- ಜಾತಿ ಗಣತಿ ವರದಿ ಜಾರಿಗೆ ಸಾಲು ಸಾಲು ರಾಜಕೀಯ ನಾಯಕರ ಆಗ್ರಹ
- ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿ: ಸಿಟಿ ರವಿ ಒತ್ತಾಯ
ಬಿಹಾರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ಕೂಡ ರಾಜ್ಯದಲ್ಲಿ ಈಗಾಗಲೇ ಸಿದ್ದವಾಗಿರುವ ಹಿಂದುಳಿದ ವರ್ಗಗಳ ಜಾತಿ ವರದಿಯನ್ನ ಬಹಿರಂಗ ಪಡಿಸುವ ದಿಟ್ಟತನ ತೋರಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಬಿಹಾರದಲ್ಲಿ ನಡೆಸಲಾಗಿದ್ದ ಜಾತಿ ಗಣತಿಯ ವರದಿ ಅಲ್ಲಿನ ಸರ್ಕಾರಕ್ಕೆ ಅ. 3ರಂದು ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ನಡೆದಿರುವ ಜಾತಿ ಗಣತಿಯ ವರದಿ ಬೇಗನೆ ಜಾರಿಗೆ ತರಬೇಕು ಎಂದು ಸಾಲು ಸಾಲು ರಾಜಕೀಯ ನಾಯಕರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
ಈ ಕುರಿತು ಬಿ ಕೆ ಹರಿಪ್ರಸಾದ್ ಟ್ವೀಟ್ ಮಾಡಿ, “ಜಾತಿ ಗಣತಿ ಬಹಿರಂಗ ಪಡಿಸುವ ಕುರಿತು ಹಾಗೂ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ನಾಯಕ ರಾಹುಲ್ ಗಾಂಧಿ ಅವರು ಧ್ವನಿ ಎತ್ತಿದ್ದಾರೆ. “ಇಂಡಿಯಾ” ಮೈತ್ರಿ ಕೂಟದ ಆಡಳಿತವಿರುವ ಬಿಹಾರ ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಿದ ಸರ್ಕಾರದ ಐತಿಹಾಸಿಕ ನಡೆ ಅಭಿನಂದನೀಯ. ಹಿಂದುಳಿದ, ಶೋಷಿತವೂ ಸೇರಿದಂತೆ ಎಲ್ಲ ವರ್ಗಗಳ ಉನ್ನತಿ ಹಾಗೂ ಅಭಿವೃದ್ಧಿಗೆ ಜಾತಿಗಣತಿ ವರದಿ ಸಹಾಯ ಮಾಡುತ್ತದೆ ಎಂಬ ವೈಜ್ಞಾನಿಕ ಧೋರಣೆ ಕಾಂಗ್ರೆಸ್ ಪಕ್ಷದ್ದಾಗಿದೆ” ಎಂದಿದ್ದಾರೆ.
ಗೃಹ ಸಚಿವ ಡಾ. ಜಿ.ಪರಮೇಶ್ವರ್ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಬಿಹಾರದಲ್ಲಿ ಜಾತಿ ಗಣತಿ ವರದಿ ಪ್ರಕಟವಾದ ಬೆನ್ನಲ್ಲೆ ಇದೀಗ ಕರ್ನಾಟಕ ರಾಜ್ಯದಲ್ಲೂ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯ ಕೇಳಿ ಬಂದಿದೆ. ಜಾತಿ ಗಣತಿ ವರದಿಯು ಬೇಗನೇ ಸಲ್ಲಿಕೆಯಾದರೆ ಒಳ್ಳೆಯದು. ಅದರಿಂದ ಅನೇಕ ಸಮುದಾಯಗಳಿಗೆ ಒಳ್ಳೆಯದಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಹಾರದ ಜಾತಿ ಜನಗಣತಿ- ಕಮಂಡಲ ರಾಜಕಾರಣ ಕಕ್ಕಾಬಿಕ್ಕಿ
“ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, “ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಸಿದ ಬಳಿಕ ಚರ್ಚೆ ಮಾಡೋಣ ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಜಾತಿ ಗಣತಿ ನಡೆಸಲು ಅಂದಾಜು 100 ಕೋಟಿ ರೂ.ಗೆ ಹೆಚ್ಚು ಖರ್ಚಾಗಿದೆ. ಇಷ್ಟು ಹಣ ಖರ್ಚು ಮಾಡಿ ವರದಿ ಬಿಡುಗಡೆ ಮಾಡದಿದ್ದರೆ ವ್ಯರ್ಥ ಅಲ್ಲವಾ? ಜಾತಿಗಣತಿ ಬಿಡುಗಡೆಯಾದ್ರೆ ಒಳ್ಳೆಯದು, ರಾಜ್ಯದಲ್ಲಿ ಮೀಸಲಾತಿ ಕೂಗು ಕೇಳಿಬಂದಿದೆ. ಸರ್ಕಾರ ದುಂದುವೆಚ್ಚಕ್ಕಾಗಿ ಜಾತಿ ಗಣತಿ ಮಾಡಿಲ್ಲ” ಎಂದರು.
ಸಿಟಿ ರವಿ ಪ್ರತಿಕ್ರಿಯಿಸಿದ್ದು, “ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿ. ಪ್ರಧಾನಿ ನರೇಂದ್ರ ಮೋದಿ ಅತೀ ಹಿಂದುಳಿದ ವರ್ಗಕ್ಕೆ ಸೇರಿದವರು. ಬಿಜೆಪಿ ಸರ್ಕಾರದಲ್ಲಿ ಅತೀ ಹೆಚ್ಚು ಹಿಂದುಳಿದ ಶಾಸಕರು ಹಾಗೂ ಸಂಸದರು ಇರುವುದು” ಎಂದು ಹೇಳಿದ್ದಾರೆ.