ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ತಡೆ ಕೋರಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿ ಆದೇಶ ಹೊರಡಿಸಿದೆ.
ಹೆಚ್.ಡಿ. ಕುಮಾರಸ್ವಾಮಿ ಮತ್ತು ಅವರ ಸಂಬಂಧಿ ಡಿ.ಸಿ.ತಮ್ಮಣ್ಣ ಮತ್ತಿತರರು 2014ರಲ್ಲಿ ರಾಮನಗರದ ಬಿಡಿದಿ ಬಳಿಯ ಕೇತಗಾನಹಳ್ಳಿಯಲ್ಲಿ ವಿವಿಧ ಎಂಟು ಸರ್ವೆ ನಂಬರ್ಗಳ ಒಟ್ಟು 14 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆಂಬ ಆರೋಪವಿದೆ.
ಈ ಸಂಬಂಧ ಲೋಕಾಯುಕ್ತ ನೀಡಿದ್ದ ವರದಿ ಜಾರಿಗೊಳಿಸಲು ಹೈಕೋರ್ಟ್ ಆದೇಶ ನೀಡಿದ್ದರೂ ಅದನ್ನು ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಅವರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಈ ಅರ್ಜಿ ಪರಿಶೀಲಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಭೂಮಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿತ್ತು. ಆನಂತರ ಜಮೀನಿನ ಸರ್ವೆ ಕಾರ್ಯ ನಡೆಸಿದ ಸ್ಥಳೀಯ ತಹಸೀಲ್ದಾರ್, ಎಚ್‌ಡಿಕೆ ಮತ್ತಿತರರಿಗೆ ಕಾನೂನಿನ್ವಯ ನೋಟಿಸ್ ಜಾರಿಗೊಳಿಸಿದ್ದರು.
ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ತಡೆ ಕೋರಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶುಕ್ರವಾರ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಬಾಕಿ ಎಂದು ಕರ್ನಾಟಕ ಹೈಕೋರ್ಟ್ನಿಂದ ಕುಮಾರಸ್ವಾಮಿ ರಿಲೀಫ್ ಪಡೆದುಕೊಂಡಿದ್ದರು. ಆದರೆ, ಇದೀಗ ನ್ಯಾಯಾಂಗ ನಿಂದನೆ ಅರ್ಜಿಗೆ ತಡೆಕೋರಲು ಸುಪ್ರೀಂ ನಿರಾಕರಿಸಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಮತ್ತೊಂದೆಡೆ ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಾಮನಗರ ತಹಶೀಲ್ದಾರ್ ನೀಡಿರುವ ಅರ್ಜಿಯನ್ನು ಹೈಕೋರ್ಟ್‌ನಲ್ಲಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
“ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿರುವ ನೋಟಿಸ್ ಅನುಸಾರ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು” ಎಂಬ ಈ ಹಿಂದಿನ ಆದೇಶವನ್ನು ಹೈಕೋರ್ಟ್ ವಿಸ್ತರಿಸಿ ಗುರುವಾರ ಆದೇಶಿಸಿದೆ.
ಕುಮಾರಸ್ವಾಮಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಕಿರಣ್ ವಿ.ರೋಣ ಅವರು, ‘ಕರ್ನಾಟಕ ಭೂ ಕಂದಾಯ ಕಾಯ್ದೆ-1964ಕ್ಕೆ ತಿದ್ದುಪಡಿ ತರುವ ಮೂಲಕ ಸರ್ಕಾರಿ ಜಮೀನು ಒತ್ತುವರಿ ಕುರಿತಂತೆ ಒತ್ತುವರಿದಾರರಿಂದ ವಿವರಣೆ ಪಡೆದು ಮುಂದಿನ ಕ್ರಮ ಜರುಗಿಸಲು ತಹಶೀಲ್ದಾರ್‌ಗೆ ಅಧಿಕಾರ ಕಲ್ಪಿಸಲಾಗಿದೆ. ಅದರಂತೆಯೇ ಈ ಪ್ರಕರಣದಲ್ಲೂ ತಹಶೀಲ್ದಾರ್ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದಾರೆ. ಹಾಗಾಗಿ, ಈ ಅರ್ಜಿ ವಜಾಗೊಳಿಸಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಪರ ಪದಾಂಕಿತ ಹಿರಿಯ ವಕೀಲ ಉದಯ ಹೊಳ್ಳ ಅವರು, ‘ತಹಶೀಲ್ದಾರ್ ನೋಟಿಸ್ ನೀಡುವುದಕ್ಕೆ ಅವಕಾಶ ಕಲ್ಪಿಸಿರುವ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತರಲಾಗಿರುವ ತಿದ್ದುಪಡಿಯ ಸಿಂಧುತ್ವವನ್ನೇ ಪ್ರಶ್ನಿಸಲಾಗುವುದು. ಈ ಸಂಬಂಧ ಅರ್ಜಿಯನ್ನು ತಿದ್ದುಪಡಿ ಮಾಡುತ್ತೇವೆ. ಅದಕ್ಕಾಗಿ ಸಮಯಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು’ ಎಂಬ ಮಧ್ಯಂತರ ಆದೇಶವನ್ನು ವಿಸ್ತರಿಸಿ ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಿದೆ.