ಕೊಡಗು ಜಿಲ್ಲೆಯ ಮಡಿಕೇರಿ ನಗರದ ಗ್ರೇಟರ್ ರಾಜಾಸೀಟ್ ಕಾಮಗಾರಿಯಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ತೆನ್ನಿರಾ ಮೈನಾ ದೂರು ಸಲ್ಲಿಸಿದ್ದು, ಅದರ ಅನ್ವಯ ಕರ್ನಾಟಕ ಲೋಕಾಯುಕ್ತ ತನಿಖೆ ಕೈಗೆತ್ತಿಕೊಂಡಿದೆ.
ಸುಮಾರು ₹4.55 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರೇಟರ್ ರಾಜಾಸೀಟ್ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 2023ರ ಮಾರ್ಚ್ 18ರಂದು ಲೋಕಾರ್ಪಣೆ ಮಾಡಿದ್ದರು. ಕಾಮಗಾರಿ ನಿರ್ವಹಣೆ ಮಾಡಿದ ಮಡಿಕೇರಿ ಪಿಡಬ್ಲ್ಯೂಡಿ ಇಲಾಖೆ ಕಾಮಗಾರಿ ಅಪೂರ್ಣವಾಗಿರುವ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಗೆ ಹಸ್ತಾಂತರ ಮಾಡದೆ ಲೋಕಾರ್ಪಣೆ ಮಾಡಿದ್ದು, ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನಲೆಯಲ್ಲಿ ತೆನ್ನಿರಾ ಮೈನಾ ಅವರು 2023ರ ಮಾರ್ಚ್ 20ರಂದು, ʼಕಾಮಗಾರಿಯಲ್ಲಿ ಬಹುಕೋಟಿ ಅಕ್ರಮ ಹಾಗೂ ಕಳಪೆ ಕಾಮಗಾರಿ ನಡೆದಿದೆʼ ಎಂದು ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಮೂಲ ಎಂ ಬಿ ಪುಸ್ತಕವನ್ನು ನಾಶಪಡಿಸಿ, ನಕಲಿ ಎಂ ಬಿ ಪುಸ್ತಕ ರಚಿಸಿ ಒಂದು ಕೋಟಿ 58 ಲಕ್ಷದ 43 ಸಾವಿರದ 136 ರೂಗಳನ್ನು ಕಾನೂನು ಬಾಹಿರವಾಗಿ ಪಾವತಿ ಮಾಡಿರುವುದನ್ನು ಉಲ್ಲೇಖಿಸಿ ಮೂಲ ಎಂ ಬಿ ಪುಸ್ತಕ ಸಂಖ್ಯೆ 12086ರ ದೃಢೀಕೃತ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಕ್ಕಳ ದಸರಾ ಕಲಾಥಾನ್‌ಗೆ ಸಚಿವ ಹೆಚ್ ಸಿ ಮಹದೇವಪ್ಪ ಚಾಲನೆ
ವಿವರಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಾಲಯ, ಲೋಕಾಯುಕ್ತ ತಾಂತ್ರಿಕ ವಿಭಾಗದ ಅಧಿಕಾರಿ ತೇಜಶ್ರೀ ಬಿ ಮುದ್ದೋಡಿಯವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದು, 2024 ಅಕ್ಟೋಬರ್ 14 ಮತ್ತು 15ರಂದು ದೂರುದಾರರು ಹಾಗೂ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತನಿಖೆ ನಡೆಸಲಿದ್ದಾರೆ.
“ಕಾಮಗಾರಿಯಲ್ಲಿ ನಿರ್ವಹಣೆ ಹೊತ್ತಿದ್ದ ಕಿರಿಯ ಎಂಜಿನಿಯರ್ ಕೆ ಎಲ್ ದೇವರಾಜ್ ಅಮಾನತಾಗಿದ್ದಾರೆ. ಸದರಿ ಪ್ರಕರಣದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದ್ದು, ಶಿಕ್ಷೆಗೆ ಒಳಗಾಗಲಿದ್ದಾರೆ” ಎಂದು ದೂರುದಾರ ತೆನ್ನಿರ ಮೈನಾ ತಿಳಿಸಿದ್ದಾರೆ.