- ವಿರೋಧ ಪಕ್ಷದ ಸದಸ್ಯ ಮುನಿರಾಜೇಗೌಡ ಪ್ರಶ್ನೆಗೆ ಉತ್ತರ
- ‘ರೈತರ ಭೂಮಿಗೆ ಮಾರುಕಟ್ಟೆ ಮೌಲ್ಯ ನಿಗದಿಗೆ ಅನುಕೂಲ’
ಸರ್ಕಾರಕ್ಕೆ ಮುದ್ರಾಂಕ ಶುಲ್ಕ ಪರಿಷ್ಕರಿಸುವ ಆಲೋಚನೆ ಇಲ್ಲ. ಆದರೆ, ರೈತರಿಗಾಗುತ್ತಿರುವ ಅನ್ಯಾಯ ತಡೆಯುವ ನಿಟ್ಟಿನಲ್ಲಿ ಜಮೀನಿನ ಮೌಲ್ಯ ಪರಿಷ್ಕರಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ವಿಧಾನ ಪರಿಷತ್‌ಗೆ ಮಾಹಿತಿ ನೀಡಿದರು.
ಬುಧವಾರದ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ವಿರೋಧ ಪಕ್ಷದ ಸದಸ್ಯ ಮುನಿರಾಜೇಗೌಡ ಅವರು, ಮುದ್ರಾಂಕ ಶುಲ್ಕ ಪರಿಷ್ಕರಣೆ ಬಗ್ಗೆ ಪ್ರಶ್ನಿಸಿದಾಗ ಸಚಿವರು ಉತ್ತರಿಸಿ, “ಮುದ್ರಾಂಕ ಶುಲ್ಕವನ್ನು ಪರಿಷ್ಕರಿಸುವ ಬಗ್ಗೆ ಸರ್ಕಾರಕ್ಕೆ ಯಾವುದೇ ಯೋಚನೆ ಇಲ್ಲ. ಆದರೆ ಜಮೀನಿನ ಮೌಲ್ಯ ಪರಿಷ್ಕರಣೆ ನಡೆಸಿ ಕನಿಷ್ಠ ನಾಲ್ಕು ವರ್ಷವಾಗಿದೆ. ಹೀಗಾಗಿ ಜಮೀನು ಮೌಲ್ಯ ಪರಿಷ್ಕರಣೆ ನಡೆಸಲಾಗುವುದು” ಎಂದರು.
ಮುಂದುವರೆದು, “ಜಮೀನಿನ ಮೌಲ್ಯ ಪರಿಷ್ಕರಣೆಯ ಆಧಾರದಲ್ಲಿ ರೈತರ ಭೂಮಿಗಳಿಗೆ ಮಾರುಕಟ್ಟೆ ಮೌಲ್ಯ ನಿಗದಿಯಾಗುತ್ತದೆ. ಆದರೆ, ಕಳೆದ ನಾಲ್ಕು ವರ್ಷದಿಂದ ಮೌಲ್ಯ ಪರಿಷ್ಕರಣೆಯಾಗದ ಕಾರಣ ರೈತರಿಗೆ ಅನ್ಯಾಯವಾಗುತ್ತಿದೆ. ರೈತರು ಜಮೀನು ಮಾರಾಟಕ್ಕೆ ಮುಂದಾಗುವಾಗ ಅವರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಅಲ್ಲದೆ, ಜಮೀನು ಮಾರಾಟ ಪ್ರಕ್ರಿಯೆಯಲ್ಲಿ ಹಣದ ವಹಿವಾಟು ಅಧಿಕವಾಗಿದ್ದು ಕಪ್ಪು ಹಣ ಪರಿವರ್ತನೆಗೂ ಕಾರಣವಾಗಿದೆ. ಹೀಗಾಗಿ ಜಮೀನಿನ ಮೌಲ್ಯವನ್ನು ಶೀಘ್ರದಲ್ಲೇ ಪರಿಷ್ಕರಿಸಲಾಗುವುದು” ಎಂದು ಸ್ಪಷ್ಟನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಅಧಿವೇಶನ | ನೀರಾವರಿ ಇಲಾಖೆಯಿಂದ 4 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ: ಡಿಕೆ ಶಿವಕುಮಾರ್
ಇದೇ ಸಂದರ್ಭದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದೂ ಪರಿಷತ್ ಸದಸ್ಯ ಮುನಿರಾಜೇಗೌಡ ಸದನದ ಗಮನ ಸೆಳೆದರು.
ಈ ಪ್ರಶ್ನೆಗೂ ಸೂಕ್ತ ಉತ್ತರ ನೀಡಿದ ಸಚಿವರು, “ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಅಧಿಕ ಸಂಖ್ಯೆಯಲ್ಲಿ ಜನ ಬರುವ ಕಾರಣ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಆದರೆ ಮುಂದಿನ ಒಂದು ವರ್ಷದಲ್ಲಿ ಎಲ್ಲ ಕಚೇರಿಗಳಲ್ಲೂ ಉತ್ತಮ ಜನಸ್ನೇಹಿ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಪಾಸ್‌ಪೋರ್ಟ್ ಕಚೇರಿಗಳ ಮಾದರಿಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲೂ ಉತ್ತಮ ಮೂಲಭೂತ ಸೌಲಭ್ಯ ನೀಡಲಾಗುವುದು” ಎಂದು ಭರವಸೆ ನೀಡಿದರು.