- ಯಾರನ್ನು ಕೇಳಿ ಇವರು ನೀರು ಹರಿಸಿದ್ದಾರೆ: ಎಚ್‌ಡಿಕೆ ಪ್ರಶ್ನೆ
- ‘ಲೂಟಿ ಹೊಡೆಯುವ ಕುಕೃತ್ಯಕ್ಕೆ ಪ್ರಕೃತಿ ಸಹಕಾರ ನೀಡುತ್ತಿಲ್ಲ’
ಪೆನ್ ಕೊಡಿ, ಪೆನ್ ಕೊಡಿ ಎಂದು ಜನರಿಗೆ ದುಂಬಾಲು ಬಿದ್ದರು. ಪಾಪ, ಜನರು ಕೂಡ ಅವರನ್ನು ನಂಬಿ ಪೆನ್ ಕೊಟ್ಟರು. ಈಗ ಆ ಪೆನ್ ಅನ್ನು ತೆಗೆದುಕೊಂಡು ಹೋಗಿ ತಮಿಳುನಾಡಿಗೆ ಒತ್ತೆ ಇಟ್ಟಿದ್ದಾರೆ. ರೆಡ್ ಕಾರ್ಪೆಟ್ ಹಾಕಿ ಆ ರಾಜ್ಯದ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಸ್ವಾಗತ ಕೋರುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಜಾತ್ಯತೀತ ಜನತಾ ದಳ ರಾಜ್ಯ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ತಮಿಳುನಾಡಿಗೆ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನೀರು ಹರಿಸಿದೆ. ಯಾರನ್ನು ಕೇಳಿ ಇವರು ನೀರು ಹರಿಸಿದ್ದಾರೆ? ಜನರನ್ನು ಕೇಳಿದ್ದಾರಾ?”ಎಂದು ವಾಗ್ದಾಳಿ ನಡೆಸಿದರು.
“ನೀರು ಬಿಡುವ ಬಗ್ಗೆ ಪ್ರತಿಪಕ್ಷಗಳ ಜತೆ ಸರ್ಕಾರ ಚರ್ಚೆ ಮಾಡಿದೆಯಾ? ಅಥವಾ ನೀರು ಬಿಡುವಂತೆ ಸರ್ಕಾರಕ್ಕೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಇಲ್ಲವೇ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆಯಾ? ಹಾಗೇನಾದರೂ ಇದ್ದರೆ ಅದನ್ನು ಜನತೆಗೆ ತಿಳಿಸಬೇಕು” ಎಂದು ಆಗ್ರಹಿಸಿದರು.
“ರಾಜ್ಯದಲ್ಲಿ ಸರಿಯಾಗಿ ಮಳೆ ಇಲ್ಲ. ಬರ ಆವರಿಸಿದೆ. ಇದು ರಾಜ್ಯ ಸರ್ಕಾರದ ಪಾಪದ ಫಲ. ಇವರ ಲೂಟಿ ಹೊಡೆಯುವ ಕುಕೃತ್ಯಕ್ಕೆ ಪ್ರಕೃತಿಯೂ ಸಹಕಾರ ನೀಡುತ್ತಿಲ್ಲ” ಎಂದು ಟೀಕಿಸಿದರು.
“ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ತಮಿಳುನಾಡಿನವರು ಅರ್ಜಿ ಹಾಕಿದ್ದಾರೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ. ಈಗಾಗಲೇ ಜನರನ್ನು ಲೆಕ್ಕಕ್ಕೆ ಇಡದೇ ತಮಿಳುನಾಡಿಗೆ ನೀರು ಬಿಡುತ್ತಿದ್ದೀರಿ. ಅವರು ಹೆಚ್ಚುವರಿ ನೀರು ಕೇಳಿದರೆ ಕೊಡಲು ಆಗುತ್ತಾ? ನಮ್ಮ ರೈತರು ಇನ್ನೂ ಒಂದು ಬೆಳೆಯನ್ನೂ ಬೆಳೆದಿಲ್ಲ” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಸಿಎಜಿ ವರದಿಯ ಬಗ್ಗೆ ತನಿಖೆ ನಡೆಸುವ ತಾಕತ್ತು ಮೋದಿಗೆ ಇದೆಯಾ?: ಸಿದ್ದರಾಮಯ್ಯ ಸವಾಲು
ಮೇಕೆದಾಟು ಏನಾಯಿತು?
“ಮೇಕೆದಾಟು ಜಾರಿಗೆ ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿದರು, ಅದು ಏನಾಯಿತು? ಚಿಕನ್ ಲೆಗ್, ಮಟನ್ ಪೀಸ್ ತಿಂದು ಹೋರಾಟ ಮಾಡಿದ್ದು ಅಷ್ಟೇ ಆಯಿತು. ಡಿಎಂಕೆ ನಿಮ್ಮ ಮಿತ್ರಪಕ್ಷ ಅಲ್ಲವೇ? ತಮಿಳುನಾಡು ಸಿಎಂ ಸ್ಟಾಲಿನ್ ಅವರು ನಿಮ್ಮ ಸ್ನೇಹಿತರಲ್ಲವೇ? ಕೊಟ್ಟು ತೆಗೆದುಕೊಳ್ಳುವ ಸಂಬಂಧ ಮಾಡುತ್ತಿದ್ದೀರಿ. ಮೇಕೆದಾಟು ಜಾರಿ ಮಾಡಿ” ಎಂದು ಲೇವಡಿ ಮಾಡಿದರು.
“ಕುಮಾರಸ್ವಾಮಿ ಕಾಲದಲ್ಲಿ ನೀರು ಬಿಟ್ಟಿಲ್ವಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅವರಿಗೆ ತಿಳಿವಳಿಕೆ ಕೊರತೆ ಇದೆ. ನಾನು ಎರಡು ಸಲ ಮುಖ್ಯಮಂತ್ರಿ ಆಗಿದ್ದಾಗ ತಮಿಳುನಾಡಿಗೆ ನೀರು ಹರಿಸಿದ್ದು ನಿಜ. ಆಗ ನಮ್ಮಲ್ಲಿ ನೀರು ಇತ್ತು. ಸಂಕಷ್ಟದ ಪರಿಸ್ಥಿತಿ ಇರಲಿಲ್ಲ. ದೇವೇಗೌಡರ ಕಾಲದಲ್ಲಿಯೂ ಕೇಂದ್ರ ಸರ್ಕಾರದ ಮನವಿ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನೀರು ಬಿಡಲಾಗಿತ್ತು” ಎಂದು ಸಮರ್ಥಿಸಿಕೊಂಡರು.
“ಮಾಡಿದ ತಪ್ಪು ಮುಚ್ಚಿಕೊಳ್ಳಲು ಸರ್ಕಾರ, ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರೆ. ನಾವು ವಿಪಕ್ಷದಲ್ಲಿ ಇರುವುದೇ ರಾಜಕೀಯ ಮಾಡಲು. ಸರ್ಕಾರದ ಲೋಪಗಳನ್ನು ಎತ್ತಿ ತೋರಿಸಲು. I.N.D.I.A.ಮೈತ್ರಿ ಕೂಟಕ್ಕೆ ಶಕ್ತಿ ತುಂಬಲು ರಾಜ್ಯದ ರೈತರ ಬಲಿ ಕೊಡಲು ಹೊರಟಿದ್ದೀರಿ. ಇಂಥ ಓಲೈಕೆ ಅಗತ್ಯ ಇತ್ತಾ?” ಎಂದು ಪ್ರಶ್ನಿಸಿದರು.