ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಜೂ.14) ಗೃಹ ಕಚೇರಿ ಕೃಷ್ಣಾದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವ್ಯಾಪ್ತಿಯ ಪ್ರಗತಿ ಪರಿಶೀಲನೆ ನಡೆಸಿದರು.
ಕೆಕೆಆರ್‌ಡಿಬಿಗೆ ಚುನಾವಣಾ ಪ್ರಣಾಳಿಕೆಯಲ್ಲಿ ಹಾಗೂ ಆಯವ್ಯಯದಲ್ಲಿ ವರ್ಷಕ್ಕೆ 5,000 ಕೋಟಿ ರೂ. ಒದಗಿಸುವ ಭರವಸೆ ನೀಡಲಾಗಿದೆ. ಈ ಮೊತ್ತವನ್ನು ವೆಚ್ಚ ಮಾಡಲು ಅನುವಾಗುವಂತೆ ಜುಲೈ 15 ರೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸಿಎಂ ಸೂಚಿಸಿದರು.
“ಅನುಮೋದನೆಯಾದ ಟೆಂಡರ್ ಕರೆಯದೆ ಇರುವ ಕಾಮಗಾರಿಗಳಿಗೆ ಕೂಡಲೇ ಟೆಂಡರ್ ಕರೆಯಬೇಕು. ಕಾಮಗಾರಿಗಳ ಮೌಲ್ಯಮಾಪನ ಮಾಡಬೇಕು. ಒಟ್ಟು ರೂ. 14,228 ಕೋಟಿ ಅನುದಾನದಲ್ಲಿ ರೂ.10,342.90 ಕೋಟಿ ವೆಚ್ಚವಾಗಿದೆ. ರೂ.2885.90 ಕೋಟಿ ಉಳಿದಿದೆ. ಬಾಕಿ ಉಳಿದ ಕಾಮಗಾರಿಗಳ ಕುರಿತು ನಿಯಮಿತವಾಗಿ ಪ್ರಗತಿ ಪರಿಶೀಲನೆ ನಡೆಸಿ, ಅನುಷ್ಠಾನಕ್ಕೆ ಇರುವ ತೊಡಕುಗಳನ್ನು ನಿವಾರಿಸಬೇಕು” ಎಂದು ಹೇಳಿದರು.
“ಬಾಕಿ ಉಳಿದಿರುವ 3,528 ಕಾಮಗಾರಿಗಳನ್ನು ಜುಲೈ ಅಂತ್ಯದೊಳಗೆ ಪ್ರಾರಂಭಿಸಬೇಕು. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೃಜನೆಗೆ ಹೆಚ್ಚು ಒತ್ತು ನೀಡಬೇಕು” ಎಂದು ಸಲಹೆ ನೀಡಿದರು.
ಸಭೆಯ ಹೈಲೈಟ್ಸ್
ಎರಡು ವರ್ಷಗಳನ್ನು ಶೈಕ್ಷಣಿಕ ವರ್ಷ ಎಂದು ಘೋಷಿಸಿ, ಶೇ.25 ರಷ್ಟು ಅನುದಾನ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬೇಡಿಕೆ ಇದ್ದು, ಇದಕ್ಕೆ ಒತ್ತು ನೀಡಲು ತೀರ್ಮಾನಿಸಲಾಯಿತು.
ನಿಗದಿತ ಮಾನದಂಡಗಳಂತೆಯೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ 41 ಮಹಿಳಾ ಪದವಿ ಕಾಲೇಜು ಪ್ರಾರಂಭಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಇದನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಅರಣ್ಯೀಕರಕ್ಕೆ ಮತ್ತು ಶುದ್ಧ ಕುಡಿಯುವ ನೀರು, ಚೆಕ್ ಡ್ಯಾಂಗಳಿಗೆ ಆಧ್ಯತೆ ನೀಡುವ ಮೂಲಕ ಅಂತರ್ಜಲ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಂಡು, ಕಾರ್ಯಕ್ರಮಗಳನ್ನು ರೂಪಿಸುವಂತೆ ಸೂಚನೆ ನೀಡಿದರು.
