ಕೆಂಪೇಗೌಡರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಕೆಂಪೇಗೌಡರಿಗೆ ಮಾಡುವ ಅಪಮಾನ. ರಾಜಕೀಯ ನಾಯಕರು ತಮ್ಮ ರಾಜಕೀಯ ಉದ್ದೇಶ-ದುರುದ್ದೇಶಕ್ಕಾಗಿ ಜಾತ್ಯತೀತ ನಾಯಕನನ್ನು ಒಂದು ಜಾತಿ/ಸಮುದಾಯಕ್ಕೆ ಸೀಮಿತಗೊಳಿಸುವುದು ಥರವಲ್ಲ.
ಇಂದು, ಜೂನ್ 27– ನಾಡಪ್ರಭು ಎಂದೇ ಖ್ಯಾತರಾಗಿರುವ ಕೆಂಪೇಗೌಡರ ಜನ್ಮದಿನ. ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿ ಯಲಹಂಕ ನಾಡನ್ನು ಆಳುತ್ತಿದ್ದ ಕೆಂಪೇಗೌಡರು ಜಾತ್ಯತೀತ ಪಾಳೇಗಾರ ಎಂದೇ ಜನಜನಿತರಾಗಿದ್ದಾರೆ.
ಕೆಂಪೇಗೌಡರ ಆಡಳಿತವು ದೂರದೃಷ್ಟಿ, ನ್ಯಾಯ, ಮತ್ತು ಜನಪರ ಆಡಳಿತಕ್ಕೆ ಹೆಸರಾಗಿತ್ತು. 1510ರಿಂದ 1569ರವರಿಗೆ 38 ವರ್ಷಗಳ ಆಡಳಿತವು ವಿಕೇಂದ್ರೀಕೃತ ಆಡಳಿತ, ಕೃಷಿ, ನೀರಾವರಿ, ಮತ್ತು ಜಾತ್ಯತೀತತೆಯಿಂದ ಕೂಡಿತ್ತು. ಜನರಿಗೆ ಅನುಕೂಲವಾಗುವ ಹತ್ತಾರು ಕೆಲಸಗಳನ್ನು ಮಾಡಿ, ಜನಮನ್ನಣೆ ಪಡೆದಿದ್ದವರು. ಇಂದಿನ ‘ಸಿಲಿಕಾನ್ ಸಿಟಿ’ ಬೆಂಗಳೂರನ್ನು 1537ರಲ್ಲಿ ನಿರ್ಮಿಸಿದವರು. ಜೊತೆಗೆ, ಬೆಂಗಳೂರಿನಲ್ಲಿ ದೊಡ್ಡಪೇಟೆ, ಚಿಕ್ಕಪೇಟೆಯಂತಹ ವಾಣಿಜ್ಯ ಕೇಂದ್ರಗಳನ್ನೂ ಸ್ಥಾಪಿಸಿದ್ದರು. ಧರ್ಮಾಂಬುದಿ ಕೆರೆ, ಸಂಪಂಗಿ ಕೆರೆ, ಕೆಂಗೇರಿ ಕೆರೆ ಹಾಗೂ ಕಾಳೇಗೌಡ ಕೆರೆಯಂತಹ ಒಂದು ಸಾವಿರ ಕೆರೆಗಳನ್ನು ಕಟ್ಟಿ, ಕೃಷಿಗೆ ಒತ್ತನ್ನೂ ನೀಡಿದ್ದರು.
ಜೊತೆಗೆ ಯಲಹಂಕ, ಮಾಗಡಿ ಮತ್ತು ಶಿವನಸಮುದ್ರ ಸೇರಿದಂತೆ ದಕ್ಷಿಣ ಕಾವೇರಿ ತೀರದವರೆಗೂ ತಮ್ಮ ಆಡಳಿತವನ್ನು ವಿಸ್ತರಿಸಿದ್ದರು. ಮಾತ್ರವಲ್ಲದೆ, ಸ್ಥಳೀಯರ ಆಡಳಿತಗಾರರಿಗೆ ಹೆಚ್ಚಿನ ಸ್ವಾಯತ್ತತೆ ನೀಡಿ, ಆಡಳಿತವನ್ನು ವಿಕೇಂದ್ರಿಕರಣ ವ್ಯವಸ್ಥೆಯನ್ನು ಅಂದೇ ಜಾರಿಗೊಳಿಸಿದ್ದರು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಡಳಿತದ ದಕ್ಷತೆಯನ್ನು ಹೆಚ್ಚಿಸಿದ್ದರು.
ಕೆಂಪೇಗೌಡರ ಆಡಳಿತ ಮತ್ತು ಸಾಧನೆಗಳ ಬಗ್ಗೆ ಸಾಕಷ್ಟು ಐತಿಹಾಸಿಕ ದಾಖಲೆಗಳು ಲಭ್ಯವಿಲ್ಲ ಎಂಬ ಕೊರತೆಗಳೂ ಇವೆ. ಹೀಗಾಗಿಯೇ, ಇತಿಹಾಸಕಾರರಾದ ಎಸ್.ಕೆ. ಅರ್ಜುನಿ ಅವರು, ”ಕೆಂಪೇಗೌಡರ ಜೀವನದ ಕೆಲವು ಭಾಗಗಳು, ವಿಶೇಷವಾಗಿ ಅವರ ಆರಂಭಿಕ ಜೀವನ ಮತ್ತು ವಿಜಯನಗರ ಸಾಮ್ರಾಜ್ಯದೊಂದಿಗಿನ ಸಂಬಂಧಕ್ಕೆ ಸ್ಪಷ್ಟವಾದ ದಾಖಲೆಗಳಿಲ್ಲ. ಪ್ರಸ್ತುತ ಹೇಳಲಾಗುತ್ತಿರುವ ಇತಿಹಾಸವು ಕತೆಗೆ ಸೀಮಿತವಾಗಿವೆ” ಎಂದು ವಾದಿಸಿದ್ದಾರೆ.
ಆದಾಗ್ಯೂ, ಕೆಂಪೇಗೌಡರ ಕೆಲವು ಸಾಧನೆಗಳಿಗೆ ಬೆಂಗಳೂರಿನ ಕೆರೆಗಳು, ಕೋಟೆಗಳು, ದೇವಾಲಯ ಹಾಗೂ ಗೋಪುರಗಳು ಉದಾಹರಣೆಯಾಗಿವೆ.
ಆದರೆ, ಓರ್ವ ಜಾತ್ಯತೀತ ನಾಯಕನನ್ನು ಕಳೆದ 25 ವರ್ಷಗಳಲ್ಲಿ ಒಂದು ಸಮುದಾಯದ (ಒಕ್ಕಲಿಗ) ಐಕಾನ್ ಆಗಿ ಚಿತ್ರಿಸಲಾಗಿದೆ. ಕೆಂಪೇಗೌಡರ ಹೆಸರು ಮತ್ತು ಜಾತಿ ಹಿನ್ನೆಲೆಯನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳಿವೆ. ಜೆಡಿಎಸ್ ಮತ್ತು ಕಾಂಗ್ರೆಸ್‌ನ ಒಕ್ಕಲಿಗ ನಾಯಕರು ಕೆಂಪೇಗೌಡರನ್ನು ತಮ್ಮ ರಾಜಕೀಯ ವರ್ಚಸ್ಸನ್ನು ಬೆಳೆಸಿಕೊಳ್ಳಲು ಮತ್ತು ಸಮುದಾಯದ ಜನರನ್ನು ಓಲೈಸಲು ಬಳಸಿಕೊಂಡಿದ್ದಾರೆ. ಬಿಜೆಪಿಯಂತೂ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ವಾದಿಸಲಾಗುತ್ತಿದೆ. ಇದು, ಕೆಂಗೇಗೌಡರ ಜಾತ್ಯತೀತ ಆಡಳಿತ ಮತ್ತು ಆದರ್ಶಕ್ಕೆ ಚ್ಯುತಿ ತಂದಿದೆ-ತರುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
90ರ ದಶಕದ ನಂತರ, ಕೆಂಪೇಗೌಡರನ್ನು ಒಕ್ಕಲಿಗ ಸಮುದಾಯದ ಐಕಾನ್ ಆಗಿ ಬಿಂಬಿಸುವ ಪ್ರವೃತ್ತಿ ಬಲಗೊಳ್ಳತೊಡಗಿದೆ. 1994ರಲ್ಲಿ ಮೊದಲ ಬಾರಿಗೆ ಒಕ್ಕಲಿಗರನ್ನು ಜಾತಿ ಹೆಸರಲ್ಲಿ, ಸ್ವಾಮೀಜಿಗಳ ಮುಂದಾಳತ್ವದಲ್ಲಿ ಕ್ರೋಡೀಕರಿಸುವ ಕೆಲಸವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಾಡಿದರು. ರಾಜ್ಯದ ಮುಖ್ಯಮಂತ್ರಿಯಾಗುವ ಮೂಲಕ ಯಶಸ್ವಿಯೂ ಆದರು. ಅದರ ಮುಂದುವರೆದ ಭಾಗವಾಗಿ 2006ರಲ್ಲಿ ರಾಜ್ಯದಲ್ಲಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ, ಕೆಂಪೇಗೌಡರನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಚಾಳಿ ಚಾಲ್ತಿಗೆ ಬಂದಿತು. ಅವರ ಕೊಡುಗೆಗಳನ್ನು ಒಕ್ಕಲಿಗ ಸಮುದಾಯಕ್ಕೆ ಹೆಮ್ಮೆಯ ವಿಷಯವೆಂದು ಬಿಂಬಿಸಲಾಯಿತು. ಕೆಂಪೇಗೌಡರನ್ನು ಒಕ್ಕಲಿಗ ಸಮುದಾಯದ ದೂರದೃಷ್ಟಿಯ ನಾಯಕನೆಂದು ಗುರುತಿಸಲಾಯಿತು. ಮಾತ್ರವಲ್ಲದೆ, ಕೆಂಪೇಗೌಡರ ಹೆಸರಿನಲ್ಲಿ ಒಕ್ಕಲಿಗ ಸಂಘಗಳೂ ಉದಯವಾದವು.
ಈ ಲೇಖನ ಓದಿದ್ದೀರಾ?: ಎತ್ತ ಸಾಗುತ್ತಿದೆ ಬೆಂಗಳೂರು ಕಾಲ್ತುಳಿತ ಪ್ರಕರಣದ ತನಿಖೆ?
2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ‘ಕೆಂಪೇಗೌಡ ಜಯಂತಿ’ ಆಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಘೋಷಿಸಿತು. ಇದರಲ್ಲಿ, ಡಿ.ಕೆ ಶಿವಕುಮಾರ್ ಅವರ ಪಾತ್ರವಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ಕೀರ್ತಿ ತಮ್ಮದು ಎಂದು ಸಿದ್ದರಾಮಯ್ಯ ಹೇಳಿಕೊಳ್ಳುವುದೂ ಉಂಟು. ಅದರ ಮುಂದುವರೆದ ಭಾಗವಾಗಿ ಕೆಂಪೇಗೌಡ ಜಯಂತಿ ಆಚರಣೆಗಾಗಿ ಬೆಂಗಳೂರಿನ ಎಲ್ಲ ತಾಲೂಕುಗಳಿಗೆ ಬಿಬಿಎಂಪಿ ತಲಾ 1 ಲಕ್ಷ ರೂ. ಅನುದಾನವನ್ನೂ ನೀಡಲಾರಂಭಿಸಿತು. ಕೆಂಪೇಗೌಡರ ಜಯಂತಿಯನ್ನು ಒಕ್ಕಲಿಗ ಸಮುದಾಯದ ಒಗ್ಗಟ್ಟಿನ ಸಂಕೇತವಾಗಿ ಆಚರಿಸುವಂತೆ ನೋಡಿಕೊಳ್ಳಲಾಗಿದೆ.
ಅಲ್ಲದೆ, ಕಾಂಗ್ರೆಸ್, ಜೆಡಿಎಸ್‌ಗೆ ಸೆಡ್ಡುಹೊಡೆದು ಕೆಂಪೇಗೌಡರನ್ನು ತನ್ನ ರಾಜಕೀಯಕ್ಕೆ ಬಳಸಿಕೊಳ್ಳಲು ಬಿಜೆಪಿಯೂ ಯತ್ನಿಸಿತು. 2023ರ ವಿಧಾನಸಭಾ ಚುನಾವಣೆಗೂ ಮುನ್ನ 2022ರ ನವೆಂಬರ್‌ನಲ್ಲಿ ಅಂದಿನ ಬಿಜೆಪಿ ಸರ್ಕಾರ ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ 100 ರೂ. ವೆಚ್ಚದಲ್ಲಿ ಕೆಂಪೇಗೌಡರ ‘ಸಮೃದ್ಧಿಯ ಪ್ರತಿಮೆ’ಯನ್ನು ನಿರ್ಮಿಸಿ, ಪ್ರಧಾನಿ ಮೋದಿ ಅವರಿಂದ ಉದ್ಘಾಟಿಸಿತು. ಇದರೊಂದಿಗೆ, ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ನೆಲೆ ಕಂಡುಕೊಳ್ಳಲು ಮತ್ತು ಮತದಾರರನ್ನು ಸೆಳೆಯಲು ಹವಣಿಸಿತು. ಮಂಡ್ಯದಲ್ಲಿ ಉರೀಗೌಡ-ನಂಜೇಗೌಡ ಎಂಬ ಕಾಲ್ಪನಿಕ ಕತೆ ಸೃಷ್ಟಿಸಿ, ಇವರೇ ಕೆಂಪೇಗೌಡರ ವಂಶಸ್ಥರು, ಟಿಪ್ಪುವನ್ನು ಕೊಂದವರು ಎಂದು ಕತೆಕಟ್ಟಿತು. ಆದರೆ, ಅದು ಫಲಿಸಲಿಲ್ಲ.
ಇದೆಲ್ಲದರ ಜೊತೆಗೆ, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ಇಲ್ದಾಣ, ಮೆಟ್ರೋ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಿಗೆ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಲಾಗಿದೆ. ಬೆಂಗಳೂರಿನಾದ್ಯಂತ ಕೆಂಪೇಗೌಡರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಇದೇ ಸಂದರ್ಭದಲ್ಲಿ ನಟ ಸುದೀಪ್ ಅವರ ಅಭಿನಯದ ಸಿನಿಮಾಗೆ ‘ಕೆಂಪೇಗೌಡ’ ಎಂದು ಹೆಸರಿಟ್ಟರೆ, ದರ್ಶನ್-ಅಂಬರೀಶ್ ಅಭಿನಯದ ‘ಅಂಬರೀಶ’ ಸಿನಿಮಾದಲ್ಲಿ ಕೆಂಪೇಗೌಡರ ಕುರಿತಾದ ಹಾಡಗಳನ್ನು ರಚಿಸಲಾಗಿದೆ. ಇದೆಲ್ಲವೂ ಕೆಂಪೇಗೌಡರನ್ನು ರಾಜಕೀಯ ಮತ್ತು ಸಾಮಾಜಿಕ ಧೀರ-ಶೂರನಾಗಿ ಚಿತ್ರಿಸಿವೆ.
ಅದೇನೇ ಇರಲಿ, ಕೆಂಪೇಗೌಡರು ಒಂದು ಸಮುದಾಯಕ್ಕಾಗಿ ಕೆಲಸ ಮಾಡಿದವರಲ್ಲ. ಆಡಳಿತ ನಡೆಸಿದರಲ್ಲ. ಅವರ ಕೊಡುಗೆ ಎಲ್ಲ ಸಮುದಾಯಗಳನ್ನು ಒಳಗೊಂಡಿತ್ತು. ಅವರ ಆಡಳಿತ ಎಲ್ಲರನ್ನೂ ಒಳಗೊಂಡು ಜಾತ್ಯತೀತ ಆಡಳಿತವಾಗಿತ್ತು ಎಂಬುದನ್ನು ಮರೆಮಾಚಲು ಸಾಧ್ಯವಿಲ್ಲ. ಅವರ ದೂರದೃಷ್ಟಿಯ ಆಡಳಿತ, ನಗರ ಯೋಜನೆ ಹಾಗೂ ಸಾಮಾಜಿಕ ಸಮತೆಗೆ ನೀಡಿದ ಕೊಡುಗೆಗಳನ್ನು ಈಗ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಕೆಂಪೇಗೌಡರಿಗೆ ಮಾಡುವ ಅಪಮಾನ. ರಾಜಕೀಯ ನಾಯಕರು ತಮ್ಮ ರಾಜಕೀಯ ಉದ್ದೇಶ-ದುರುದ್ದೇಶಕ್ಕಾಗಿ ಜಾತ್ಯತೀತ ನಾಯಕನನ್ನು ಒಂದು ಜಾತಿ/ಸಮುದಾಯಕ್ಕೆ ಸೀಮಿತಗೊಳಿಸುವುದು ಥರವಲ್ಲ.