ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಪಾದಿತ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ಕೇಜ್ರಿವಾಲ್, ಜೈಲಿನಿಂದ ಬಿಡುಗಡೆಯಾದ ನಾಲ್ಕು ದಿನಗಳ ನಂತರ, ಮಂಗಳವಾರ ಸಂಜೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಕೇಂದ್ರದ ಪ್ರತಿನಿಧಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಕೇಜ್ರಿವಾಲ್, ರಾಜೀನಾಮೆ ಸಲ್ಲಿಸಿದ್ದಾರೆ.
ಮಂಗಳವಾರ ಬೆಳಗ್ಗೆ ನಡೆದ ಎಎಪಿ ಸಭೆಯಲ್ಲಿ ದೆಹಲಿ ಸಚಿವೆ ಅತಿಶಿ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಪ್ರಸ್ತಾಪಿಸಿದ್ದರು. ಅವರ ಪ್ರಸ್ತಾಪವನ್ನು ಎಲ್ಲರೂ ಒಪ್ಪಿಕೊಂಡಿದ್ದು, ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕೇಜ್ರಿವಾಲ್ ರಾಜೀನಾಮೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅತಿಶಿ, “ಇಂದು ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಪಕ್ಷ ಮತ್ತು ದೆಹಲಿಯ ಜನರಿಗೆ ಭಾವನಾತ್ಮಕ ಕ್ಷಣವಾಗಿದೆ. ಅದೇ ಸಮಯದಲ್ಲಿ, ಕೇಜ್ರಿವಾಲ್ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ದೆಹಲಿ ಜನರು ಸಂಕಲ್ಪ ಮಾಡಿದ್ದಾರೆ. ಚುನಾವಣೆ ನಡೆಯುವವರೆಗೆ ನಾನು ದೆಹಲಿ ಸರ್ಕಾರವನ್ನು ಮುನ್ನಡೆಸುತ್ತೇನೆ” ಎಂದಿದ್ದಾರೆ.
ಇತ್ತೀಚೆಗೆ, ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ದ ಜಾಮೀನು ನೀಡಿತ್ತು. ಕೇಜ್ರಿವಾಲ್ ಮುಖ್ಯಮಂತ್ರಿ ಕಚೇರಿಗೆ ಹೋಗುವಂತಿಲ್ಲ. ಲೆಫ್ಟಿನೆಂಟ್ ಗವರ್ನರ್ ಅನುಮತಿ ಇಲ್ಲದೆ ಕಡತಗಳಿಗೆ ಸಹಿ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಷರತ್ತು ವಿಧಿಸಿತ್ತು.
ಜೈಲಿನಿಂದ ಹೊರಬಂದ ಬಳಿಕ, ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕೇಜ್ರಿವಾಲ್, ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೆನೆಂದು ಘೋಷಿಸಿದ್ದರು. “ಈಗಿನ ಬಿಜೆಪಿ ಸರ್ಕಾರದ ಆಡಳಿತ ಆಂಗ್ಲರ ಕಾನೂನಿಗಿಂತ ಕೆಟ್ಟದಾಗಿದೆ. ಜನರ ತೀರ್ಪು ನೀಡುವವರೆಗೂ ನಾನು ವಿರಮಿಸುವುದಿಲ್ಲ. ನಮ್ಮ ಬಂಡೆಯಂತಹ ಸಂಕಲ್ಪವನ್ನು ಕೇಂದ್ರ ಸರ್ಕಾರದ ಪಿತೂರಿಗಳಿಂದ ಮುರಿಯಲು ಸಾಧ್ಯವಿಲ್ಲ” ಎಂದು ಹೇಳಿದ್ದರು.
ಅಲ್ಲದೆ, “ನನಗೆ ಕಾನೂನು ನ್ಯಾಯಾಲಯಗಳಿಂದ ನ್ಯಾಯ ಸಿಕ್ಕಿದೆ… ಈಗ ನನಗೆ ಜನತಾ ನ್ಯಾಯಾಲಯದಿಂದ ನ್ಯಾಯ ಸಿಗಬೇಕಿದೆ. ನಾನು ದೆಹಲಿಯ ಜನರಿಂದ ನ್ಯಾಯ ಕೇಳಲು ಬಯಸುತ್ತೇನೆ. ಕೇಜ್ರಿವಾಲ್ ನಿರಪರಾಧಿಯೇ ಅಥವಾ ಅಪರಾಧಿಯೇ? ನಾನು ಸರಿಯಾಗಿ ಕೆಲಸ ಮಾಡಿದ್ದರೆ, ನನಗೆ ದೆಹಲಿ ಜನರು ಮತ ನೀಡುತ್ತಾರೆ” ಎಂದಿದ್ದರು.
ಈ ವರದಿ ಓದಿದ್ದೀರಾ?: ಕೇಜ್ರಿವಾಲ್ ‘ನಾನು ಪ್ರಾಮಾಣಿಕ’ ಎನ್ನುತ್ತಿರುವುದೇಕೆ?
“ದೆಹಲಿಯ ಪ್ರತಿ ಮನೆ ಪ್ರತಿ ಬೀದಿಗೂ ತೆರಳುವೆ. ಜನರಿಂದ ತೀರ್ಪು ಸ್ವೀಕರಿಸುವವರೆಗೂ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನಾನು ಜೈಲಿನಲ್ಲಿದ್ದಾಗ ಸ್ವತಂತ್ರ ದಿನಾಚರಣೆ ಸಂದರ್ಭದಲ್ಲಿ ಸಚಿವೆ ಅತಿಶಿ ಅವರಿಂದ ಧ್ವಜಾರೋಹಣ ಮಾಡಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆದಿದ್ದೆ.ಆದರೆ ಪತ್ರವು ಯಾವುದೇ ಉತ್ತರವಿಲ್ಲದೆ ವಾಪಸ್ ಬಂದಿತು. ಇನ್ನೊಮ್ಮೆ ಪತ್ರ ಬರೆದರೆ ನಿಮ್ಮ ಕುಟುಂಬದವರನ್ನು ಭೇಟಿ ಮಾಡಿಸಲು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಲಾಗಿತ್ತು” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.