ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಕುಂಭಮೇಳದಲ್ಲಿ ಜನವರಿ 29ರಂದು ಕಾಲ್ತುಳಿತ ಸಂಭವಿಸಿತ್ತು. ಆ ಘಟನೆಯ ವಾಸ್ತವವನ್ನು ತಿಳಿಸದಿರುವುದರ ಹಿಂದೆ ಭಕ್ತರ ಆತಂಕ ತಪ್ಪಿಸುವ ಉದ್ದೇಶವಿತ್ತು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಲಕ್ನೋದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಕಾಲ್ತುಳಿತ ಘಟನೆಯ ಬಗ್ಗೆ ಮಾತನಾಡಿದರು. “ಮೌನಿ ಅಮವಾಸ್ಯೆಯ (ಜ.29) ದಿನ ನಡೆದ ಕಾಲ್ತುಳಿತದ ಬಳಿಕ, ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರ್ಕಾರವು ತ್ವರಿತವಾಗಿ ಕಾರ್ಯನಿರ್ವಹಿಸಿದೆ. ಆ ಸಂದರ್ಭದಲ್ಲಿ 8 ಕೋಟಿ ಭಕ್ತರು ಮತ್ತು ಸಾಧುಗಳು ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಘಟನೆಯಿಂದ ಹಲವಾರು ಭಕ್ತರು ಭಯಭೀತರಾಗಿದ್ದರು. ಎಲ್ಲರೂ ಆತಂಕಗೊಂಡರೆ, ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇತ್ತು. ಹೀಗಾಗಿ, ಘಟನೆ ಬಗ್ಗೆ ಹೆಚ್ಚು ಚರ್ಚೆ ಮಾಡಲಿಲ್ಲ ಮತ್ತು ವಾಸ್ತವವನ್ನು ತಿಳಿಸಿರಲಿಲ್ಲ” ಎಂದು ಹೇಳಿದ್ದಾರೆ.
“ಅಧಿಕಾರಿಗಳು ಜನಸಂದಣಿಯನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಕೋಟ್ಯಂತರ ಭಕ್ತರು ಭಾಗವಹಿಸುವ ಕಠಿಣ ಸಂದರ್ಭಗಳಲ್ಲಿ ಹಲವರು ಭಯಭೀತರಾಗುತ್ತಾರೆ. ಆ ಸಮಯದಲ್ಲಿ ತಾಳ್ಮೆಯಿಂದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಜನವರಿ 29ರಂದು ನಡೆದ ಕಾಲ್ತಳಿತ ಘಟನೆಯಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ಹೇಳುತ್ತವೆ. ಆದರೆ, ಕನಿಷ್ಠ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹಲವರು ವಾದಿಸುತ್ತಿದ್ದಾರೆ. ಮಾತ್ರವಲ್ಲದೆ, ಮೃತದೇಹಗಳನ್ನು ನದಿಗೆ ಎಸೆಯಲಾಗಿದೆ ಎಂಬ ಆರೋಪಗಳೂ ಇವೆ.