- ಅಕ್ಕಿ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿರುವ ಕೇಂದ್ರದ ವಿರುದ್ಧ ಕಾಂಗ್ರೆಸ್ ಪತ್ರಿಭಟನೆ
- ವಿಧಾನಸಭೆ ಚುನಾವಣೆಯ ಸೋಲಿನ ಹತಾಶೆಯಿಂದ ಬಿಜೆಪಿ ಈ ಕೆಲಸ ಮಾಡುತ್ತಿದೆ
ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಕೆ ಮಾಡಲು ಕೇಂದ್ರ ಬಿಜೆಪಿ ಸರ್ಕಾರ ನಿರಾಕರಿಸುತ್ತಿದೆ. ಸಕಾಲಕ್ಕೆ ಸರ್ಕಾರ ಅಕ್ಕಿ ನೀಡದಿದ್ದರೆ, ಕೇಂದ್ರದ ವಿರುದ್ಧ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ.
ಕಲಬುರ್ಗಿಯಲ್ಲಿಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಚುನಾವಣೆ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಬಿಜೆಪಿಗೆ ವೋಟು ಕೊಡಲಿಲ್ಲ ಎಂದಾದರೆ, ಮೋದಿ ಆಶೀರ್ವಾದ ಸಿಗುವುದಿಲ್ಲ ಎಂದಿದ್ದರು.
ಈಗ ಅದರಂತೆಯೇ ಕೇಂದ್ರ ನಡೆದುಕೊಳ್ಳುತ್ತಿದೆ. ಕರ್ನಾಟಕದ ಜನರ ವಿಚಾರದಲ್ಲಿ ಪ್ರಧಾನಿ ಮೋದಿ ದೊಡ್ಡ ಮನಸ್ಸು ಮಾಡಬೇಕಿದೆ. ಹೀಗಾದಲ್ಲಿ ಜುಲೈ 1ರಿಂದ ಅನ್ನಭಾಗ್ಯ ಜಾರಿಗೆ ತರಬಹುದು ಎಂದು ಹೇಳಿದರು.
ರಾಜ್ಯದ ಜನರ ವಿಚಾರದಲ್ಲಿ ಬಿಜೆಪಿ ಸಂಸದರ ನಡೆ ಖಂಡಿಸಿದ ಪ್ರಿಯಾಂಕ್ ಖರ್ಗೆ, 25 ಜನ ಬಿಜೆಪಿ ಸಂಸದರಿದ್ದು, ಯಾಕೆ ಬಾಯಿಗೆ ಹೊಲಿಗೆ ಹಾಕಿ ಕೂತಿದ್ದೀರಿ. ಮೈಸೂರು ಸಂಸದ ಪ್ರತಾಪ್ ಸಿಂಹ ಬರೀ ನಮ್ಮ ಪಕ್ಷದ ಬಗ್ಗೆ ಮಾತನಾಡುವುದನ್ನು ಬಿಟ್ಟು ಕನ್ನಡಿಗರ ಬಗ್ಗೆ ಮಾತನಾಡಲಿ. ಪ್ರಧಾನಿ ಜೊತೆ ಮಾತನಾಡಿ ರಾಜ್ಯದ ಪಾಲಿನ ಅಕ್ಕಿ ಕೊಡಿಸಲಿ ಎಂದರು.
ರಾಜ್ಯದಲ್ಲಿ ಈಗಿರುವ ದಾಸ್ತಾನಿನ ಪ್ರಕಾರ ಅಕ್ಕಿ ಬದಲು ಜೋಳ ಮತ್ತು ರಾಗಿ ನೀಡಿದರೂ ಅದು ಕೇವಲ ಎರಡು ಕೆ ಜಿ ವಿತರಿಸಲು ಮಾತ್ರ ಸಾಧ್ಯವಾಗುತದೆ. ಹೀಗಿರುವಾಗ ಕೇಂದ್ರ ನಮ್ಮೊಂದಿಗೆ ಕೈ ಜೋಡಿಸಬೇಕಲ್ಲವೆ ಎಂದು ಕೇಳಿದರು. ರಾಜ್ಯ ಸರ್ಕಾರಗಳಿಂದ ಖರೀದಿಸಿದ ಆಹಾರ ಧಾನ್ಯಗಳೇ ಕೇಂದ್ರದಲ್ಲಿರುವುದು. ಅದು ಬಿಟ್ಟು ಅವರು ಕೊಡುವುದಿಲ್ಲ ಎನ್ನಲು ಅವರೇನು ಪ್ರತ್ಯೇಕ ಹೊಲಗದ್ದೆ ಇಟ್ಟುಕೊಂಡು ಬೆಳೆದು ದಾಸ್ತಾನು ಇಟ್ಟುಕೊಂಡಿದ್ದಾರಾ ಎಂದು ಪ್ರಿಯಾಂಕ್ ಪ್ರಶ್ನಿಸಿದರು.
ಬಡಜನರ ಯೋಜನೆ ವಿಚಾರದಲ್ಲಿ ಕೇಂದ್ರದ ತಾರತಮ್ಯ ಸರಿಯಲ್ಲ. ಇವರು ಹೀಗೇ ಮುಂದುವರೆದರೆ ಕಾನೂನು ಹೋರಾಟ ಮಾಡುವುದರ ಕುರಿತು ಚಿಂತನೆ ನಡೆಸಬೇಕಾಗುತ್ತದೆ ಎಂದವರು ಹೇಳಿದರು.
ಈ ಸುದ್ದಿ ಓದಿದ್ದೀರಾ?:1.50 ಲಕ್ಷ ಟನ್ ಅಕ್ಕಿ ಕೊಡಲು ಛತ್ತೀಸಗಢ್ ಸರ್ಕಾರ ಒಪ್ಪಿದೆ: ಡಾ.ಜಿ ಪರಮೇಶ್ವರ್
ಹಸಿದವರ ಹೊಟ್ಟೆ ತುಂಬಿಸಲು ಅಕ್ಕಿ ಕೇಳಿದರೆ ಅದಕ್ಕೆ ಇಲ್ಲ ಎನ್ನುವ ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲಿಕ್ಕೆ ತಯಾರಿದೆ. ಇದು ದ್ವೇಷದ ರಾಜಕೀಯವಲ್ಲದೆ ಮತ್ತೇನು ಎಂದು ಪ್ರಿಯಾಂಕ್ ಪ್ರಶ್ನಿಸಿದರು.
ಬಿಜೆಪಿಯವರು ಕೇವಲ ವಾಟ್ಸಪ್ ಯೂನಿವರ್ಸಿಟಿಯಲ್ಲಿರುತ್ತಾರೆ. ನಾವು ಬೆಳೆದ ಆಹಾರ ಧಾನ್ಯಗಳು ನಮಗೆ ಸಿಗುತ್ತಿಲ್ಲ. ಆದರೆ ವಿದೇಶಗಳಿಗೆ ರಫ್ತು ಮಾಡಲು ಇವರು ಮುಂದಾಗಿದ್ದಾರೆ. ಇದು ನಿಜವಾದ ದೇಶ ದ್ರೋಹದ ಕೆಲಸ. ಸೋಲಿನ ಹತಾಶೆಯಿಂದ ಬಿಜೆಪಿ ಈ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು ಅಂತ ಈ ರೀತಿ ಮಾಡ್ತಿದ್ದಾರೆ. ಕನ್ನಡಿಗರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ ಎಂದು ಸಚಿವರು ವಾಗ್ದಾಳಿ ನಡೆಸಿದರು.
ಇನ್ನು ಒಂದೇ ಒಂದು ಕಾಳು ಅಕ್ಕಿ ಕಡಿಮೆಯಾದರೂ ಸಹಿಸಲ್ಲ ಎಂದಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಒಂದೇ ಒಂದು ಕಾಳು ಕಡಿಮೆ ಸಿಗಬಾರದು ಅಂದ್ರೆ ನಮ್ಮ ಜೊತೆ ಕೈ ಜೋಡಿಸಲಿ. ಯಡಿಯೂರಪ್ಪನವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಿ ಎಂದು ತಿರುಗೇಟು ಕೊಟ್ಟಿದ್ದಾರೆ.