- ಸುಪ್ರೀಂ ಕೋರ್ಟ್‌ನಲಿ ಮೇಕೆದಾಟು ಬಗ್ಗೆ ಬಲವಾಗಿ ವಾದ ಮಂಡನೆಗೆ ಸೂಚನೆ
- ನೀರು ಬಿಡುವ ವಿಚಾರವಾಗಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ನಿರ್ಧಾರ
ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ಅದೇಶಿಸಿರುವ ಹಿನ್ನೆಲೆಯಲ್ಲಿ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ ಕೆ ಶಿವಕುಮಾರ್ ಅವರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಮಾಜಿ ಅಡ್ವೊಕೇಟ್ ಜನರಲ್‌ಗಳ ಜತೆ ಸುದೀರ್ಘ ಚರ್ಚೆ ನಡೆಸಿದರು.
ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿ, “ಕಾನೂನು ತಜ್ಞರು ತಮ್ಮ ಅನುಭವದ ಆಧಾರದ ಮೇಲೆ ಕೆಲವು ಅಭಿಪ್ರಾಯ ಮತ್ತು ಸಲಹೆ ಕೊಟ್ಟಿದ್ದಾರೆ. ಅವೆಲ್ಲವುಗಳನ್ನು ಇಲ್ಲಿ ಚರ್ಚಿಸಲು ಆಗುವುದಿಲ್ಲ. ಮುಖ್ಯವಾಗಿ ಅಂತಾರಾಜ್ಯ ಜಲವಿವಾದಗಳಿಗೆ ಸಂಬಂಧಿಸಿದಂತೆ ‘ಸಲಹಾ ಸಮಿತಿ ರಚನೆ’ ಮಾಡುವುದು ಒಳ್ಳೆಯದು” ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ” ಎಂದರು.
ಹಾಗೆಯೇ “ಮೇಕೆದಾಟು ಯೋಜನೆ ಜಾರಿಗೆ ಸುಪ್ರೀಂ ಕೋರ್ಟ್ ಮುಂದೆ ಬಲವಾಗಿ ವಾದ ಮಾಡಿ ನ್ಯಾಯ ಗೆಲ್ಲಬೇಕಿದೆ. ಎರಡು ವಾರಗಳ ನಂತರ ಸುಪ್ರೀಂ ಕೋರ್ಟ್ ಮೇಕೆದಾಟು ವಿಚಾರ ಎತ್ತಿಕೊಳ್ಳಲಿದೆ. ಕಾವೇರಿ ವಿವಾದಕ್ಕೆ ಮೇಕೆದಾಟು ಒಂದೇ ಪರಿಹಾರ. ತಮಿಳುನಾಡು ರಾಜಕೀಯಕ್ಕಾಗಿ ವಿರೋಧಿಸುತ್ತಿದೆ. ಮೇಕೆದಾಟು ಅನುಕೂಲಗಳ ಬಗ್ಗೆ ಸುಪ್ರೀಂ ಕೋರ್ಟ್ ಮುಂದೆ ಫೋರ್ಸ್‌ಫುಲ್ ಆಗಿ ವಾದ ಮಾಡಲು ತಜ್ಞರು ಸೂಚಿಸಿದ್ದಾರೆ” ಎಂದು ತಿಳಿಸಿದರು.
“ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂ ಕೋರ್ಟ್ ಮುಂದೆ ನಾಳೆಯೇ ನಮ್ಮ ಬಳಿ ನೀರು ಇಲ್ಲ, ನೀರು ಬಿಡಲು ಸಾಧ್ಯವಿಲ್ಲ ಎಂದು ಮರುಪರಿಶೀಲನಾ ಅರ್ಜಿ ಹಾಕಲಾಗುವುದು. ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುವ ಬಗ್ಗೆ ಎರಡೂ ಸಮಿತಿಗಳ ಮುಂದೆ ನಮ್ಮಲ್ಲಿ ನೀರು ಇಲ್ಲ, ಹಾಗಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಗಿದೆ. ಹಳೇ ಬಾಕಿ ಸರಿದೂಗಿಸಬೇಕು ಎಂದು 3000 ಕ್ಯೂಸೆಕ್ ನೀಡಲು ಸೂಚಿಸಿದ್ದಾರೆ. ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದೆ ಮರುಪರಿಶೀಲನಾ ಅರ್ಜಿ ಹಾಕುವಂತೆಯೂ ಸೂಚಿಸಿದ್ದಾರೆ” ಎಂದರು.
“ಮೇಕೆದಾಟು ಯೋಜನೆಯ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಸ್ತಾಪ ಮಾಡಬೇಕು. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆ ಇಲ್ಲ. ಹಾಗಾಗಿ ತೀವ್ರವಾಗಿ ಇದನ್ನು ಮಂಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಮೇಕೆದಾಟು ಬ್ಯಾಲೆನ್ಸಿಂಗ್ ಜಲಾಶಯವಾಗಿ 67 ಟಿಎಂಸಿ ನೀರು ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಲಿದೆ. ವಿದ್ಯುತ್ ಹಾಗೂ ಕುಡಿಯುವ ನೀರಿಗೆ ಅದನ್ನು ಬಳಸಲಾಗುವುದು. ಸಂಕಷ್ಟ ಬಂದಾಗ ತಮಿಳುನಾಡಿಗೆ ನೀರು ಬಿಡಬಹುದು ಎಂದು ಸಲಹೆ ನೀಡಿದ್ದಾರೆ” ಎಂದರು.
“ಸಂದರ್ಭ ಬಂದರೆ ವಿಶೇಷ ಅಧಿವೇಶನ ಕರೆಯಲಾಗುವುದು. ಉದ್ದೇಶಪೂರ್ವಕವಾಗಿ ಆದೇಶ ಪಾಲನೆಯಾಗದಿದ್ದಾಗ ಮಾತ್ರ ನ್ಯಾಯಾಂಗ ನಿಂದನೆಯಾಗುತ್ತದೆ” ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇನ್ನಷ್ಟು ಮದ್ಯದಂಗಡಿಗಳ ಸಿದ್ದು ಕ್ರಮ ಸಮಾಜಘಾತಕ- ಕೈಬಿಡುತ್ತೇವೆಂದು ಆರನೆಯ ‘ಗ್ಯಾರಂಟಿ’ ನೀಡಲಿ
ಗೃಹಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಕರೆದಿದ್ದ ಸಭೆಗೆ ನ್ಯಾಯಮೂರ್ತಿಗಳಾದ ಎಂ ಎನ್ ವೆಂಕಟಾಚಲಯ್ಯ, ಶಿವರಾಜ ಪಾಟೀಲ್, ವಿ ಗೋಪಾಲಗೌಡ, ಆರ್ ವಿ ರವೀಂದ್ರನ್, ಪಿ. ವಿಶ್ವನಾಥಶೆಟ್ಟಿ, ಎ ಎನ್ ವೇಣುಗೋಪಾಲಗೌಡ, ಕಾನೂನು ಸಚಿವರಾದ ಸಚಿವ ಎಚ್ ಕೆ ಪಾಟೀಲ್, ಸಿಎಂ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ರಾಜಕೀಯ ಸಲಹೆಗಾರರಾದ ನಸೀರ್ ಅಹ್ಮದ್, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮಾಜಿ ಅಡ್ವೋಕೇಟ್ ಜನರಲ್ ಗಳಾದ ಬಿ ವಿ ಆಚಾರ್ಯ, ಮಧುಸೂದನ್ ನಾಯಕ್, ವಿಜಯಶಂಕರ್, ಉದಯ್ ಹೊಳ್ಳ, ಪ್ರೊ ರವಿವರ್ಮಕುಮಾರ್, ಪ್ರಭುಲಿಂಗ ನಾವದಗಿ ಆಗಮಿಸಿದ್ದರು.
ಕಾನೂನು, ಜಲಸಂಪನ್ಮೂಲ ಇಲಾಖೆ ಸೇರಿದಂತೆ ಮುಖ್ಯಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.