ಮಣಿಪುರ ಹಿಂಸಾಚಾರದ ಬಗ್ಗೆ ಸದನದಲ್ಲಿ ನಿಯಮ 267ರಡಿ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಸದನದಲ್ಲಿ ನಿಯಮ 267ರ ಅಡಿಯಲ್ಲಿ ಚರ್ಚೆ ನಡೆಯಬೇಕು. ಆದರೆ ಮೋದಿ ಸರ್ಕಾರದ ಕೆಲ ಸಚಿವರು 176ರ ಅಡಿ ಅಲ್ಪಾವಧಿ ಚರ್ಚೆ ಮಾತ್ರ ನಡೆಯಲಿ ಎಂದು ಹೇಳುತ್ತಿದ್ದಾರೆ. ಮತ್ತೊಬ್ಬ ಸಚಿವರು ಕೇವಲ ಅರ್ಧ ಗಂಟೆ ಚರ್ಚೆ ಎಂದು ಹೇಳುತ್ತಾರೆ. ಈ ಬಗ್ಗೆ ನಾವು ರಾಜ್ಯಸಭಾ ಅಧ್ಯಕ್ಷರು ಮತ್ತು ಲೋಕಸಭೆಯ ಸ್ಪೀಕರ್‌ಗೆ ವಿನಂತಿಸುತ್ತೇವೆ. ತಮ್ಮ ಮೇಲಿನ ಸಾಂವಿಧಾನಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ಮೋದಿ ಸರ್ಕಾರ ಮತ್ತು ಬಿಜೆಪಿ ಓಡಿಹೋಗುವಂತಿಲ್ಲ” ಎಂದು ಹೇಳಿದರು.
“ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಪ್ರಧಾನಿ ಸದನದ ಹೊರಗೆ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನ ಒಳಗೆ ಸಮಗ್ರ ಹೇಳಿಕೆ ನೀಡುವುದು ಅವರ ಕರ್ತವ್ಯ. ಆದ್ದರಿಂದ, ಮಣಿಪುರದ ಪರಿಸ್ಥಿತಿ ಏನೆಂಬುದರ ಬಗ್ಗೆ ಪ್ರಧಾನಿ ಹೇಳಿಕೆ ನೀಡಬೇಕು ಎಂದು ಖರ್ಗೆ ತಿಳಿಸಿದ್ದಾರೆ.
ಏನಿದು 267 ಮತ್ತು 176ರ ನಿಯಮ?
ನಿಯಮ 267:
ಸಂಸತ್ತಿನ ನಿಯಮ 267ರ ಅನ್ವಯ ಯಾವುದೇ ವಿಷಯದ ಬಗ್ಗೆ ಸುದೀರ್ಘವಾದ ಚರ್ಚೆಗೆ ಅವಕಾಶ ಕೊಡುವುದು. ಸದಸ್ಯರೊಬ್ಬರು ಸಭಾಧ್ಯಕ್ಷ ಅಥವಾ ಸಭಾಪತಿಗಳ ಅನುಮತಿ ಮೇರೆಗೆ ಈ ನಿಯಮದಡಿ ಚರ್ಚೆಗೆ ಆಗ್ರಹಿಸಬಹುದು. ಒಂದು ವೇಳೆ ಸಭಾಧ್ಯಕ್ಷ ಅಥವಾ ಸಭಾಪತಿ ಒಪ್ಪಿಗೆ ನೀಡಿದರೆ, ವಿಚಾರವೊಂದರ ಬಗ್ಗೆ ಎಷ್ಟು ಗಂಟೆ ಅಥವಾ ಎಷ್ಟು ದಿನಗಳವರೆಗೆ ಬೇಕಾದರೂ ಚರ್ಚಿಸಬಹುದು. ಬೇರೆ ನಿಯಮಗಳನ್ನು ತೆಗೆದು ಪಕ್ಕಕ್ಕಿಡಬಹುದು.
ನಿಯಮ 176:
ಸಂಸತ್ತಿನ ನಿಯಮ 176 ಅನ್ವಯ ಯಾವುದೇ ವಿಷಯವನ್ನು ಎರಡೂವರೆ ಗಂಟೆಗಳ ವರೆಗೆ ಚರ್ಚೆ ನಡೆಸಬಹುದು. ಇದನ್ನು ದಾಟಿ ಮುಂದಕ್ಕೆ ಹೋಗುವಂತಿಲ್ಲ. ಈ ಎರಡೂವರೆ ಗಂಟೆಗಳ ಅವಧಿಯಲ್ಲಿ ನಿಗದಿತ ವಿಷಯದ ಬಗ್ಗೆ ಚರ್ಚೆ ಮುಗಿಸಬೇಕು. ಆಗ ಕಡಿಮೆ ಸದಸ್ಯರಿಗೆ ಮತ್ತು ಕಡಿಮೆ ಅವಧಿಯ ಸಮಯ ಸಿಗುತ್ತದೆ.
ವಿಪಕ್ಷಗಳ ವಾದ:
ನಿಯಮ 267ರ ಅನ್ವಯ ಅವಕಾಶ ನೀಡದೇ, 176ರ ಅನ್ವಯ ಅವಕಾಶ ನೀಡಿದರೆ, ಚರ್ಚೆಗೆ ಸಮಯ ಸಾಕಾಗುವುದಿಲ್ಲ ಎಂದು ವಿಪಕ್ಷಗಳು ಹೇಳುತ್ತಿವೆ. ಕಳೆದ ಎರಡು ತಿಂಗಳಿಂದ ಮಣಿಪುರ ಗದ್ದಲ ಮುಂದುವರಿದಿದ್ದು ಈ ಬಗ್ಗೆ ಸುದೀರ್ಘ ಚರ್ಚೆಯಾಗಬೇಕು. ಪ್ರಧಾನಿಗಳೇ ಉತ್ತರ ನೀಡಬೇಕು ಎಂಬುದು ಪ್ರತಿಪಕ್ಷಗಳ ಆಗ್ರಹ.
ಸರಕಾರದ ವಾದ:
ಮಣಿಪುರ ಗದ್ದಲ ಬಗ್ಗೆ ಚರ್ಚೆ ನಡೆಸಲು ನಿಯಮ 176 ಸಾಕು. ಅಲ್ಲದೆ ಪ್ರಧಾನಿಯವರೇ ಉತ್ತರ ಕೊಡಬೇಕು ಎಂದೇನಿಲ್ಲ. ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಕೊಡುತ್ತಾರೆ ಎಂದಿದೆ. ಆದರೆ ಇದಕ್ಕೆ ವಿಪಕ್ಷಗಳು ಒಪ್ಪಿಗೆ ನೀಡಿಲ್ಲ.