ಮುಂದಿನ ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಸೀಟು ಹಂಚಿಕೆ ಮಾತುಕತೆ ಮುಂದುವರಿದಿದೆ. ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಸಿದ್ಧರಿಲ್ಲದ ಹಾಗೂ ಸುಮಲತಾಗೆ ಬೆಂಬಲ ಸೂಚಿಸುತ್ತಿರುವ ಬಿಜೆಪಿಯ ಕೆಲವು ನಾಯಕರು ಹಾಗೂ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದು ಮಂಡ್ಯದ ಕೆರಗೋಡು ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿಂದು ನಡೆದ ಪ್ರತಿಭಟನೆಯ ವೇಳೆ ಬಹಿರಂಗಗೊಂಡಿದೆ. ಅದಕ್ಕೆ ಕಾರಣವಾದದ್ದು, ಕೆಲ ಬಿಜೆಪಿ ಮುಖಂಡರ ನಡೆ.
ಮಂಡ್ಯ ಕ್ಷೇತ್ರದ ಟಿಕೆಟ್ಗಾಗಿ ಸಂಸದೆ ಸುಮಲತಾ ಹಾಗೂ ಕುಮಾರಸ್ವಾಮಿ ನಡುವೆ ಪೈಪೋಟಿ ನಡೆಯುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿರುವುದು ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಉಂಟಾಗಿರುವುದನ್ನು ಸೂಚಿಸಿದೆ.
ಮಂಡ್ಯದ ಕೆರಗೋಡು ಗ್ರಾಮದಲ್ಲಿನ ಹನುಮಧ್ವಜ ವಿವಾದವನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿಯು ರಾಜ್ಯಾದ್ಯಂತ ಇಂದು ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿತ್ತು. ಇದರ ಭಾಗವಾಗಿಯೇ ಬಿಜೆಪಿಯ ದೋಸ್ತಿ ಜೆಡಿಎಸ್ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದೆ.
ಮಾಜಿ ಮುಖ್ಯಮಂತ್ರಿಗು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ @hd_kumaraswamy ಅವರ ನೇತೃತ್ವದಲ್ಲಿ, ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು @JanataDal_S ಮತ್ತು @BJP4Karnataka ವತಿಯಿಂದ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ನಾಯಕರಾದ ಶ್ರೀ… pic.twitter.com/btKRQNW4Vl
— Janata Dal Secular (@JanataDal_S) January 29, 2024
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಆದರೆ, ಪ್ರತಿಭಟನಾ ಸ್ಥಳಕ್ಕೆ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಕೆಲವು ಬಿಜೆಪಿ ನಾಯಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಕುಮಾರಸ್ವಾಮಿ ವೇದಿಕೆಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಪ್ರತಿಭಟನಾಕಾರರು ಶಿಳ್ಳೆ, ಚಪ್ಪಾಳೆ ಮೂಲಕ ಘೋಷಣೆ ಕೂಗತೊಡಗಿದರು. ಬಿಜೆಪಿ ಮುಖಂಡರೊಬ್ಬರು ಕುಮಾರಸ್ವಾಮಿ ಅವರಿಗೆ ಕೇಸರಿ ಶಾಲು ಹಾಕಿದರು. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಶಾಸಕ ಸಿಟಿ ರವಿ ಅವರು ವೇದಿಕೆಗೆ ಆಹ್ವಾನಿಸಿದರು. ಈ ವೇಳೆ ಕುಮಾರಸ್ವಾಮಿ ಬರುವುದನ್ನು ಗಮನಿಸಿದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಬೆಳವಣಿಗೆಯು ಮೈತ್ರಿಯಲ್ಲಿ ಉಂಟಾಗಿರುವ ಬಿರುಕಿಗೆ ಇಂಬು ನೀಡಿದೆ.
ಕೆರಗೋಡಿನ ಹಿಂದೂಗಳ ನೋವಿಗೆ ದನಿಯಾಗಿ ಹಿಂದೂ ಮಹಾಸಾಗರವೇ ಹರಿದು ಬಂದಿದೆ.
ಮಂಡ್ಯದ ಕೆರಗೋಡಿನಲ್ಲಿ ಗ್ರಾಮಸ್ಥರೆಲ್ಲರೂ ನಿರ್ಣಯಿಸಿ ಹಾಕಿದ್ದ ಹನುಮಧ್ವಜವನ್ನು ತೆರವುಗೊಳಿಸಿದ ರಾಜ್ಯದ ಹಿಂದೂ ವಿರೋಧಿ ತುಘಲಕ್ ಸರ್ಕಾರದ ನಡೆ ಖಂಡಿಸಿ ಮಂಡ್ಯದವರೆಗೆ ಹಮ್ಮಿಕೊಂಡಿದ್ದ ಕಾಲ್ನಡಿಗೆಯಲ್ಲಿ ಭಾಗಿಯಾಗಲಾಯಿತು.
ರಾಜ್ಯದಲ್ಲಿ ದಿನೇದಿನೇ ಹಿಂದೂಗಳ… pic.twitter.com/Tlmahdutiw
— Preetham J Gowda (@preethamgowda_j) January 29, 2024
ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್, ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಯೋಚನೆಯಲ್ಲಿದೆ. ಆದರೆ, ಇದಕ್ಕೆ ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕರು ಒಪ್ಪುತ್ತಿಲ್ಲ. ಮಂಡ್ಯ ಕ್ಷೇತ್ರದ ಟಿಕೆಟ್ ಸುಮಲತಾ ಅವರಿಗೇ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಸದೆ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು. ಮಂಡ್ಯವನ್ನ ಜೆಡಿಎಸ್ ನಾಯಕರಿಗೆ ಯಾಕೆ ಕೊಡಬೇಕು ಎಂದು ನಾರಾಯಣಗೌಡ ಇತ್ತೀಚೆಗೆ ಬಹಿರಂಗ ಹೇಳಿಕೆ ನೀಡಿದ್ದರು. ಅಲ್ಲದೆ, ಜನವರಿ 25 ರಂದು ಸುಮಲತಾರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ವೇಳೆ ಬಿಜೆಪಿಯಿಂದ ಸ್ಪರ್ಧೆ ಮಾಡುವ ಬಗ್ಗೆ ಸುಮಲತಾ ಅಂಬರೀಶ್ ತೀರ್ಮಾನ ತೆಗೆದುಕೊಂಡಿದ್ದಾರೆ. ಅಲ್ಲದೇ, ಮಂಡ್ಯ ಬಿಟ್ಟು ನನಗೆ ಬೇರೆ ಕಡೆ ಟಿಕೆಟ್ ನೀಡಿದರೆ ರಾಜಕೀಯವೇ ಬೇಡ ಎಂದಿದ್ದಾರೆ.