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ನೀಡಿದ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಪ್ರತಿಭಟನೆ ಮಾಡಲು ಸ್ವಾತಂತ್ರ್ಯ ಇದೆ. ಆದರೆ, ಪ್ರತಿಭಟಿಸಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಈಗಾಗಲೇ ನಾವು ಒಂದು ಯೋಜನೆಯನ್ನು ಜಾರಿ ಮಾಡಿದ್ದೇವೆ. ಜು. 1ರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಲಿದೆ. ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರಿಂದ ಅನ್ನಭಾಗ್ಯ ವಿಳಂಬವಾಗುತ್ತಿದೆ ಎಂದರು.
ಕೃಷಿ ಇಲಾಖೆ ಸರ್ವ ಸನ್ನದ್ದ
ಮಳೆಯಿಂದಾಗುವ ಸಮಸ್ಯೆ ಎದುರಿಸುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕೆ ಇದೆ. ರಾಜ್ಯದಲ್ಲಿ ಕೆಲವೆಡೆ ಬಿತ್ತನೆ ಶುರುವಾಗಿದೆ, ಕೆಲವು ಕಡೆಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಮುಂಗಾರು ಮಳೆ ಹಿನ್ನೆಲೆ ಮುಂಜಾಗೃತಾ ಕ್ರಮ ಹಾಗೂ ಬಿತ್ತನೆಗೆ ಗುಣಮಟ್ಟದ ಬೀಜ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ಯಾವಾಗ ಬಂದರೂ ಬಿತ್ತನೆ ಮಾಡಲು ತಯಾರಾಗಿದ್ದೇವೆ. ಕೃಷಿ ಇಲಾಖೆ ಬಿತ್ತನೆ ಬೀಜ, ಗೊಬ್ಬರ ಹಾಗೂ ಔಷಧಗಳನ್ನು ಸಂಗ್ರಹಿಸಿ ಸರ್ವಸನ್ನದ್ದವಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಸದ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ: ಮಾಜಿ ಸಚಿವ ಆರ್ ಅಶೋಕ
ಬಜೆಟ್ ನಂತರ ಪರಿಶೀಲನೆ
ಸಣ್ಣ ಕೈಗಾರಿಕೆಗಳು ಮತ್ತು ಕಾಸಿಯಾ ಪ್ರತಿನಿಧಿಗಳೊಂದಿಗೆ ನಿನ್ನೆ ನಡೆದ ಚರ್ಚೆಯಲ್ಲಿ ಅವರು ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ. ಬಜೆಟ್ ಮಂಡನೆಯ ನಂತರ ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಲಾಗಿದೆ ಎಂದರು.
ಕೈಗಾರಿಕೆಗಳಿಗೆ ಒಂಭತ್ತು ತಿಂಗಳ ವಿದ್ಯುತ್ ತೆರಿಗೆ ವಿಧಿಸಲಾಗಿದೆ. ಇದರಿಂದ ತಮಗೆ ಹೊರೆಯಾಗಿದೆ ಎಂದು ಕೈಗಾರಿಕೋದ್ಯಮಿಗಳು ತಿಳಿಸಿದ್ದಾರೆ. ದರ ಪರಿಷ್ಕರಣೆ ನಮ್ಮ ಸರ್ಕಾರದ ಅವಧಿಯಲ್ಲಿ ಆಗಿದ್ದಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದು. ದರ ಪರಿಷ್ಕರಣೆಯನ್ನು ಪ್ರತಿ ವರ್ಷ ಕೆ.ಇ.ಆರ್.ಸಿ ಮಾಡುತ್ತದೆ. ದರ ಏರಿಕೆಗೂ ನಮ್ಮ ಸರ್ಕಾರಕ್ಕೂ ಸಂಬಂಧವಿಲ್ಲ. ನಾವೂ ಅವರಿಗೆ ಎಷ್ಟು ಮಾಡಬೇಕೆಂದು ಮನವಿ ಸಲ್ಲಿಸಿರುತ್ತೇವೆ. ಅದೊಂದು ಸ್ವಾಯತ್ತ ಸಂಸ್ಥೆಯಾಗಿದೆ ಎಂದು ಹೇಳಿದರು.