- ‘ಸಾರ್ವಜನಿಕ ಆಡಳಿತ ಪಾರದರ್ಶಕವಾಗಿ ಇದ್ದಾಗ ಮಾತ್ರ ಜನಪರ ಆಡಳಿತ ಸಾಧ್ಯ’
- ‘ಪೊಲೀಸ್ ಠಾಣೆಗಳಲ್ಲಿ ಧ್ವನಿ ಮುದ್ರಣ ಸಮೇತ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಇಲ್ಲ’
ಸಾರ್ವಜನಿಕ ಆಡಳಿತವು ಪಾರದರ್ಶಕವಾಗಿ ಇದ್ದಾಗ ಮಾತ್ರ ಜನಪರ ಆಡಳಿತ ಸಾಧ್ಯ. ಈ ನಿಟ್ಟಿನಲ್ಲಿ, ಸರ್ಕಾರಿ ಕಚೇರಿಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗುವ ದೃಶ್ಯಗಳು ನಿರಂತರವಾಗಿ ಲೈವ್ ಸ್ಟ್ರೀಮ್ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತಿರಬೇಕು ಎಂದು ಕೆ ಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿರುವ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, “ಆಡಳಿತದಲ್ಲಿನ ಬಹುತೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಇದು ಸಹಾಯವಾಗಲಿದೆ” ಎಂದು ತಿಳಿಸಿದ್ದಾರೆ.
“ನವೆಂಬರ್ 10ರೊಳಗೆ ನಮ್ಮ ಮನವಿಗೆ ಸ್ಪಂದಿಸಬೇಕು. ಸರ್ಕಾರ ಈ ನಿಟ್ಟಿನಲ್ಲಿ, ಮುಂದಾಗದಿದ್ದರೆ, ಕೆ.ಆರ್.ಎಸ್. ಪಕ್ಷವೇ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ, ಸರ್ಕಾರಿ ಕಚೇರಿಗಳಿಗೆ ಈ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಲಿದೆ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
“ರಾಜ್ಯದ ಸಾರ್ವಜನಿಕ ಆಡಳಿತವನ್ನು ಗೌಪ್ಯವಾಗಿ ನಿರ್ವಹಿಸಲು ಸರ್ಕಾರಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಇತ್ತೀಚೆಗೆ, ಪ್ರಸ್ತುತ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಯನ್ನು ಪಡೆಯಲು ಅರ್ಜಿ ಹಾಕುವವರ ಮಾಹಿತಿಯನ್ನು ತನಗೆ ಕಳುಹಿಸಿಕೊಡಬೇಕೆಂದು ಎಲ್ಲ ಎಲಾಖೆಗಳಿಗೆ ಆದೇಶ ಹೊರಡಿಸಿತ್ತು. ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಆದೇಶವನ್ನು ಹಿಂಪಡೆಯಲಾಯಿತು, ಈ ಸಂದರ್ಭದಲ್ಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಸ್ಪಷ್ಟೀಕರಣ ನೀಡಿ, ಅವರ ಅರಿವಿಗೆ ಬಾರದಂತೆ, ಈ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ’ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲ ಭಯೋತ್ಪಾದಕರೂ ಮುಸ್ಲಿಮರಲ್ಲ ಎನ್ನುವ ಸತ್ಯವನ್ನು ನಂಬದವರು
“ಅಧಿಕಾರ ದುರುಪಯೋಗ ಪಡಿಸಿಕೊಂಡು, ಅಕ್ರಮವಾಗಿ ಸರ್ಕಾರಿ ಆದೇಶ ಹೊರಡಿಸಿರುವ ಅಧೀನ ಕಾರ್ಯದರ್ಶಿಯ ವಿರುದ್ಧ ಇದುವರೆವಿಗೂ ಯಾವುದೇ ಕ್ರಮ ಆಗಿರುವುದಿಲ್ಲ. ಇಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ, ಈ ಅಧೀನ ಕಾರ್ಯದರ್ಶಿ ಸರ್ಕಾರದ ಉನ್ನತ ಅಧಿಕಾರಿ ಅಥವಾ ಮಂತ್ರಿಯ ಕುಮ್ಮಕ್ಕಿಲ್ಲದೆ ಇಂತಹ ಅಕ್ರಮ ಆದೇಶ ಹೊರಡಿಸಲು ಸಾಧ್ಯವಿಲ್ಲ. ಅಂದರೆ, ಸರ್ಕಾರದಲ್ಲಿ ಕಾಣದ ಕೈಗಳು ಮಾಹಿತಿಯನ್ನು ಬಹಿರಂಗಪಡಿಸಲು ತಡೆ ಒಡ್ಡುವ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
“ಪೊಲೀಸ್ ಠಾಣೆಗಳಲ್ಲಿ ಧ್ವನಿ ಮುದ್ರಣ ಸಮೇತ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಆದರೆ, ನಾಮಕಾವಸ್ಥೆಗೆಂದು ಸಿಸಿಟಿವಿ ಅಳವಡಿಸಿದ್ದು, ಯಾವ ಠಾಣೆಯಲ್ಲಿಯೂ ಕೂಡ ಧ್ವನಿ ಮುದ್ರಿಸುವ ಸೌಲಭ್ಯವನ್ನು ಕಲ್ಪಿಸಿಲ್ಲ ಹಾಗೂ ಅರೆಬರೆ ವ್ಯವಸ್ಥೆಯಲ್ಲಿ ಕೇವಲ ಸಿಸಿಟಿವಿ ಅಳವಡಿಸಲಾಗಿದೆ” ಎಂದು ಆರೋಪಿಸಿದ್ದಾರೆ.