ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣರಿಗೆ ಷರತ್ತುಬದ್ಧ ಜಾಮೀನು ನೀಡಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿದೆ.
ಇಂದು ಅರ್ಜಿಯ ವಿಚಾರಣೆ ನಡೆಸಿ, ಸಂಜೆ 5 ಗಂಟೆಗೆ ಕಾಯ್ದಿರಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್, ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ್ದಾರೆ. 5 ಲಕ್ಷಗಳ ಬಾಂಡ್ ನೀಡಬೇಕು, ಸಾಕ್ಷ್ಯಗಳನ್ನು ನಾಶ ಮಾಡಬಾರದು, ಸಾಕ್ಷಿಗಳ ಮೇಲೆ ಒತ್ತಡ ಹೇರುವಂತಿಲ್ಲ, ಪ್ರಕರಣ ದಾಖಲಾಗಿರುವ ಮಂಡ್ಯ ಜಿಲ್ಲೆಯ ಕೆ ಆರ್ ನಗರ ವ್ಯಾಪ್ತಿಗೆ ತೆರಳುವಂತಿಲ್ಲ, ಎಸ್‌ಐಟಿ ತನಿಖೆಗೆ ಸಹಕಾರ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.
ನ್ಯಾಯಾಲಯವು ಸಂಜೆ 6.45ಕ್ಕೆ ಜಾಮೀನು ಆದೇಶ ಹೊರಡಿಸಿರುವುದರಿಂದ ನಾಳೆ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಎಚ್ ಡಿ ರೇವಣ್ಣನವರಿಗೆ ಜಾಮೀನು ಸಿಕ್ಕಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಪರಪ್ಪನ ಅಗ್ರಹಾರ ಸುತ್ತಮುತ್ತ ಹಾಗೂ ಹಾಸನ, ಹೊಳೆನರಸೀಪುರದಲ್ಲಿ ಸೇರಿದ ರೇವಣ್ಣ ಬೆಂಬಲಿಗರು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಕಸ್ಟಡಿಗೆ ಮೇ 8ರವರೆಗೆ ನೀಡಲಾಗಿತ್ತು. ಮೇ8ರಂದು ಮತ್ತೆ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರಕುಮಾರ್ ಬಿ. ಕಟ್ಟಿಮನಿ ಅವರ ಮುಂದೆ ಹಾಜರುಪಡಿಸಿದಾಗ, “ರೇವಣ್ಣ ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ, ಅವರನ್ನು ಎಸ್‌ಐಟಿ ವಶಕ್ಕೆ ನೀಡಬೇಕು” ಎಂದು ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಕೋರಿದ್ದರು. ಇದಕ್ಕೆ ಒಪ್ಪದ ಪೀಠವು ರೇವಣ್ಣರನ್ನು ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಆದೇಶದ ಅನ್ವಯ ರೇವಣ್ಣ ಪರಪ್ಪನ ಅಗ್ರಹಾರಕ್ಕೆ ವಿಚಾರಣಾಧೀನ ಕೈದಿಯಾಗಿ ಹೋಗಿದ್ದರು. ಮಂಗಳವಾರ ಸಂಜೆ ರೇವಣ್ಣ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ನ್ಯಾಯಾಲಯದಲ್ಲಿ ಇಂದು ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯ್ಕ್ ಮತ್ತು ಜಯ್ನಾ ಕೊಠಾರಿ, “ಎಚ್ ಡಿ ರೇವಣ್ಣ ಕುಟುಂಬವು ರಾಜಕೀಯವಾಗಿ ಪ್ರಭಾವಿಯಾಗಿದೆ. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಹಾಸನ ಜಿಲ್ಲೆಗೆ ಬಿಡುಗಡೆಯಾಗಿದ್ದ 576 ಕೋಟಿ ರೂಪಾಯಿ ಅನುದಾನವನ್ನು ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ರೇವಣ್ಣ ಕುಟುಂಬದ ವಿರುದ್ಧ ಹಲವು ಚುನಾವಣಾ ಅಕ್ರಮದ ದೂರುಗಳನ್ನು ಸಲ್ಲಿಕೆ ಮಾಡಿದ್ದರೂ ಅವರ ಕುಟುಂಬ ಪ್ರಭಾವಶಾಲಿಯಾಗಿರುವ ಕಾರಣ ಅವೆಲ್ಲದರಲ್ಲೂ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಇಂಥ ಪರಿಸ್ಥಿತಿ ಇರುವಾಗ ಇವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶವಾಗದೇ ಉಳಿಯುತ್ತದೆಯೇ?” ಎಂದು ಬಲವಾಗಿ ವಾದಿಸಿದರು.
“ರೇವಣ್ಣ ಕುಟುಂಬ ಪಿತೂರಿ ನಡೆಸಿ ಸಂತ್ರಸ್ತೆಯನ್ನು ಅಪಹರಿಸಿದೆ. ಸಂತ್ರಸ್ತರ ಬದುಕು ಅಪಾಯದಲ್ಲಿದೆ. ರೇವಣ್ಣ ಅವರ ಪುತ್ರ ಸಂಸದ ಪ್ರಜ್ವಲ್ ತಲೆಮರೆಸಿಕೊಂಡಿದ್ದಾರೆ. ಇದು ಕೇವಲ ಅಪಹರಣ ಪ್ರಕರಣ ಅಲ್ಲ, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಕಿಡ್ನ್ಯಾಪ್ ಆಗಿದೆ. ಪ್ರಕರಣದಲ್ಲಿ ಯಾವುದೇ ಮಹಿಳೆಯರು ದೂರು ನೀಡದಂತೆ ತಡೆಯುವ ಯತ್ನ ಇದಾಗಿದೆ. ಎಚ್.ಡಿ. ರೇವಣ್ಣಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಕಿಡ್ನ್ಯಾಪ್ ಪ್ರಕರಣದಲ್ಲಿ ಕೆಲವರ ಹೇಳಿಕೆ ಸಿಆರ್‌ಪಿಸಿ 164 ಅಡಿಯಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ಹೇಳಿಕೆ ದಾಖಲಿಸಬೇಕು. ಅಲ್ಲದೇ, ಅನಾರೋಗ್ಯದ ಕಾರಣ ನೀಡಿ, ತನಿಖೆಗೂ ಸಹಕಾರ ನೀಡುತ್ತಿಲ್ಲ” ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪಿಸಿದ ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್, “ಸಂತ್ರಸ್ತೆ ಮಹಿಳೆಯು ಕಳೆದ ಹತ್ತು ವರ್ಷಗಳಿಂದ ರೇವಣ್ಣ ಮನೆಯಲ್ಲಿ ಮನೆ ಕೆಲಸದವರಾಗಿದ್ದಾರೆ. ಸಂತ್ರಸ್ತೆಯು ರೇವಣ್ಣ ಸಂಬಂಧಿಯಾಗಿದ್ದಾರೆ. ರಿಮ್ಯಾಂಡ್ ಅರ್ಜಿಯಲ್ಲಿನ ಎಲ್ಲ ಅಂಶಗಳು ತಪ್ಪಿನಿಂದ ಕೂಡಿವೆ. ಯಾವುದೇ ರೀತಿಯಲ್ಲಿಯೂ ಐಪಿಸಿ ಸೆಕ್ಷನ್ 364ಎ ಇಲ್ಲಿ ಅನ್ವಯವಾಗುವುದಿಲ್ಲ” ಎಂದು ಆಕ್ಷೇಪಿಸಿದರು.
ಇದಕ್ಕೂ ಮುನ್ನ, ಪ್ರಾಸಿಕ್ಯೂಷನ್ ಪರವಾಗಿ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಇದಕ್ಕೆ ಸಿ ವಿ ನಾಗೇಶ್ ಅವರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಅದರ ಒಂದು ಪ್ರತಿಯನ್ನೂ ಅವರಿಗೂ ನೀಡಲಾಯಿತು.
ಇದನ್ನು ಓದಿದ್ದೀರಾ? ಅತ್ಯಾಚಾರ ಪ್ರಕರಣ | ಬಿಜೆಪಿ ಮುಖಂಡ ದೇವರಾಜೇಗೌಡ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಎಲ್ಲ ವಾದ-ವಿವಾದಗನ್ನು ಆಲಿಸಿದ್ದ ನ್ಯಾಯಾಧೀಶರು, ಸಂಜೆ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸುವುದಾಗಿ ತಿಳಿಸಿದ್ದರು. ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಪುರಸ್ಕರಿಸಿ, ಷರತ್ತುಬದ್ಧ ಜಾಮೀನು ನೀಡಿದ್ದಾರೆ.
