ಸರ್ಕಾರಿ ಭೂಮಿಯನ್ನು ಮೃತರೂ ಸೇರಿದಂತೆ ಅನರ್ಹರಿಗೆ ಮಂಜೂರು ಮಾಡಿದ್ದ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ವಿರುದ್ಧ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ.
2019ರರಲ್ಲಿ ಮಾಲೂರು ತಾಲೂಕು ಭೂ ಮಂಜೂರಾತಿ ಸಮಿತಿಗೆ ಶಾಸಕ ನಂಜೇಗೌಡ ಅಧ್ಯಕ್ಷರಾಗಿದ್ದರು. ಆ ವೇಳೆ, ಅವರು ಕೋಟ್ಯಾಂತರ ರೂ. ಮೌಲ್ಯದ ಸುಮಾರು 80 ಎಕರೆ ಸರ್ಕಾರಿ ಭೂಮಿಯನ್ನು ಮರಣ ಹೊಂದಿದ್ದವರೂ ಸೇರಿದಂತೆ ಅನರ್ಹರಿಗೆ ಮಂಜೂರು ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಕೋಲಾರದ ಕೆ ಸಿ ರಾಜಣ್ಣ ಎಂಬುವವರು ಶಾಸಕರ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಮ್ಮ ವಿರುದ್ಧದ ಆರೋಪ ಸುಳ್ಳು ಎಂದಿದ್ದ ಶಾಸಕ, ಪ್ರಕರಣವನ್ನು ರದ್ದುಗೊಳಿಸಬೇಕೆಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸಿದೆ. ತನಿಖೆಗೆ ಅನುಮತಿ ನೀಡಿದೆ.
“ಅರ್ಹರಲ್ಲದವರಿಗೆ ಸರ್ಕಾರಿ ಭೂಮಿಯನ್ನು ಹಂಚಿಕೆ ಮಾಡುವ ಮೂಲಕ ಜನಪ್ರತಿನಿಧಿಗಳು ತಮಗೆ ಕೊಟ್ಟಿರುವ ಅಧಿಕಾರಿವನ್ನು ದುರುಪಯೋಗ ಮಾಡಿಕೊಳ್ಳುವ ಪ್ರಕರಣಗಳಿಗೆ ಇದೂ ಉದಾಹರಣೆಯಾಗಿದೆ” ಎಂದು ನ್ಯಾಯಪೀಠ ಹೇಳಿದೆ. ಈ ಹಿಂದೆ, ಪ್ರಕರಣದ ತನಿಖೆಗೆ ಅವಕಾಶ ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಈ ಸುದ್ದಿ ಓದಿದ್ದೀರಾ?: ಹಸುಗಳನ್ನು ಇಸ್ಕಾನ್ ಮಾರಿದಷ್ಟು ಬೇರಾರು ಮಾರಿಲ್ಲ; ಬಿಜೆಪಿ ಸಂಸದೆ ಆರೋಪಕ್ಕೆ ಇಸ್ಕಾನ್ ಪ್ರತಿಕ್ರಿಯೆ
2004ರಲ್ಲಿ ಮೃತಪಟ್ಟಿದ್ದ ನಾರಾಯಣಪ್ಪ ಎಂಬುವರಿಗೆ 2019ರಲ್ಲಿ 1.39 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಅಲ್ಲದೆ, ಕಳೆದ 50 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ ಎಂಬ ನೆಪವೊಡ್ಡಿ 40 ವರ್ಷದ ಆನಂದಗೌಡ ಎಂಬ ವ್ಯಕ್ತಿಗೆ ಜಮೀನು ಮಂಜೂರು ಮಾಡಲಾಗಿದೆ ಎಂದು ಕೆ.ಸಿ ರಾಜಣ್ಣ ದೂರಿನಲ್ಲಿ ವಿವರಿಸಿದ್ದರು. “ಇಂತಹ ಹಲವಾರು ಅಂಶಗಳನ್ನು ಪರಿಶೀಲಿಸಿದರೆ ಸಮಿತಿಯ ಅಧ್ಯಕ್ಷರಾಗಿದ್ದ ಶಾಸಕ ನಂಜೇಗೌಡ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ. ಜೊತೆಗೆ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ” ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದಲ್ಲಿ ಈಗಾಗಲೇ ತಹಶೀಲ್ದಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೀಗ, ವಿಶೇಷ ನ್ಯಾಯಾಲಯದ ಆದೇಶದಂತೆ ಶಾಸಕರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.