- ದಂಡ ಪಾವತಿಸದ ಪ್ರತಿಷ್ಠಿತ ಬಿಲ್ಡರ್ ಗಳ ವಿರುದ್ಧ ಕ್ರಮಕ್ಕೆ ಸೂಚನೆ
- ವಿಭಾಗೀಯ ಮಟ್ಟದಲ್ಲಿ ರೇರಾ ಕಚೇರಿ ಸ್ಥಾಪನೆಗೆ ಮುಂದಾದ ವಸತಿ ಇಲಾಖೆ
ರಾಜ್ಯದಲ್ಲಿ ಅನಧಿಕೃತ ಬಡಾವಣೆಗಳ ಹಾವಳಿ ತಡೆಗಟ್ಟಲು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ನಿಯಮಕ್ಕೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಇಂದು( ಜೂನ್ 20) ರೇರಾ (ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ)ದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಯೋಜನಾ ವ್ಯಾಪ್ತಿಯಲ್ಲಿ ಹೊಸದಾಗಿ ಬಡಾವಣೆ ರಚನೆ ಮಾಡುವವರು ರೇರಾ ಅನುಮತಿ ಪಡೆಯದೆ ನಿವೇಶನ ಮಾರಾಟ ಮಾಡುತ್ತಿದ್ದಾರೆ.
ಕೆಲವೆಡೆ ವಿವಾದ ಇರುವ ಜಮೀನುಗಳಲ್ಲಿ ಬಡಾವಣೆ ರಚನೆ ಮಾಡಿರುವುದರಿಂದ ನಿವೇಶನ ಖರೀದಿಸಿದವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗಾಗಿ ಇದನ್ನು ತಪ್ಪಿಸಲು ರೇರಾ ಅನುಮತಿ ಇಲ್ಲದಿರುವ ಬಡಾವಣೆಗಳ ನಿವೇಶನ ನೋಂದಣಿ ಮಾಡುವಂತಿಲ್ಲ ಎಂಬ ಕಾನೂನು ತರಲಾಗುವುದು ಎಂದು ಹೇಳಿದರು.
ಯೋಜನಾ ವ್ಯಾಪ್ತಿಯಲ್ಲಿ ಬಡಾವಣೆ ರಚನೆಗೆ ರೇರಾದಲ್ಲಿ ನೋಂದಣಿ ಕಡ್ಡಾಯ ಎಂದು ನಿಯಮ ಇದ್ದರೂ ಅನಧಿಕೃತವಾಗಿ ಕೆಲವರು ಬಡಾವಣೆ ರಚಿಸಿ ನಿವೇಶನ ಮಾರಾಟ ಮಾಡುತ್ತಿದ್ದಾರೆ. ಸಮಸ್ಯೆ ಉಂಟಾದರೆ ನಿವೇಶನ ಖರೀದಿಸಿದವರು ರೇರಾ ಬಳಿ ಬರುತ್ತಿದ್ದಾರೆ.
ಆದರೆ ಆ ಹಂತದಲ್ಲಿ ರೇರಾ ಏನೂ ಮಾಡಲು ಬರುವುದಿಲ್ಲ. ಹೀಗಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಯಮಾವಳಿ ರೂಪಿಸಲಾಗುವುದು, ಈ ಬಗ್ಗೆ ಕಂದಾಯ ಇಲಾಖೆ ಜತೆ ಚರ್ಚಿಸಿ ಅಗತ್ಯ ಬಿದ್ದರೆ ಸಂಪುಟದಲ್ಲಿ ಚರ್ಚಿಸಿ ತಿದ್ದುಪಡಿ ತರಲಾಗುವುದು ಎಂದು ಜಮೀರ್ ಹೇಳಿದರು.
ಕಠಿಣ ಕ್ರಮ
ವಸತಿ ಸಮುಚ್ಛಯಗಳ ನಿರ್ಮಾಣ ಮಾಡುವ ಬಿಲ್ಡರ್, ಡೆವಲಪರ್, ಪ್ರಮೋಟರ್ ಗಳು ಒಪ್ಪಂದದಂತೆ ನಿಗದಿತ ವೇಳೆಯಲ್ಲಿ ಫ್ಲ್ಯಾಟ್ ಕೊಡದೆ ಅನಗತ್ಯ ಕಿರುಕುಳ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೆಲವೆಡೆ ಒಪ್ಪಂದದ ಮೊತ್ತಕ್ಕಿಂತ ಹೆಚ್ಚುವರಿ ಮೊತ್ತಕ್ಕೆ ಒತ್ತಾಯ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಗ್ರಾಹಕರಿಗೆ ವಂಚನೆ ಮಾಡುವ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವರು ಹೇಳಿದರು.
ರೇರಾ ವ್ಯಾಪ್ತಿಯಲ್ಲಿ ದೂರು ಪ್ರಕರಣಗಳು ಹೆಚ್ಚಾಗುತ್ತಿದ್ದು ನಿರ್ವಹಣೆ ಕಷ್ಟವಾಗುತ್ತಿದೆ. ಜೊತೆಗೆ ಅನಧಿಕೃತ ಬಡಾವಣೆಗಳ ಹಾವಳಿ ನಿಯಂತ್ರಣವೂ ಸವಾಲಾಗಿದೆ. ಹೀಗಾಗಿ ವಿಭಾಗೀಯ ಮಟ್ಟದಲ್ಲಿ ರೇರಾ ಕಚೇರಿ ಸ್ಥಾಪಿಸಲಾಗುವುದು ಎಂದು ಜಮೀರ್ ಅಹ್ಮದ್ ಹೇಳಿದರು.
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಾಧಿಕಾರದ ಅನುಮತಿ ಪಡೆಯದೆ ನಿರ್ಮಾಣ ಮಾಡುವ ಅನಧಿಕೃತ ಬಡಾವಣೆ, ಅಪಾರ್ಟ್ ಮೆಂಟ್ ಗಳ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ರೇರಾ ಅನುಮತಿ ಇಲ್ಲದೆ ಒಸಿ ನೀಡುವಂತಿಲ್ಲ, ಈ ಕುರಿತು ನಿಯಮ ಜಾರಿಗೆ ತರಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಹುಲಿ ಅಭಯಾರಣ್ಯ: ಬಾಕಿ ಹಣ ಬಿಡುಗಡೆಗೆ ಕೇಂದ್ರ ಅರಣ್ಯ ಸಚಿವರಿಗೆ ಮನವಿ
ಪ್ರತಿಷ್ಠಿತ ಕಂಪನಿಗಳ ವಿರುದ್ಧ ಕ್ರಮ
ಇದೇ ವೇಳೆ ನಿಗದಿಯಂತೆ ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸದೆ ಗ್ರಾಹಕರಿಗೆ ವಂಚಿಸಿದ ಪ್ರಕರಣಗಳಲ್ಲಿ ಹಲವು ಪ್ರತಿಷ್ಠಿತ ಕಂಪನಿಗಳ ಹೆಸರಿದೆ. ಬೆಂಗಳೂರಿನಲ್ಲಿ ನಿತೇಶ್, ಮಂತ್ರಿ ಡೆವಲಪರ್ಸ್ ಸೇರಿದಂತೆ ಪ್ರತಿಷ್ಠಿತ ಹತ್ತು ಕಂಪನಿಗಳು ರೇರಾಗೆ 340 ಕೋಟಿ ರೂ. ದಂಡದ ಮೊತ್ತ ಬಾಕಿ ಉಳಿಸಿಕೊಂಡಿವೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಬಿಬಿಎಎಂಪಿ ಆಯುಕ್ತರ ಸಭೆ ಕರೆದು ಆ ಕಂಪನಿಗಳ ಯಾವುದೇ ಪ್ರಾಜೆಕ್ಟ್ ಗೆ ಅನುಮತಿ ನೀಡದಂತೆ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಅದೇ ಸಂಸ್ಥೆಗಳು ಬೇರೆ ಹೆಸರಿನಲ್ಲಿ ಕಂಪನಿ ತೆರೆದಿದ್ದರೂ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಜಮೀರ್ ಸೂಚಿಸಿದರು.