“ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಹಳ್ಳಿಯ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಖಂಡನೀಯ. ಕುಮಾರಸ್ವಾಮಿ ರಾಜ್ಯದ ಎಲ್ಲ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು” ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
ತುಮಕೂರಿನ ತುರುವೇಕೆರೆಯಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರ ಪರವಾಗಿ ಪ್ರಚಾರದ ಸಂದರ್ಭ ಕುಮಾರಸ್ವಾಮಿ ಅವರು ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ” ಕುಮಾರಸ್ವಾಮಿ ಅವರು ತಕ್ಷಣ ರಾಜ್ಯದ ಮಹಿಳೆಯರ ಕ್ಷಮೆಯಾಚಿಸುವ ಮೂಲಕ ತಮ್ಮ ಘನತೆಯನ್ನು ಉಳಿಸಿಕೊಳ್ಳಬೇಕು” ಎಂದರು.
“ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ಬೇರೆ ಬೇರೆ ಅರ್ಥಗಳಲ್ಲಿ ಉಲ್ಲೇಖಿಸಲು ಹೊರಟು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ನಮ್ಮ ಮಾತುಗಳು ನೆರೆದ ನೂರಾರು ಜನರಿಗೆ ಸ್ಫೂರ್ತಿ ನೀಡುವಂತಿರಬೇಕು. ಆದರೆ, ರಾಜಕೀಯವಾಗಿ ವಿರೋಧಿಸುವ ಬರದಲ್ಲಿ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೋದಿ ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದ ಕೆ.ಎಸ್.ಈಶ್ವರಪ್ಪ
“ಇಂತಹ ವರ್ತನೆಯಿಂದ ಯಾವ ಸಂದೇಶವನ್ನು ಜನತೆಗೆ ಕೊಟ್ಟಂತಾಗುತ್ತದೆ? ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ” ಎಂದು ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದರು.