ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಗೆ ದೇಶಾದ್ಯಂತ ಆಕ್ರೋಶ ಉಂಟಾಗಿದೆ. ಈ ನಡುವೆ ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ ನಂತರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಸಂಸತ್ತಿನಲ್ಲಿ ಪ್ರಧಾನಿ ಅವರು ವಿಸ್ತೃತ ಹೇಳಿಕೆ ನೀಡುವಂತೆ ಒತ್ತಾಯಿಸಿದರು.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, “ಮಣಿಪುರ ಹೊತ್ತಿ ಉರಿಯುತ್ತಿದೆ, ಮಹಿಳೆಯರ ಮೇಲೆ ಅತ್ಯಾಚಾರ, ಬೆತ್ತಲೆ ಮೆರವಣಿಗೆ, ಭೀಕರ ಹಿಂಸಾಚಾರ ನಡೆಯುತ್ತಿದೆ. ಆದರೆ ಪ್ರಧಾನಿಯವರು ಇಂದಿನವರೆಗೂ ಮೌನವಾಗಿದ್ದು, ಸಂಸತ್ತಿನ ಹೊರಗೆ ಮಾತ್ರ ಹೇಳಿಕೆ ನೀಡಿದ್ದಾರೆ” ಎಂದು ಪ್ರಧಾನಿ ನಡೆಯನ್ನು ಟೀಕಿಸಿದರು.
“ನಾವು ಮಣಿಪುರದ ಬಗ್ಗೆ ವಿಸ್ತೃತ ಚರ್ಚೆಯನ್ನು ಬಯಸುತ್ತೇವೆ. ಪ್ರಧಾನಿ ಮೋದಿ ಅವರು ಸದನದಲ್ಲಿ ಅದರ ಬಗ್ಗೆ ವಿವರವಾದ ಹೇಳಿಕೆಯನ್ನು ನೀಡಬೇಕು. ಮಣಿಪುರ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು ಮತ್ತು ಕೂಡಲೇ ಕಣಿವೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ನಾವು ಒತ್ತಾಯಿಸುತ್ತೇವೆ “ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಸಂಸತ್ತಿನ ಮುಂಗಾರು ಅಧಿವೇಶನವು ಮಣಿಪುರ ಹಿಂಸಾಚಾರದ ಗದ್ದಲದೊಂದಿಗೆ ಪ್ರಾರಂಭವಾಯಿತು. ಉಭಯ ಸದನಗಳನ್ನು ಸೋಮವಾರದವರೆಗೆ ಮುಂದೂಡಲಾಯಿತು. ಲೋಕಸಭೆಯು ಮಧ್ಯಾಹ್ನ 2 ಗಂಟೆಗೆ ಸಮಾವೇಶಗೊಳ್ಳುತ್ತಿದ್ದಂತೆ ಹಲವು ವಿರೋಧ ಪಕ್ಷದ ನಾಯಕರು ‘ಮಣಿಪುರ ಮಣಿಪುರ’ ಮತ್ತು ‘ಮಣಿಪುರ ಉರಿಯುತ್ತಿದೆ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ‘ಪೊಲೀಸರೆ ಯುವಕರ ಗುಂಪಿನೊಳಗೆ ಬಿಟ್ಟರು’ ಎಂದು ಆಘಾತಕಾರಿ ಅನುಭವ ಬಿಚ್ಚಿಟ್ಟ ಬೆತ್ತಲೆಗೊಳಗಾದ ಮಹಿಳೆ
79 ದಿನಗಳ ನಂತರ ಮಣಿಪುರ ಕುರಿತು ಪ್ರಧಾನಿ ಮೋದಿ ಹೇಳಿಕೆ
ಸಂಸತ್ ಅಧಿವೇಶನದ ಮೊದಲು, ಮಣಿಪುರದ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ 79 ದಿನಗಳ ನಂತರ ಮೊದಲ ಹೇಳಿಕೆ ನೀಡಿದರು. “ಇದು ಯಾವುದೇ ಸಮಾಜಕ್ಕೆ ನಾಚಿಕೆಗೇಡಿನ ಘಟನೆ. ಇದನ್ನು ಯಾರು ಮಾಡಿದರು ಮತ್ತು ಯಾರು ಹೊಣೆ ಎಂಬುದು ಮತ್ತೊಂದು ವಿಷಯ. ಆದರೆ ಇದು ನಮ್ಮ ದೇಶಕ್ಕೆ ನಾಚಿಕೆಗೇಡು ಉಂಟು ಮಾಡಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಬಿಗಿಗೊಳಿಸುವಂತೆ ನಾನು ಎಲ್ಲ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಅದು ರಾಜಸ್ಥಾನ, ಛತ್ತೀಸ್‌ಗಢ ಅಥವಾ ಮಣಿಪುರವೇ ಆಗಿರಲಿ… ಮಹಿಳೆಯ ಗೌರವದ ವಿಷಯವು ಎಲ್ಲ ರಾಜಕೀಯಕ್ಕಿಂತ ಮಿಗಿಲಾಗಿದೆ” ಎಂದು ಹೇಳಿದ್ದರು.
ಮೇ 4 ರಂದು ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಕೆಲವು ಪುರುಷರು ಬೆತ್ತಲೆಯಾಗಿ ಮೆರವಣಿಗೆ ಮಾಡುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಕಾರಣವಾದ ಪ್ರಮುಖ ಆರೋಪಿಯನ್ನು ಗುರುವಾರ(ಜುಲೈ 20) ಬಂಧಿಸಲಾಗಿದೆ.