ಮಂಡ್ಯದ ಕೆರಗೋಡು ಹನುಮಧ್ವಜ ವಿವಾದಕ್ಕೆ ಸಂಬಂಧಿಸಿ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ, ಜೆಡಿಎಸ್ ಜಂಟಿಯಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದವು. ಅಂದು ನಡೆದ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಂದಿಗೆ ಭಾಗಿಯಾಗಿದ್ದರು. ಕೇಸರಿ ಶಾಲು ಧರಿಸಿ ಹೆಚ್ಡಿಕೆ ಭಾಷಣ ಮಾಡಿದ್ದರು. ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿಕೆ ನೀಡಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, “ಕುಮಾರಸ್ವಾಮಿ ಕೇಸರಿ ಶಾಲು ಧರಿಸಬಾರದಿತ್ತು” ಎಂದು ಹೇಳಿದ್ದಾರೆ.
“ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರದಿತ್ತು. ಕೇಸರಿ ಶಾಲು ಬದಲು ನಮ್ಮ ಪಕ್ಷದ ಶಾಲು ಧರಿಸಬಹುದಿತ್ತು. ಕೇಸರಿ ಶಾಲು ಹಾಕಿದ್ದನ್ನೇ ದೊಡ್ಡ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ” ಎಂದು ಇದೇ ವೇಳೆ ತಿಳಿಸಿದರು.
“ನಾವು ಇಬ್ಬರು ಸೇರಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ. ಬಿಜೆಪಿ ಜೊತೆ ಹೋಗುವಾಗ ನಮ್ಮ ಶಾಲು ಹಾಕಿಕೊಂಡು ಹೋಗಬೇಕು. ನಾನಂತೂ ಖಂಡಿತವಾಗಿ ಕೇಸರಿ ಶಾಲು ಹಾಕುವುದಿಲ್ಲ” ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಡಿಕೆ ಸುರೇಶ್ ಹೇಳಿರುವುದು ವ್ಯಕ್ತಿಗತವಾಗಿಬಹುದು
ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಪ್ರತ್ಯೇಕ ರಾಷ್ಟ್ರದ ಬಗ್ಗೆ ಮಾತನಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಗೌಡ, “ಅವರು ವ್ಯಕ್ತಿಗತವಾಗಿ ಹೇಳಿರಬಹುದು. ಅದು ಅವರ ಪಕ್ಷದ ನಿರ್ಣಯ ಅಲ್ಲ” ಎಂದಿದ್ದಾರೆ.
“ಯಾವ ಉದ್ದೇಶದಲ್ಲಿ ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಈ ವಿಷಯದಲ್ಲಿ ಮಾತನಾಡುವುದು ನಂಗೆ ಇಷ್ಟ ಇಲ್ಲ. ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್. ದೇಶದಲ್ಲಿ ಸರ್ಕಾರ ಕೂಡ ನಡೆಸಿದೆ. ಅನ್ಯಾಯವಾಗಿದ್ದರೆ, ಬಜೆಟ್ ಚರ್ಚೆ ವೇಳೆ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡ, “ಸೀಟು ಹಂಚಿಕೆಯ ಬಗ್ಗೆ ಕುಮಾರಸ್ವಾಮಿ ಜೊತೆಗೆ ಮಾತುಕತೆ ನಡೆಯುತ್ತಿದೆ. ಮುಂದಿನ ವಾರದೊಳಗೆ ಈ ಬಗ್ಗೆ ತೀರ್ಮಾನ ಹೊರಬೀಳಬಹುದು” ಎಂದು ತಿಳಿಸಿದ್ದಾರೆ.