ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ನಿಲುವುಗಳು ಬದಲಾಗುತ್ತಿವೆ. ಜನರು ನಿಧಾನವಾಗಿ ಮತ್ತೆ ಕಾಂಗ್ರೆಸ್ ಎಡೆಗೆ ವಾಲುತ್ತಿದ್ದಾರೆ. ಜನಾಭಿಪ್ರಾಯ ಮತ್ತು ಮತದಾರರ ಒಲವು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ಪೈಪೋಟಿಯನ್ನು ಸೂಚಿಸುತ್ತಿವೆ.
ಜಿಲ್ಲೆಯಲ್ಲಿ 4.5 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಅವರಲ್ಲಿ, ಶ್ರೀಮಂತ ಮತ್ತು ತಮ್ಮನ್ನು ಮಧ್ಯಮ ವರ್ಗ ಎಂದು ಕರೆದುಕೊಳ್ಳುವ ಜನರು ಈಗಲೂ ಬಿಜೆಪಿಯನ್ನೇ ಬೆಂಬಲಿಸುತ್ತಿದ್ದಾರೆ. ಆದರೆ, ಆದಿವಾಸಿ, ಬುಡಕಟ್ಟು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ. ಈ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಅನ್ನು ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ.
ಹಿಂದುತ್ವ ಮತ್ತು ರಾಷ್ಟ್ರೀಯವಾದ ಸಿದ್ಧಾಂತಕ್ಕೆ ಅಂಟಿಕೊಂಡಿರುವ ಕೊಡವ ಸಮುದಾಯ ಬಿಜೆಪಿಯನ್ನೇ ಬೆಂಬಲಿಸುತ್ತಿದೆ. ಆದರೂ, ಕೊಡವರಲ್ಲಿ ಸಾಕಷ್ಟು ಜನರು ಕಾಂಗ್ರೆಸ್ ಶಾಸಕ ಎ.ಎಸ್ ಪೊನ್ನಣ್ಣ ಪರವಾಗಿದ್ದಾರೆ ಎಂಬುದು ಗಮನಾರ್ಹ. ಪೊನ್ನಣ್ಣ ಕಾರಣಕ್ಕಾಗಿಯೇ ಶ್ರೀಮಂಗಲ, ಕುಟ್ಟ, ಗೋಣಿಕೊಪ್ಪಲು ಸೇರಿದಂತೆ ದಕ್ಷಿಣ ಕೊಡಗು ಭಾಗದ ಹೆಚ್ಚಿನ ಜನರು ಕಾಂಗ್ರೆಸ್ ಪರವಾಗಿದ್ದಾರೆ.
ಕಾಫಿ ಬೆಳೆಗಾರರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ. “ಕಾಂಗ್ರೆಸ್ ಪ್ರಣಾಳಿಕೆಯು ಸ್ವಾಮಿನಾಥನ್ ವರದಿ ಆಧಾರದಲ್ಲಿ ಎಂಎಸ್‌ಪಿ ನೀಡುವುದು ಮತ್ತು ಸಾಲ ಮನ್ನಾಕ್ಕೆ ಭರವಸೆ ನೀಡಿದೆ. ಬಿಜೆಪಿಯಿಂದ ಸಣ್ಣ ಬೆಳೆಗಾರರಿಗೆ ಯಾವುದೇ ಪ್ರಯೋಜವಿಲ್ಲ” ಎಂದು ಬೆಳೆಗಾರ ಹರೀಶ್ ಎಂಬವರು ಹೇಳಿದ್ದಾರೆ.
ಬಿಜೆಪಿಯು ಅರಣ್ಯಗಳ ಖಾಸಗೀಕರಣ ಮಾಡುತ್ತಿದೆ. ಅತಿಕ್ರಮಿತ ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಗೆ ಗುತ್ತಿಗೆ ನೀಡುತ್ತಿದೆ. ಅಲ್ಲದೆ, ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಬುಡಕಟ್ಟು ಸಮುದಾಯ ಬಿಜೆಪಿಗೆ ನಮ್ಮ ಬೆಂಬಲವಿಲ್ಲ ಎಂದಿದೆ.
ಜಿಲ್ಲೆಯಲ್ಲಿ ಎಲ್ಲ ಪಕ್ಷಗಳು ಮುಸ್ಲಿಮರನ್ನು ಕಡೆಗಣಿಸುತ್ತಿವೆ ಎಂಬ ಆರೋಪಗಳಿವೆ. “ಕಾಂಗ್ರೆಸ್ ಮುಖಂಡರು ಒಕ್ಕಲಿಗರ ಓಲೈಕೆಯಲ್ಲಿ ಮಾತ್ರ ತೊಡಗಿದ್ದಾರೆ. ಮತಕ್ಕಾಗಿ ನಮ್ಮನ್ನು ಕಾಂಗ್ರೆಸ್ಸಿಗರು ಸಂಪರ್ಕಿಸಿಲ್ಲ. ಆದರೂ, ಸೀಮಿತ ಆಯ್ಕೆಯಿಂದಾಗಿ, ನಾವು ಕಾಂಗ್ರೆಸ್‌ಅನ್ನು ಬೆಂಬಲಿಸುವ ಅನಿವಾರ್ಯತೆ ಇದೆ” ಎಂದು ಮುಸ್ಲಿಂ ಮುಖಂಡ, ಕಂದಕೆರೆಯ ಇಸ್ಮಾಯಿಲ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಈ ದಿನ ಸಮೀಕ್ಷೆ | ಮೋದಿ ಆಡಳಿತದಲ್ಲಿ ಜನರನ್ನು ಬಾಧಿಸಿದೆ ಬೆಲೆ ಏರಿಕೆ!
ಇನ್ನು, ಪೊನ್ನಂಪೇಟೆ ಮತ್ತು ಮಡಿಕೇರಿಯಲ್ಲಿ ಹೆಚ್ಚಿನವರು ಬಿಜೆಪಿ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ. ಯಾರು ಯಾವುದೇ ಗ್ಯಾರಂಟಿ ಕೊಟ್ಟರೂ, ಕೇಂದ್ರದಲ್ಲಿ ಮೋದಿ ಅಧಿಕಾರದಲ್ಲಿ ಇರಬೇಕು ಎನ್ನುತ್ತಿದ್ದಾರೆ.
ಭಾಗಮಂಡಲ, ಅಪ್ಪಂಗಳ, ಆವಂದೂರು ಹಾಗೂ ಕುಶಾಲನಗರ ಭಾಗದ ಒಕ್ಕಲಿಗರು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳತ್ತ ಒಲವು ಹೊಂದಿದ್ದಾರೆ. ಇನ್ನು, ಸೋಮವಾರಪೇಟೆ ಭಾಗದಲ್ಲಿ ಅಭ್ಯರ್ಥಿ (ಲಕ್ಷ್ಮಣ್ – ಒಕ್ಕಲಿಗ) ಕಾರಣದಿಂದಾಗಿ ಜೆಡಿಎಸ್ ಮತಗಳು ಕಾಂಗ್ರೆಸ್ ಎಡೆಗೆ ವಾಲುತ್ತಿವೆ. ನಾಪೋಕ್ಲುವಿನಲ್ಲಿ ಶಾಸಕ ಪೊನ್ನಣ್ಣ ಅವರೊಂದಿಗೆ ಹಲವಾರು ಯುವಕರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ದಕ್ಷಿಣ ಕೊಡಗಿನ ಪ್ರಮುಖ ಭಾಗಗಳಲ್ಲಿ ‘ಮೋದಿ ಅಲೆ’ಗೆ ‘ಪೊನ್ನಣ್ಣ ಅಲೆ’ ಪೈಪೋಟಿ ನೀಡುತ್ತಿದೆ. ಜಿಲ್ಲೆಯ ಉತ್ತರ ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಹೋಗುವ ಸಾಧ್ಯತೆಗಳೂ ಇವೆ. ಈ ಭಾಗದಲ್ಲಿ ಕಾಂಗ್ರೆಸ್ ನಿರೀಕ್ಷಿತ ಮುನ್ನಡೆ ಕಠಿಣವಾದರೂ, ಇಡೀ ಜಿಲ್ಲೆಯ ಮತಗಳನ್ನು ನೋಡಿದಾಗ, ಬಿಜೆಪಿ ಗೆಲುವು ಕಷ್ಟವೆಂಬುದು ಎದ್ದು ಕಾಣುತ್ತಿದೆ.