''ಒಗ್ಗಟ್ಟಿನಲ್ಲಿ ಬಲವಿದೆ'' ಎಂಬ ನಾಣ್ಣುಡಿ ಹಲವಾರು ಶತಮಾನಗಳಿಂದ ಚಾಲ್ತಿಯಲ್ಲಿದೆ. ಇದು ಎಷ್ಟು ಸತ್ಯ ಎಂಬುದು ತಿಳಿದಿದ್ದರೂ, ಮನುಷ್ಯ ಮಾತ್ರ ವೈಯಕ್ತಿಕ ಸ್ವಾರ್ಥ, ದ್ವೇಷ ಮತ್ತು ಅಸೂಯೆಯಿಂದ ಪರರಿಗೆ ಕೇಡು ಬಯಸುವುದರಲ್ಲೇ ಸುಖ ಕಾಣುತ್ತಾ ಸಾಗುತ್ತಿದ್ದಾನೆ. ಇಂಥ ಸ್ವಾರ್ಥ ಲಾಲಸೆ ಎಂಥ ಬಲಿಷ್ಠ ಪಕ್ಷವನ್ನೂ ಹೇಗೆ ದುರ್ಬಲಗೊಳಿಸಿ, ದಯನೀಯ ಸ್ಥಿತಿಗೆ ದೂಡಬಹುದು ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿ ತಾಜಾ ಉದಾಹರಣೆ.
ಇದು ತೀರಾ ಹಳತಾದ ಸಂಗತಿಯೇನೂ ಅಲ್ಲ. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೆರಡು ವರ್ಷಗಳಿರುವಾಗ ಹಾಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಬೆಂಬಲಿಗರೆಂದುಕೊಂಡವರು ಡಿ.ಕೆ ಶಿವಕುಮಾರ್ ಮಹಾನ್ ಭ್ರಷ್ಟ ಎಂಬ ಕೂರಂಬುಗಳನ್ನು ಅವರತ್ತ ಸಾಮಾಜಿಕ ಮಾಧ್ಯಮಗಳಲ್ಲಿ ತೂರಿದ್ದರು. ಅವರಲ್ಲಿ ಬಹುತೇಕ ಮಂದಿ ಕಾಂಗ್ರೆಸ್‌ಗೆ ಸೇರಿದ್ದ ಕಾರ್ಯಕರ್ತರೇ ಆಗಿದ್ದರು. ನಂತರ ತಿಹಾರ್ ಜೈಲಿನಿಂದ ಬಿಡುಗಡೆಗೊಂಡ ಡಿ.ಕೆ ಶಿವಕುಮಾರ್, ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸಿ, ಸಿದ್ದರಾಮಯ್ಯನವರೊಂದಿಗೆ ಕಾಂಗ್ರೆಸ್‌ಅನ್ನು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.
ಈಗ ಸಿದ್ದರಾಮಯ್ಯನವರ ಸರದಿ. ಮುಡಾ ಅಕ್ರಮ ಹಗರಣದಲ್ಲಿ ಅವರ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆಯೇ ಕಾಂಗ್ರೆಸ್‌ನ ಹಿರಿಯ ನಾಯಕರಾದ ಸತೀಶ್ ಜಾರಕಿಹೊಳಿ, ಡಾ. ಜಿ ಪರಮೇಶ್ವರ್, ಡಾ. ಎಚ್.ಸಿ ಮಹದೇವಪ್ಪರಂಥವರು ಅವರ ಗಾದಿಯಲ್ಲಿ ಕೂರಲು ತೆರೆಮರೆಯ ಕಸರತ್ತು ನಡೆಸತೊಡಗಿದರು. ಇದು ಸಹಜವಾಗಿಯೇ ಪಕ್ಷದೊಳಗೆ ಗುಂಪುಗಾರಿಕೆಗೆ ಅವಕಾಶ ಮಾಡಿಕೊಟ್ಟಿತ್ತು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಯಾವುದೇ ಕಾರಣಕ್ಕೂ ನಾಯಕತ್ವದ ಬದಲಾವಣೆ ಇಲ್ಲ ಎಂದು ಘೋಷಿಸಿ, ಪಕ್ಷದೊಳಗಿನ ಗುಂಪುಗಾರಿಕೆಗೆ ತಾತ್ಕಾಲಿಕ ಬ್ರೇಕ್ ಹಾಕಿತ್ತು. ಮುಡಾ ಅಕ್ರಮ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾನೂನಾತ್ಮಕ ಹೋರಾಟಕ್ಕೆ ನೈತಿಕ ಬೆಂಬಲವಾಗಿ ನಿಲ್ಲುವುದಾಗಿಯೂ ಘೋಷಿಸಿತು.
ಇದರ ಬೆನ್ನಿಗೇ, ಮತ್ತೊಮ್ಮೆ ಉಪ ಮುಖ್ಯಮಂತ್ರಿಯಾದ ಡಿ.ಕೆ ಶಿವಕುಮಾರ್ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತಿದೆ. ಸಾರಿಗೆ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಡಿ.ಕೆ ಶಿವಕುಮಾರ್, ಅನೇಕ ಮಹಿಳೆಯರು ನಮಗೆ ಶಕ್ತಿ ಯೋಜನೆಯ ಅವಶ್ಯಕತೆ ಇಲ್ಲ ಎಂದು ಇ-ಮೇಲ್ ಮತ್ತು ವಾಟ್ಸಾಪ್ ಸಂದೇಶಗಳನ್ನು ರವಾನಿಸುತ್ತಿರುವುದರಿಂದ ಶಕ್ತಿ ಯೋಜನೆಯನ್ನು ಪರಿಷ್ಕರಿಸಲು ಚಿಂತಿಸುತ್ತಿರುವುದಾಗಿ ಪ್ರಕಟಿಸಿದರು. ಇದು ವಿರೋಧ ಪಕ್ಷಗಳ ಕೈಗೆ ಟೀಕಾಸ್ತ್ರ ಒದಗಿಸಿತು. ಇದಾದ ಒಂದೆರಡು ದಿನಗಳಲ್ಲೇ ಸರ್ದಾರ್ ವಲ್ಲಭ ಭಾಯಿ ಪಟೇಲರ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಒಗ್ಗಟ್ಟಾಗಿ ಹೋಗುವಂತೆ ಕಿವಿಮಾತು ಹೇಳಿದರು. ”ಪಕ್ಷದಲ್ಲಿ ಯಾರಿಗೇ ನೋವಾದರೂ, ಅದರಿಂದ ಪಕ್ಷಕ್ಕೇ ಹಾನಿಯಾಗುತ್ತದೆ. ಪಕ್ಷವನ್ನು ಒಡೆಯಲು ಹೊರಗಿನವರ ಅಗತ್ಯವಿಲ್ಲ. ಒಳಗಿನ ಭಿನ್ನಮತವೇ ಸಾಕು” ಎಂದು ಮಾರ್ಮಿಕ ಎಚ್ಚರಿಕೆಯನ್ನೂ ನೀಡಿದರು.
ಆದರೆ, ರಾಷ್ಟ್ರ ರಾಜಕಾರಣದಲ್ಲಿ ಸುಮಾರು ಅರ್ಧ ಶತಕದ ಕಾಲ ಅಧಿಕಾರ ಅನುಭವಿಸಿರುವ ಕಾಂಗ್ರೆಸ್ಸಿಗರು, ಅಂದಿನಿಂದಲೂ ಮೈಗೂಡಿಸಿಕೊಂಡು ಬಂದಿರುವ ಸ್ವಹಿತಾಸಕ್ತಿಯಿಂದ ಹೊರ ಬರುವ ಯಾವುದೇ ಸೂಚನೆ ಕಂಡು ಬರುತ್ತಿಲ್ಲ. ಸದ್ಯ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯಿಂದ ತೆರವಾಗಿರುವ ಚನ್ನಪಟ್ಟಣ, ಶಾಸಕ ತುಕಾರಾಂ ರಾಜೀನಾಮೆಯಿಂದ ಖಾಲಿ ಇರುವ ಸಂಡೂರು ಹಾಗೂ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ರಾಜೀನಾಮೆ ಕಾರಣಕ್ಕೆ ತೆರವಾಗಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪ ಚುನಾವಣೆ ನಡೆಯಲಿದೆ. ಈ ಪೈಕಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಹೈಡ್ರಾಮಾವೇ ನಡೆದು ಹೋಯಿತು. ಕಾಂಗ್ರೆಸ್ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸುತ್ತಿದ್ದಂತೆಯೇ, ಶಿಗ್ಗಾಂವಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಸಿದ್ದರಾಮಯ್ಯನವರ ನಿಷ್ಠ ಎಂದು ಗುರುತಿಸಿಕೊಂಡಿರುವ ಸೈಯದ್ ಅಝೀಂ ಪೀರ್ ಖಾದ್ರಿ ಕೂಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಕೊನೆಯ ಕ್ಷಣದ ಕಸರತ್ತಿನ ನಂತರವಷ್ಟೇ ಅವರು ಒಲ್ಲದ ಮನಸ್ಸಿನಿಂದ ತಮ್ಮ ನಾಮಪತ್ರ ಹಿಂಪಡೆದರು. ಆದರೆ, ನಾಮಪತ್ರ ಹಿಂಪಡೆದಿರುವ ಅವರು ಪಕ್ಷದ ಅಧಿಕೃತ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಗೆಲುವಿಗೆ ಒಮ್ಮನಸ್ಸಿನಿಂದ ಕೆಲಸ ಮಾಡುತ್ತಾರೆ ಎಂಬುದಕ್ಕೆ ಖಾತ್ರಿ ಏನೂ ಇಲ್ಲ. ಯಾಕೆಂದರೆ, ತಮ್ಮದೇ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾಂಗ್ರೆಸ್ ಪಕ್ಷದ ನಾಯಕರು ಕೆಲಸ ಮಾಡಿರುವ ಹೇರಳ ಉದಾಹರಣೆಗಳು ಕಾಂಗ್ರೆಸ್‌ನ ನೂರು ವರ್ಷಗಳ ಇತಿಹಾಸದಲ್ಲಿ ದೊರೆಯುತ್ತವೆ.
ಈ ವರದಿ ಓದಿದ್ದೀರಾ?: ಶಿಗ್ಗಾಂವಿ ಚುನಾವಣೆ | ಸೋಲಲು ನಿರ್ಧರಿಸಿದೆ ಕಾಂಗ್ರೆಸ್; ಗೆಲ್ಲುವ ಹಠದಲ್ಲಿ ಸತೀಶ್
ಸದ್ಯ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಪೈಕಿ, ಕಾಂಗ್ರೆಸ್ ಪಾಲಿಗೆ ಚನ್ನಪಟ್ಟಣ ಪ್ರತಿಷ್ಠಿತ ಕ್ಷೇತ್ರದಂತೆ ಕಂಡು ಬರುತ್ತಿದ್ದರೂ, ವಾಸ್ತವವಾಗಿ ಶಿಗ್ಗಾಂವಿ ಕ್ಷೇತ್ರವೇ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠಿತ ಕ್ಷೇತ್ರ. ಯಾಕೆಂದರೆ, ಸಿದ್ದರಾಮಯ್ಯನವರನ್ನು ಮುಡಾ ಹಗರಣದಲ್ಲಿ ಸಿಲುಕಿಸಿ, ಅವರನ್ನು ಪದಚ್ಯುತಗೊಳಿಸಲು ಹೊಂಚು ಹಾಕುತ್ತಿರುವ ಬಿಜೆಪಿಯಲ್ಲಿನ ಹಿರಿಯ ನಾಯಕರಾಗಿರುವ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಈ ಕ್ಷೇತ್ರದ ಅಭ್ಯರ್ಥಿ. ಬಿಜೆಪಿ ಕ್ಷೇತ್ರವಾದ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಗ್ಯಾರಂಟಿ ಯೋಜನೆಗಳ ಯಶಸ್ಸಿನ ಅಳತೆಗೋಲು ಕೂಡ ಆಗಲಿದೆ. ಹೀಗಾಗಿ ಶಿಗ್ಗಾಂವಿ ಕ್ಷೇತ್ರವೇ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠಿತ ಕ್ಷೇತ್ರ. ಆದರೆ, ಈ ಕ್ಷೇತ್ರದಲ್ಲಿ ಆರಂಭದಲ್ಲೇ ಬಂಡಾಯ ಕಾಣಿಸಿಕೊಂಡಿದ್ದು, ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಗೆಲುವಿನ ಓಟಕ್ಕೆ ಇದು ತೊಡಕಾದರೂ ಅಚ್ಚರಿಯಿಲ್ಲ.
ಕಾಂಗ್ರೆಸ್ ಪದೇ ಪದೇ ಎಡವುತ್ತಿರುವುದೇ ಇಂತಹ ಒಳ ಜಗಳಗಳಿಂದ. ಪ್ರಜಾಸತ್ತಾತ್ಮಕ ನೆಲೆಯಲ್ಲಿ ಸ್ಥಾಪನೆಗೊಂಡ ಯಾವುದೇ ರಾಜಕೀಯ ಪಕ್ಷದಲ್ಲಿ ಆಂತರಿಕ ಭಿನ್ನಮತ ನಿರಂತರವಾಗಿ ಹೊಗೆಯಾಡುವುದು ಸಹಜ ಸಂಗತಿ. ಆದರೆ, ಅಂತಹ ಭಿನ್ನಮತ ಪಕ್ಷದ ಹಿತಾಸಕ್ತಿಗೇ ಮಾರಕವಾಗುವಂತಿದ್ದರೂ, ಆ ಮೂಲಕ ತಮ್ಮ ಅಸ್ತಿತ್ವಕ್ಕೂ ಧಕ್ಕೆಯಾಗುವಂತಿದ್ದರೂ, ವೈಯಕ್ತಿಕ ಪ್ರತಿಷ್ಠೆಯನ್ನು ಹಿಂದೆ ಸರಿಸಲು ಕಾಂಗ್ರೆಸ್ ನಾಯಕರು ಸಿದ್ಧರಿಲ್ಲದಿರುವುದೇ ಆ ಪಕ್ಷದ ಈಗಿನ ದಯನೀಯ ಪರಿಸ್ಥಿತಿಗೆ ಕಾರಣ. ಬಿಜೆಪಿಯಲ್ಲಿರುವ ಶೇ. 40ಕ್ಕೂ ಹೆಚ್ಚು ಸಂಸದರು ಕಾಂಗ್ರೆಸ್ ಮೂಲದವರು ಎಂಬುದೇ ಕಾಂಗ್ರೆಸ್ ನಾಯಕರ ಅಧಿಕಾರ ದಾಹಕ್ಕೆ ಸಾಕ್ಷಿ ನುಡಿಯುತ್ತಿದೆ.
ಮತ್ತೊಂದೆಡೆ, ರಾಜ್ಯ ಬಿಜೆಪಿಯೊಳಗೂ ಆಂತರಿಕ ಭಿನ್ನಮತವಿದ್ದರೂ, ಹೈಕಮಾಂಡ್‌ನ ಭೀತಿಯಿಂದ ಅದು ರಣಾರಂಪವಾಗುತ್ತಿಲ್ಲ. ಒಂದು ಕಾಲದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡಾ ಇಷ್ಟೇ ಬಲಿಷ್ಠವಾಗಿತ್ತು. ಕರ್ನಾಟಕ ಕಂಡ ಪ್ರಾಮಾಣಿಕ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಅವರ ಅನಾರೋಗ್ಯ ಮುಂದು ಮಾಡಿ, ನಿಂತ ನಿಲುವಿನಲ್ಲೇ ಮುಖ್ಯಮಂತ್ರಿ ಹುದ್ದೆಯಿಂದ ತೆಗೆಯುವ ಹಾಗೂ ಅವರ ಸ್ಥಾನಕ್ಕೆ ಸಮಾಜವಾದಿ ನಾಯಕ ಎಸ್ ಬಂಗಾರಪ್ಪರನ್ನು ನೇಮಿಸುವ ಧಾರ್ಷ್ಟ್ಯ ಪ್ರದರ್ಶಿಸಿದ್ದರು ಅಂದಿನ ಪ್ರಧಾನಿ ರಾಜೀವ್ ಗಾಂಧಿ. ಹಾಗೆಯೇ ಎಸ್ ಬಂಗಾರಪ್ಪನವರ ಜಾಗಕ್ಕೆ ಎಂ ವೀರಪ್ಪ ಮೊಯ್ಲಿಯವರನ್ನು ಕೇವಲ ಪತ್ರವೊಂದರ ಮೂಲಕ ನೇಮಕ ಮಾಡಿದ ಪಕ್ಷ ಕೂಡ ಕಾಂಗ್ರೆಸ್.
ಹಾಗಂತ, ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷವೊಂದು ನಿರಂಕುಶಾಧಿಕಾರ ಹೊಂದಿರಬೇಕು ಎಂದಲ್ಲ. ಆದರೆ, ಪಕ್ಷವು ತೀವ್ರ ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದಾಗ, ಪಕ್ಷದ ಆಣತಿಯನ್ನು ಪಾಲಿಸಿ, ಅದನ್ನು ಬಲಿಷ್ಠಗೊಳಿಸಲು ಎಲ್ಲ ನಾಯಕರೂ ದುಡಿಯಬೇಕಾಗುತ್ತದೆ. ಈ ವಿಚಾರದಲ್ಲಿ ಬಿಜೆಪಿ ಇತರೆಲ್ಲ ಪಕ್ಷಗಳಿಗೆ ಮಾದರಿಯಾಗಿದೆ. ಕೇವಲ ಒಂದು ಲೋಕಸಭಾ ಸಂಸದರನ್ನು ಹೊಂದಿದ್ದ ಬಿಜೆಪಿ, ಇಂದು, ಇಡೀ ದೇಶದ ಚುಕ್ಕಾಣಿ ಹಾಗೂ ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ಹಿಡಿಯುವಲ್ಲಿ ಆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿನ ಈ ಶಿಸ್ತು, ಬದ್ಧತೆ, ಒಗ್ಗಟ್ಟು ಹಾಗೂ ಅರ್ಪಣಾ ಮನೋಭಾವ ಪ್ರಮುಖ ಕಾರಣ. ಆದರೆ, ಸುಮಾರು ಅರ್ಧ ಶತಕಕ್ಕೂ ಹೆಚ್ಚು ಕಾಲ ಅಧಿಕಾರ ಅನುಭವಿಸಿರುವ ಕಾಂಗ್ರೆಸ್ ನಾಯಕರಲ್ಲಿ ಈ ಗುಣ ಬೂದುಗನ್ನಡಿ ಹಾಕಿ ಹುಡುಕಿದರೂ ದೊರೆಯುವುದಿಲ್ಲ. ಯಾವುದೇ ಪಕ್ಷವೊಂದು ಇತಿಹಾಸದ ಪುಟ ಸೇರುವಂತಾಗುವುದೇ ಆ ಪಕ್ಷದಲ್ಲಿನ ನಾಯಕರ ಸ್ವಹಿತಾಸಕ್ತಿ, ಸ್ವಪ್ರತಿಷ್ಠೆಗಳಿಂದ. ಅದರಿಂದ ನೇರ ಸಂತ್ರಸ್ತರಾಗುವುದು ಮಾತ್ರ ಆಯಾ ಪಕ್ಷಗಳ ಕಟ್ಟಾ ಬೆಂಬಲಿಗರು ಹಾಗೂ ಕಾರ್ಯಕರ್ತರು.
”ಒಗ್ಗಟ್ಟಿನಲ್ಲಿ ಬಲವಿದೆ” ಎಂಬ ನಾಣ್ಣುಡಿ ಹಲವಾರು ಶತಮಾನಗಳಿಂದ ಚಾಲ್ತಿಯಲ್ಲಿದೆ. ಇದು ಎಷ್ಟು ಸತ್ಯ ಎಂಬುದು ತಿಳಿದಿದ್ದರೂ, ಮನುಷ್ಯ ಮಾತ್ರ ವೈಯಕ್ತಿಕ ಸ್ವಾರ್ಥ, ದ್ವೇಷ ಮತ್ತು ಅಸೂಯೆಯಿಂದ ಪರರಿಗೆ ಕೇಡು ಬಯಸುವುದರಲ್ಲೇ ಸುಖ ಕಾಣುತ್ತಾ ಸಾಗುತ್ತಿದ್ದಾನೆ. ಇಂಥ ಸ್ವಾರ್ಥ ಲಾಲಸೆ ಎಂಥ ಬಲಿಷ್ಠ ಪಕ್ಷವನ್ನೂ ಹೇಗೆ ದುರ್ಬಲಗೊಳಿಸಿ, ದಯನೀಯ ಸ್ಥಿತಿಗೆ ದೂಡಬಹುದು ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿ ತಾಜಾ ಉದಾಹರಣೆ.
ಈಗಲೂ ಕಾಲ ಮಿಂಚಿಲ್ಲ. ಕಾಂಗ್ರೆಸ್ಸಿಗರು ಮತ್ತೆ ತಮ್ಮ ಹಿಂದಿನ ಸುವರ್ಣ ಇತಿಹಾಸವನ್ನು ಮರುಸ್ಥಾಪಿಸಬೇಕಿದ್ದರೆ, ವೈಯಕ್ತಿಕ ಹಿತಾಸಕ್ತಿ, ದ್ವೇಷ ಹಾಗೂ ಅಸೂಯೆಯನ್ನು ಬದಿಗಿರಿಸಿ, ಪಕ್ಷದ ಏಳ್ಗೆಗೆ ಒಗ್ಗಟ್ಟಾಗಿ ದುಡಿಯಬೇಕಿದೆ. ಅದರಿಂದ ಕಾಂಗ್ರೆಸ್ ತನ್ನ ಹಳೆಯ ವೈಭವಕ್ಕೆ ಮರಳಲು ಸಾಧ್ಯವಾದರೆ, ಅದರ ಮೊದಲ ಫಲಾನುಭವಿಗಳು ಪಕ್ಷದ ಮೊದಲ ಸಾಲಿನ ನಾಯಕರೇ ಆಗಿರುತ್ತಾರೆ. ಈ ನಿಟ್ಟಿನಲ್ಲಿ ಖರ್ಗೆ ಅವರ ‘ಪಕ್ಷದಲ್ಲಿ ಯಾರಿಗೇ ನೋವಾದರೂ, ಅದರಿಂದ ಹಾನಿಯಾಗುವುದು ಪಕ್ಷಕ್ಕೇ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ’ ಎಂಬ ಹಿತವಚನವನ್ನು ಕಾಂಗ್ರೆಸ್‌ನ ಹಿರಿಯ ನಾಯಕರು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ, ಕಾಂಗ್ರೆಸ್ ಶಾಶ್ವತವಾಗಿ ಅಧಿಕಾರಹೀನವಾದರೂ ಅಚ್ಚರಿಯಿಲ್ಲ.