ಹೈಕೋರ್ಟ್ ತೀರ್ಪು, ಜನಪ್ರತಿನಿಧಿಗಳ ಕೋರ್ಟಿನ ಆದೇಶದ ಬಳಿಕ ನಿನ್ನೆ (ಸೋಮವಾರ) ಇ.ಡಿ. ಕೇಸು ದಾಖಲಾಗಿದೆ. ರಾಜ್ಯಪಾಲರು ದೆಹಲಿಯ ಕೈಗೊಂಬೆ ಎನ್ನುತ್ತಿದ್ದ ಸಿದ್ದರಾಮಯ್ಯನವರು ನಿವೇಶನ ವಾಪಸ್ ನೀಡುತ್ತಿರುವುದು ಕಾನೂನಿನ ಕುಣಿಕೆಯಿಂದ ಪಾರಾಗುವ ಉದ್ದೇಶದಿಂದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ರಾಜಕೀಯ ಸಹಾನುಭೂತಿ ಪಡೆಯಲು, ಅಧಿಕಾರಕ್ಕಾಗಿ ತೊಡೆ ತಟ್ಟುವ ಸ್ವಪಕ್ಷೀಯರನ್ನು ಸುಮ್ಮನಾಗಿಸಲು ಸೈಟ್ ಹಿಂತಿರುಗಿಸುವ ಈ ರಾಜಕೀಯ ನಾಟಕ ಮಾಡುತ್ತಿದ್ದಾರೆ” ಎಂದು ದೂರಿದರು.
“ಮುಖ್ಯಮಂತ್ರಿಗಳು ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು. ಇದು ಕೆಲವೇ ಗಂಟೆಗಳಲ್ಲಿ ಆದರೂ ಅಚ್ಚರಿಯಿಲ್ಲ. ಸಿದ್ದರಾಮಯ್ಯನವರು ತಪ್ಪು ಮಾಡಿದ್ದನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ. 2011ರಲ್ಲಿ ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಅವರ ವಿರುದ್ಧ ಆರೋಪ ಬಂದಿತ್ತು. ಆಗ, ತಪ್ಪು ಮಾಡದಿದ್ದರೆ ಯಾಕೆ ಸೈಟ್ ಸರೆಂಡರ್ ಮಾಡಿದ್ದಾರೆ” ಎಂದು ಪ್ರಶ್ನಿಸಿದರು.
“ಕಳಂಕ, ಆರೋಪಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ಇನ್ನಾದರೂ ತಮ್ಮ ಭಂಡತನವನ್ನು ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೊದಲು ರಾಜ್ಯಪಾಲರ ಕ್ಷಮೆ ಕೇಳಬೇಕು. ಸಾಮಾಜಿಕ ಕಾರ್ಯಕರ್ತ, ಬಡ ಕುಟುಂಬದವರಾದ ಸ್ನೇಹಮಯಿ ಕೃಷ್ಣರ ಮೇಲೆ ದೂರು ದಾಖಲಿಸಿ ಅವರನ್ನು ಬೆದರಿಸುವ ತಂತ್ರವನ್ನು ಮುಖ್ಯಮಂತ್ರಿಗಳು, ಅವರ ಹಿಂಬಾಲಕರು ಮಾಡುತ್ತಿದ್ದಾರೆ. ಗೃಹ ಸಚಿವರು ಮತ್ತು ಡಿಜಿಪಿ ಅವರು ತಕ್ಷಣ ಸ್ನೇಹಮಯಿ ಕೃಷ್ಣ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹರಿಯಾಣದಲ್ಲಿ ರಾಹುಲ್‌ಗೆ ಅವಕಾಶ ಮಾತ್ರವಲ್ಲ, ಎಚ್ಚರಿಕೆಯೂ ಇದೆ
“ಸಿಎಂ ತಮ್ಮ ಸ್ಥಾನದಿಂದ ಇಳಿಯುವುದನ್ನೇ ಕಾಂಗ್ರೆಸ್ ಪಕ್ಷದ ಕೆಲವರು ಕಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಆಪ್ತರಾದ ಮಹದೇವಪ್ಪ ಅವರು ಹೇಳಿದ್ದಾರೆ. ಅದಕ್ಕೂ ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ‘ಸಿದ್ದರಾಮಯ್ಯನವರು ಇವತ್ತು ಇರ್ತಾರೆ, ನಾಳೆ ಹೋಗ್ತಾರೆ’ ಎಂದಿದ್ದಾರೆ. ಇದು ನಿರ್ಗಮನದ ಮುನ್ಸೂಚನೆ. ಡಿಸಿಎಂ ಶಿವಕುಮಾರ್ ಅವರು ಗೌಪ್ಯವಾಗಿ ಪರಮೇಶ್ವರರನ್ನು ಭೇಟಿ ಮಾಡಿ ಅರ್ಧ ಗಂಟೆ ಚರ್ಚೆ ಮಾಡಿದ್ದಾರೆ. ಶಿವಕುಮಾರ್, ಪರಮೇಶ್ವರ್ ಅವರು, ಇನ್ನೂ ಕೂಡ ಸಿದ್ದರಾಮಯ್ಯರನ್ನು ರಕ್ಷಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ಪಾರ್ವತಿಯವರು ಅವರಾಗಿಯೇ ಈ ಪತ್ರ ಬರೆದರೇ?
“ಸಿದ್ದರಾಮಯ್ಯನವರ ಧರ್ಮಪತ್ನಿ ಪಾರ್ವತಿಯವರು ಸಿಎಂ, ಸಿಎಂ ಸುಪುತ್ರರ ಗಮನಕ್ಕೆ ಬರದೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕುಳಿತು ಮುಡಾಕ್ಕೆ ಪತ್ರ ಬರೆದಿದ್ದಾರೆ. 14 ನಿವೇಶನ ವಾಪಸ್ ಕೊಡುವುದಾಗಿ ಹೇಳಿದ್ದಾರೆ. ಪಾರ್ವತಿಯವರು ಅವರಾಗಿಯೇ ಈ ಪತ್ರ ಬರೆದರೇ? ಬಲವಂತವಾಗಿ ಬರೆದರೋ ನಮಗೆ ಗೊತ್ತಿಲ್ಲ. ತಪ್ಪೇ ಮಾಡಿಲ್ಲ, ನಾನು ಜಗ್ಗುವುದಿಲ್ಲ; ನಾನು ಬಗ್ಗುವುದಿಲ್ಲ; ಇದೆಲ್ಲ ರಾಜಕೀಯಪ್ರೇರಿತ ಎಂದು ಆರ್ಭಟಿಸುತ್ತಿದ್ದ ಮುಖ್ಯಮಂತ್ರಿಯವರು 62 ಕೋಟಿ ಕೊಡ್ತಾರ ನನಗೆ, ನಾನ್ಯಾಕೆ ಸೈಟ್ ವಾಪಸ್ ಕೊಡಲಿ ಎಂದಿದ್ದರು” ಎಂದು ನೆನಪಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಮುಖ್ಯವಕ್ತಾರ ಅಶ್ವತ್ಥನಾರಾಯಣ ಗೌಡ, ಶಾಸಕ- ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಸಿ.ಕೆ.ರಾಮಮೂರ್ತಿ, ಎಸ್‍ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಅವರು ಉಪಸ್ಥಿತರಿದ್ದರು.