ದೆಹಲಿ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದರು. ಅವರಿಗಾಗಿ ಮೀಸಲಿಟ್ಟಿದ್ದ ಕುರ್ಚಿ ಖಾಲಿಯಾಗಿತ್ತು.
ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ಗಣ್ಯರು, ರಾಜತಾಂತ್ರಿಕರು ಮತ್ತು ಸಚಿವರು ಉಪಸ್ಥಿತರಿದ್ದರು. ಆದರೆ, ಖರ್ಗೆ ಅವರು ಕಾರ್ಯಕ್ರಮದಿಂದ ದೂರು ಉಳಿದಿದ್ದರು. ಅವರು ತಮ್ಮ ನಿವಾಸ ಮತ್ತು ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ, ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ.
ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಗೈರಾಗಿದ್ದ ಬಗ್ಗೆ ಮಾತನಾಡಿರುವ ಖರ್ಗೆ, “ಕೆಂಪುಕೋಟೆಯಿಂದ ಕಾಂಗ್ರೆಸ್ ಕಚೇರಿಗೆ ಸಕಾಲಕ್ಕೆ ತಲುಪಲು ಸಾಧ್ಯವಾಗುವುದಿಲ್ಲ. ಸಮಯದ ಕೊರತೆಯಿಂದ ನಾನು ಅಲ್ಲಿಗೆ ಹೋಗಿಲ್ಲ. ದೇಶದ ಜನರೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದೇವೆ” ಎಂದು ಹೇಳಿದ್ದಾರೆ.
“ಪ್ರಧಾನಿ ಅವರ ಕೆಂಪುಕೋಟೆ ಭಾಷಣದಲ್ಲಿ ಖರ್ಗೆ ಅವರು ಹಾಜರಾಗದಿದ್ದಕ್ಕಾಗಿ ಬಿಜೆಪಿ ಅಸಮಾಧಾನಗೊಂಡಿದೆ” ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.
“ತಮ್ಮ (ಮೋದಿ) ಸಂಚಾರ ಮಾರ್ಗದ ವ್ಯವಸ್ಥೆಯಿಂದಾಗಿ ಖರ್ಗೆ ಅವರು ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಕಾಲದಲ್ಲಿ ಪಕ್ಷದ ಕೇಂದ್ರ ಕಚೇರಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿಗೆ ತಿಳಿದಿದೆಯೇ? ಸ್ವಾತಂತ್ರ್ಯ ದಿನದಂದು ನಮ್ಮ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡುವ ಸ್ವಾತಂತ್ರ್ಯ ನಮಗೆ ಇಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವ ಅಪಾಯದಲ್ಲಿದೆ
“ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸ್ವಾಯತ್ತ ಸಂಸ್ಥೆಗಳು ‘ದೊಡ್ಡ ಅಪಾಯ’ದಲ್ಲಿವೆ. ಪ್ರತಿಪಕ್ಷಗಳ ‘ದನಿಯನ್ನು ಹತ್ತಿಕ್ಕಲು’ ಬಿಜೆಪಿ ಯತ್ನಿಸುತ್ತಿದೆ. ಅದಕ್ಕಾಗಿ, ಹೊಸ ತಂತ್ರಗಳನ್ನು ಅಳವಡಿಸಲಾಗುತ್ತಿದೆ. ಸಿಬಿಐ, ಇಡಿ, ಆದಾಯ ತೆರಿಗೆ, ಚುನಾವಣಾ ಆಯೋಗಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಸಂಸತ್‌ನಲ್ಲಿ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ಮೂಲಕ ಅವರ ಧ್ವನಿಯನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ. ವಿಶೇಷಾಧಿಕಾರದ ನಿರ್ಣಯಗಳನ್ನು ತರಲಾಗುತ್ತಿದೆ,” ಎಂದು ಅವರು ಕೇಸರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಹಿಂದಿನ ಸರ್ಕಾರಗಳು ತಂದಿದ್ದ ಯೋಜನೆಗಳ ಹೆಸರನ್ನಷ್ಟೇ ಬದಲಿಸಿ ಮೋದಿ ಸರ್ಕಾರ, ಆ ಯೋಜನೆಗಳೇ ತಮ್ಮದೆಂದು ಹೇಳಿಕೊಳ್ಳುತ್ತಿದೆ. ದಶಕಗಳಿಂದ ನಡೆದುಕೊಂಡು ಬಂದಿರುವ ಹಳೆಯ ಸಾಂವಿಧಾನಿಕ ವ್ಯವಸ್ಥೆಗಳನ್ನು ವಿರೂಪಗೊಳಿಸಿ, ಸರ್ವಾಧಿಕಾರಕ್ಕೆ ಹೊಸ ಆಯಾಮಗಳನ್ನು ನೀಡುತ್ತಿದೆ. ಆ ಮೂಲಕ ಪ್ರಜಾಪ್ರಭುತ್ವವನ್ನು ಛಿದ್ರಗೊಳಿಸಲಾಗುತ್ತಿದೆ” ಎಂದು ಅವರು ಹೇಳಿದರು.
“ಪ್ರಧಾನಿ ಮೋದಿ ಅವರು ಮೊದಲು ‘ಅಚ್ಛೇ ದಿನ್’ ಬಗ್ಗೆ ಮಾತನಾಡಿದರು. ನಂತರ, ‘ನವ ಭಾರತ’ದ ಬಗ್ಗೆ ಮಾತನಾಡಿದರು. ಈಗ ‘ಅಮೃತ್ ಕಾಲ’ದ ಬಗ್ಗೆ ಮಾತನಾಡುತ್ತಾರೆ. ಇದೆಲ್ಲವೂ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮಾಡುತ್ತಿವೆ ಹೆಸರು ಬದಲಾವಣೆ ಮಾತ್ರ” ಎಂದು ಕಿಡಿಕಾರಿದ್ದಾರೆ.
ಸ್ವಾತಂತ್ರ್ಯ ದಿನ ಶುಭಾಷಯ ತಿಳಿಸಿ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿರುವ ಖರ್ಗೆ, “ನಿಮ್ಮೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಮತ್ತು ಅಭಿನಂದನೆಗಳು. ಪ್ರಜಾಪ್ರಭುತ್ವ ಮತ್ತು ಸಂವಿಧಾನವು ನಮ್ಮ ದೇಶದ ಆತ್ಮವಾಗಿದೆ. ನಾವು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯದೊಂದಿಗೆ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಿದ್ದೇವೆ. ದೇಶದ ಏಕತೆ ಮತ್ತು ಸಮಗ್ರತೆ, ಪ್ರೀತಿ ಮತ್ತು ಸಹೋದರತ್ವಕ್ಕಾಗಿ, ಸಾಮರಸ್ಯ ಮತ್ತು ಸೌಹಾರ್ದತೆಗಾಗಿ ದುಡಿಯುತ್ತೇವೆ” ಎಂದು ಹೇಳಿದ್ದಾರೆ.
Bahala Spastavagi Heliddare, Dhanyavadagalu Sir,
Jai Bheem