- ಹೈಕಮಾಂಡ್ ಒಪ್ಪಿಗೆ ನೀಡಿದರೆ ಖೂಬಾ ವಿರುದ್ಧ 200 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡುವೆ
- ಭಗವಂತ ಖೂಬಾ ಸಚಿವರಾದ ಮೇಲೆ ಬೀದರ್ ಬಿಜೆಪಿ ಒಡೆದು ಹೋಳಾಗಿದೆ
ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ, ಬೀದರ್ ಸಂಸದ ಭಗವಂತ ಖೂಬಾ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರು ಪಕ್ಷದ ವಿರುದ್ಧವಾಗಿ ಕೆಲಸ ಮಾಡಿರುವುದು ಬಹಿರಂಗವಾಗಿದೆ. ಹೀಗಿರುವಾಗ, ‘ನಾನು ಕಾಂಗ್ರೆಸ್ ನಾಯಕರ ಜೊತೆಗೆ ಸೇರಿಕೊಂಡು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೇನೆ’ ಎಂದು ಅವರೇ ಆರೋಪಿಸಿರುವುದನ್ನು ಗಮನಿಸಿದರೆ ʼಉಲ್ಟಾ ಚೋರ್ – ಕೋತ್ವಾಲ್ ಕೊ ಡಾಟೆʼ ಎಂಬಂತಾಗಿದೆ ಎಂದು ಮಾಜಿ ಸಚಿವ ಪ್ರಭು ಚವ್ಹಾಣ ಕಿಡಿಕಾರಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಔರಾದ ಶಾಸಕ ಪ್ರಭು ಚವ್ಹಾಣ ಮಧ್ಯೆ ಶೀತಲ ಸಮರ ಮುಂದುವರೆದಿದೆ. ಸಚಿವ ಖೂಬಾ ಮಾಡಿದ ಆರೋಪಕ್ಕೆ ಚವ್ಹಾಣ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
“ಭಗವಂತ ಖೂಬಾ ತಲೆಬುಡವಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರ ಬಗ್ಗೆ ಎಲ್ಲೆಡೆಯಿಂದ ಬರುತ್ತಿರುವ ಅತೃಪ್ತಿ, ಅಸಮಾಧಾನಗಳನ್ನು ಕಂಡು ಹತಾಶರಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ ಎನಿಸುತ್ತದೆ. ನಾನು ಮೂರು ದಶಕದಿಂದ ಬಿಜೆಪಿ ನಿಷ್ಠಯಿಂದ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಆದರೆ ಸದಾ ಪಕ್ಷದವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿರುವ ಭಗವಂತ ಖೂಬಾ ಅವರು ನಾನು ಹೊಂದಾಣಿಕೆ ರಾಜಕಾರಣ ಮಾಡುತ್ತಿರುವೆ ಎಂದು ಹೇಳಿ ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದಾರೆ. ಖೂಬಾ ಅವರ ಹೇಳಿಕೆ ನಾನು ಖಂಡಿಸುತ್ತೇನೆ. ಅವರಿಗೆ ದಮ್ ಇದ್ದರೆ ನಾನು ಹೊಂದಾಣಿಕೆ ರಾಜಕಾರಣ ಮಾಡಿರುವುದನ್ನು ಸಾಬೀತುಪಡಿಸಲಿ. ಖೂಬಾ ನನ್ನ ವಿರುದ್ಧ ಸುಳ್ಳು, ಅರ್ಥಹೀನ ಆರೋಪ ಮಾಡಿದ್ದಾರೆ. ಈ ಬಗ್ಗೆ ವರಿಷ್ಠರ ಜೊತೆಗೆ ಮಾತನಾಡುವೆ. ವರಿಷ್ಠರು ಒಪ್ಪಿಗೆ ನೀಡಿದರೆ ಖೂಬಾ ವಿರುದ್ಧ 200 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ” ಎಂದು ಸವಾಲು ಹಾಕಿದ್ದಾರೆ.
ಮೋದಿ ಅಲೆಯಲ್ಲಿ ಗೆದ್ದ ಖೂಬಾ ಲಕ್ಕಿಮ್ಯಾನ್
“ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಗೆದ್ದಿರುವ ಖೂಬಾ ಲಕ್ಕಿಮ್ಯಾನ್. ಅವರಿಗೆ ಪಕ್ಷ, ಸಂಘಟನೆ ಏನೂ ಗೊತ್ತಿಲ್ಲ. ಪಕ್ಷದ ಯಾವೊಬ್ಬ ಕಾರ್ಯಕರ್ತರಿಗೂ ಬೆಳೆಸಿಲ್ಲ. ಏನಿದ್ದರೂ ಅವರ ಪರಿವಾರ ಬೆಳೆಸುವ ಕೆಲಸ ಮಾಡಿದ್ದಾರೆ. ಇಲಾಖೆಗೊಬ್ಬ ಗುತ್ತಿಗೆದಾರರನ್ನು ತಮ್ಮ ಪರಿವಾರದವರಿಗೆ ನಿಯೋಜಿಸಿ ಹಣ ಗಳಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡುತ್ತ ಸ್ವತಃ ಕಾಂಗ್ರೆಸ್ ಇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ತಾನು ತಪ್ಪು ಮಾಡಿ ಮತ್ತೊಬ್ಬರ ಮೇಲೆ ಆರೋಪ ಹೊರಿಸುತ್ತಿರುವುದು ಸಹಿಸಲಾಗದು” ಎಂದು ಚವ್ಹಾಣ್ ಎಚ್ಚರಿಕೆ ನೀಡಿದ್ದಾರೆ.
“ಕೇಂದ್ರದ ಸಚಿವ ಸಂಪುಟದಲ್ಲಿ ಬಿಜೆಪಿಗೇ ದ್ರೋಹ ಬಗೆಯುತ್ತಿರುವ ಭಗವಂತ ಖೂಬಾ ಅವರು ಸಚಿವರಾಗಿರುವುದು ಅತ್ಯಂತ ನೋವು ತಂದಿದೆ. ತಾಯಿಗೆ ಸಮಾನ ಎಂದು ತಿಳಿದು ನಾವೆಲ್ಲ ಬಿಜೆಪಿಯಲ್ಲಿ ಸಕ್ರಿಯವಾಗಿದ್ದೇವೆ. ಆದರೆ ಬಿಜೆಪಿಯಲ್ಲೇ ಇದ್ದುಕೊಂಡು, ಬಿಜೆಪಿಯ ವಿರುದ್ಧವಾಗಿ ಕೆಲಸ ಮಾಡುವ ಮೂಲಕ ಭಗವಂತ ಖೂಬಾ ಅವರು ತಾಯಿಗೆ ಧೋಖಾ ಮಾಡಿದ್ದಾರೆ. ಇಂಥವರು ಸರ್ಕಾರದ ಉನ್ನತ ಸ್ಥಾನದಲ್ಲಿ ಇದ್ದಿರುವುದು ಸೋಜಿಗದ ಸಂಗತಿ ಎನಿಸಿದೆ. ಇದು ಬಿಜೆಪಿಯ ನಿಷ್ಠಾವಂತ ಅಸಂಖ್ಯಾತ ಕಾರ್ಯಕರ್ತರಿಗೆ ಆಘಾತ ತಂದಿದೆ” ಎಂದಿದ್ದಾರೆ.
ಖೂಬಾ ಅವರಿಂದ ಬೀದರ್ ಬಿಜೆಪಿ ಒಡೆದ ಮನೆಯಾಗಿದೆ:
“ಮೋದಿ ಅಲೆಯಲ್ಲಿ ಗೆದ್ದಿದ್ದೇನೆ. ಇನ್ಮುಂದೆ ನನಗ್ಯಾರೂ ಕೈಹಿಡಿಯುವವರಿಲ್ಲ ಎಂದು ದರ್ಪದ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಸ್ವಾರ್ಥ, ವೈಯಕ್ತಿಕ ಸ್ವಾರ್ಥಕ್ಕಾಗಿ ತಮ್ಮದೇ ಗುಂಪು ಕಟ್ಟಿಕೊಂಡು ತಿರುಗುತ್ತಿದ್ದಾರೆ. ಅನೇಕರ ತ್ಯಾಗ, ಶ್ರಮದಿಂದ ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಲಾಗಿದೆ. ಆದರೆ ಖೂಬಾ ಸಂಸದ, ಸಚಿವರಾದ ಮೇಲೆ ಬೀದರ್ ಬಿಜೆಪಿ ಒಡೆದು ಹೋಳಾಗಿದೆ. ನಿತ್ಯ ಗುಂಪುಗಾರಿಕೆ ಮಾಡುವ ಮೂಲಕ ಖೂಬಾ ಅವರು ಜಿಲ್ಲೆಯಲ್ಲಿ ಬಿಜೆಪಿ ಹಾಳು ಮಾಡಲು ಮುಂದಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಭಗವಂತ ಖೂಬಾ ಭಾರಿ ಪ್ರಯತ್ನ ಮಾಡಿದರು. 33 ಬೆಂಬಲಿಗರಿಗೆ ಪಕ್ಷ ವಿರೋಧಿ ಕೆಲಸಕ್ಕೆ ಸಿದ್ಧಮಾಡಿದರು. 300 ಜನರ ಗುಂಪು ಕಟ್ಟಿಸಿ ನನ್ನ ವಿರುದ್ಧ ಪ್ರಚಾರ ಮಾಡಿಸಿದರು. ಕಾಂಗ್ರೆಸ್ ಅಭ್ಯರ್ಥಿಗೆ ಎಲ್ಲ ರೀತಿಯಿಂದ ಗೆಲ್ಲಿಸಲು ಸಹಕಾರ ನೀಡಿರುವುದು ರಹಸ್ಯವಾಗಿ ಉಳಿದಿಲ್ಲ. ಇವತ್ತು ಅದೇ ಪಕ್ಷ ವಿರೋಧಿಗಳನ್ನು ತಮ್ಮ ಜೊತೆಯಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ ಇದು ಪಕ್ಷನಿಷ್ಟೆನಾ ?” ಎಂದು ಪ್ರಶ್ನಿಸಿದ್ದಾರೆ.
ಖೂಬಾ ಅವರಿಂದ ನನ್ನ ಜೀವಕ್ಕೆ ಅಪಾಯ:
“ಖೂಬಾ ಅವರಂಥ ಪಕ್ಷ ವಿರೋಧಿಗಳ ಮೇಲೆ ಕೂಡಲೇ ಕ್ರಮ ಜರುಗಿಸುವ ಅಗತ್ಯವಿದೆ. ಇಲ್ಲದಿದ್ದರೆ ಬರುವ ಕೆಲವೇ ದಿನಗಳಲ್ಲಿ ಬೀದರ್ ಜಿಲ್ಲೆಯ ಬಿಜೆಪಿಗೆ ಬಹುದೊಡ್ಡ ಡ್ಯಾಮೇಜ್ ಆಗುವುದು ಖಚಿತವೆನಿಸುತ್ತಿದೆ. ಅವರು ಕೆಲ ಗುಂಡಾಗಳನ್ನು ಖೂಬಾ ಅವರು ಇಟ್ಟುಕೊಂಡು ಎಲ್ಲ ಕಡೆ ಸುತ್ತಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಇವರಿಂದ ನನ್ನ ಜೀವಕ್ಕೂ ಅಪಾಯ ಬರಬಹುದಾಗಿದೆ. ಈ ಆತಂಕ ನನಗೆ ಕಾಡುತ್ತಿದೆ” ಎಂದಿದ್ದಾರೆ.
ಭಗವಂತ ಖೂಬಾಗೆ ಲೋಕಸಭೆ ಟಿಕೆಟ್ ಕೊಡಬಾರದು:
ಬೀದರ್ ಕ್ಷೇತ್ರದಿಂದ ಮತ್ತೆ ಬಿಜೆಪಿ ಗೆಲ್ಲಬೇಕಾದರೆ ಯಾವುದೇ ಕಾರಣಕ್ಕೂ 2024ರ ಚುನಾವಣೆಯಲ್ಲಿ ಭಗವಂತ ಖೂಬಾ ಅವರಿಗೆ ಟಿಕೆಟ್ ನೀಡಬಾರದು. ಬಸವಕಲ್ಯಾಣ ಶಾಸಕರಾದ ಶರಣು ಸಲಗರ ಅವರು ಮರಾಠ ಸಮಾಜಕ್ಕೆ ಎಂಪಿ ಟಿಕೆಟ್ ನೀಡಬೇಕೆಂಬ ಆಗ್ರಹ ಮಾಡಿದ್ದಾರೆ. ಬರುವ ದಿನಗಳಲ್ಲಿ ಪಕ್ಷದ ಇನ್ನಷ್ಟು ನಾಯಕರು, ಕಾರ್ಯಕರ್ತರು ಈ ಬೇಡಿಕೆ ಮಂಡಿಸುವ ಸಾಧ್ಯತೆಗಳಿವೆ. ನಾನು ಪಕ್ಷದ ವಿರುದ್ಧ ಯಾವುದೇ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಪಕ್ಷ ವಿರೋಧಿ ಕೆಲಸ ಮಾಡುತ್ತಿರುವವರ ವಿರುದ್ಧ ನಿರಾತಂಕವಾಗಿ ಧ್ವನಿ ಎತ್ತುವೆ. ನನಗೆ ವ್ಯಕ್ತಿಗಿಂತ ಪಕ್ಷ ಮುಖ್ಯ” ಎಂದು ಪ್ರಭು ಚವ್ಹಾಣ ಪತ್ರಿಕಾ ಹೇಳಿಕೆ ಮೂಲಕ ಖೂಬಾ ವಿರುದ್ಧ ಗುಡುಗಿದ್ದಾರೆ.