ಕಾಂಗ್ರೆಸ್ ಒಳನುಸುಳುಕೋರರಿಗೆ ದೇಶದ ಸಂಪತ್ತನ್ನು ಹಂಚಬಹುದು ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮೋದಿ ಅವರಿಗೆ ತಿಳಿಹೇಳಲು ಮುಂದಾಗಿದ್ದಾರೆ. ಮೋದಿ ಭೇಟಿಗೆ ಸಮಯ (ಅಪಾಯಿಂಟ್ಮೆಂಟ್) ಕೇಳಿದ್ದಾರೆ.
ರಾಜಸ್ಥಾನದಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ್ದ ಮೋದಿ, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತನ್ನು ‘ಒಳನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ’ ಹಂಚಬಹುದು. ಈ ಹಿಂದೆ ಅವರು (ಕಾಂಗ್ರೆಸ್) ಅಧಿಕಾರದಲ್ಲಿದ್ದಾಗ, ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಮುಸ್ಲಿಮರಿಗೆ ಇದೆ ಎಂದಿದ್ದರು. ಈ ಅರ್ಬನ್ ನಕ್ಸಲ್ ಚಿಂತನೆಯು ನನ್ನ ತಾಯಂದಿರು ಮತ್ತು ಸಹೋದರಿಯರ ಮಂಗಳ ಸೂತ್ರಗಳನ್ನು ಸಹ ಬಿಡುವುದಿಲ್ಲ” ಎಂದು ಆರೋಪಿಸಿದ್ದರು.
ಪ್ರಧಾನಿ ಮೋದಿಯವರ ಟೀಕೆಗಳನ್ನು ‘ದ್ವೇಷ’ ಎಂದು ಖರ್ಗೆ ಬಣ್ಣಿಸಿದ್ದಾರೆ. “ಮೋದಿ ಮಾತುಗಳು ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ತಂತ್ರವಾಗಿದೆ. ಅವರ ಮಾತುಗಳು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಬಳಿಕ ಮೋದಿ ಮತ್ತು ಬಿಜೆಪಿ ‘ಭೀತಿ’ ಮತ್ತು ‘ನಿರಾಶೆ’ಗೊಂಡಿದೆ ಎಂಬುದನ್ನು ಸೂಚಿಸುತ್ತದೆ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ‘ಮುಸ್ಲಿಂ ಮತ್ತು ಹಿಂದು’ ಪದಗಳ ಉಲ್ಲೇಖವೇ ಇಲ್ಲ” ಎಂದು ಖರ್ಗೆ ಹೇಳಿದ್ದಾರೆ.
“ಅಧಿಕಾರಕ್ಕಾಗಿ ಸುಳ್ಳುಗಳನ್ನು ಹೇಳುವುದು ಮತ್ತು ವಿಪಕ್ಷಗಳ ಮೇಲೆ ಸುಳ್ಳು ಆರೋಪಗಳನ್ನು ಮಾಡಲು ಆಧಾರರಹಿತ ಉಲ್ಲೇಖಗಳನ್ನು ಮಾಡುವುದು ಸಂಘ ಮತ್ತು ಬಿಜೆಪಿಯ ವಿಶೇಷತೆಯಾಗಿದೆ. ಈ ದೇಶದ 140 ಕೋಟಿ ಜನರು ಈ ಸುಳ್ಳನ್ನು ನಂಬುವುದಿಲ್ಲ. ನಮ್ಮ ಪ್ರಣಾಳಿಕೆ ಪ್ರತಿಯೊಬ್ಬ ಭಾರತೀಯನದ್ದು… ಎಲ್ಲರಿಗೂ ಸಮಾನತೆ ಮತ್ತು ನ್ಯಾಯದ ಬಗ್ಗೆ ಮಾತನಾಡುತ್ತದೆ…ಕಾಂಗ್ರೆಸ್‌ನ ನ್ಯಾಯ ಪತ್ರವು ಆಧಾರ ಸತ್ಯವಾಗಿದೆ. ಆದರೆ, ಮೋದಿ ಅವರು ಗೊಬೆಲ್ಸ್ ರೂಪದಲ್ಲಿ ತತ್ತರಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಮೋದಿಯವರ ಈ ಹೇಳಿಕೆ ಹಲವು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, “2002ರಿಂದ, ಮುಸ್ಲಿಮರನ್ನು ನಿಂದಿಸಿ ಮತ ಪಡೆಯುವುದು ಮಾತ್ರ ಮೋದಿ ಗ್ಯಾರಂಟಿ” ಎಂದು ಹೇಳಿದ್ದಾರೆ.
ಶಿವಸೇನೆಯ (ಉದ್ದವ್ ಬಣ) ಪ್ರಿಯಾಂಕಾ ಚತುರ್ವೇದಿ ಅವರು ಮೋದಿ ಭಾಷಣವನ್ನು ‘ಅತ್ಯಂತ ದ್ವೇಷಪೂರಿತ ಮತ್ತು ವಿಭಜನೆ’ ಭಾಷಣೆ ಎಂದು ಕರೆದಿದ್ದಾರೆ.