ಕೇಂದ್ರವು ದೇಶದ ಒಕ್ಕೂಟ ರಚನೆಗೆ ವಿರುದ್ಧವಾದ ನಿಲುವನ್ನು ಅನುಸರಿಸುತ್ತಿದೆ ಮತ್ತು ಕೇರಳ ರಾಜ್ಯವು ಕೆಲವು ದಿನಗಳಿಂದ ಅನುಭವಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವೇ ಕಾರಣ, ಆರ್ಥಿಕ ಬಿಕ್ಕಟ್ಟನ್ನು ಕೃತವಾಗಿ ಸೃಷ್ಟಿಸಲಾಗಿದೆ ಎಂದು ಕೇರಳ ವಿತ್ತ ಸಚಿವ ಕೆ ಎನ್ ಬಾಲಗೋಪಾಲ್ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಾಲಗೋಪಾಲ್, “ಕೆಐಐಎಫ್‌ಬಿ ಸಂಗ್ರಹಿಸಿದ ಮತ್ತು ಖರ್ಚು ಮಾಡಿದ ಹಣವನ್ನು ಕೇರಳದ ಒಟ್ಟಾರೆ ಸಾಲದ ಭಾಗವಾಗಿ ಕೇಂದ್ರವು ಪರಿಗಣಿಸುತ್ತದೆ. ಆದ್ದರಿಂದ ರಾಜ್ಯ ಸರ್ಕಾರದ ಸಂಪನ್ಮೂಲ ಕ್ರೋಢೀಕರಣ ಉಪಕ್ರಮಗಳು ತೀವ್ರವಾಗಿ ಪರಿಣಾಮ ಬೀರಿವೆ” ಎಂದು ತಿಳಿಸಿದರು.
“ಆದರೆ ಕೇರಳ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಫಂಡ್ ಬೋರ್ಡ್ (ಕೆಐಐಎಫ್‌ಬಿ) ಮಂಜೂರು ಮಾಡಿರುವ ಯೋಜನೆಗಳಿಗೆ ಹಣ ಮಂಜೂರು ಮಾಡಲು ರಾಜ್ಯ ಸರ್ಕಾರ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ” ಎಂದು ಸ್ಪಷ್ಟಪಡಿಸಿದ ಸಚಿವರು, “ಕೇಂದ್ರದ ಫೆಡರಲ್ ವಿರೋಧಿ ನಿಲುವಿನಿಂದಾಗಿ ಕೇರಳ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ” ಎಂದು ದೂರಿದರು.
ಇದನ್ನು ಓದಿದ್ದೀರಾ? ಮೋದಿ ಸರ್ಕಾರದ ಜೊತೆ ಕುಮಾರಸ್ವಾಮಿ: ಹೊಸ ಪಕ್ಷ ಸ್ಥಾಪನೆಗೆ ಕೇರಳ ಜೆಡಿಎಸ್ ಸಜ್ಜು
ಕೆಐಐಎಫ್‌ಬಿ ಕೇರಳದ ಸರ್ಕಾರಿ ಸಂಸ್ಥೆಯಾಗಿದ್ದು, ಮಾರುಕಟ್ಟೆಗಳಿಂದ ಹಣವನ್ನು ಸಂಗ್ರಹಿಸುವ ಮೂಲಕ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸುತ್ತದೆ. ಈ ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ ಕೆಐಐಎಫ್‌ಬಿ ವಿವಿಧ ಯೋಜನೆಗಳಿಗೆ 29,100 ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ಸಚಿವರು ಹೇಳಿದ್ದಾರೆ.
“ಪ್ರತಿಕೂಲ ಅಂಶಗಳಿಂದಾಗಿ ಈಗ ಕೆಐಐಎಫ್‌ಬಿಯ ಚಟುವಟಿಕೆಗಳು ನಿಧಾನಗತಿಯಲ್ಲಿ ಪ್ರಗತಿಯಲ್ಲಿವೆ” ಎಂದು ಒಪ್ಪಿಕೊಂಡ ಕೇರಳ ವಿತ್ತ ಸಚಿವ ಆದರೆ ಅದರ ಯೋಜನೆಗಳ ಕಾರ್ಯಗತಗೊಳಿಸುವಿಕೆಯು ನಿಂತಿದೆ ಎಂಬ ಆರೋಪವನ್ನು ತಿರಸ್ಕರಿಸಿದರು.