2021ರಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಮತಗಳ ಮರು ಎಣಿಕೆಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಇದೀಗ, ಚಿಕ್ಕಮಗಳೂರು ಜಿಲ್ಲಾಡಳಿತವು ಮತಗಳ ಮರು ಎಣಿಕೆಯನ್ನು ಫೆಬ್ರವರಿ 28ರಂದು ನಡೆಸಲು ದಿನಾಂಕ ನಿಗದಿ ಮಾಡಿದೆ. ಚಿಕ್ಕಮಗಳೂರು ಭಾಗದಿಂದ ಗೆದ್ದಿದ್ದ ಬಿಜೆಪಿ ನಾಯಕ , ಪರಿಷತ್‌ನ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಅವರಿಗೆ ಸಂಕಷ್ಟ ಎದುರಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ಸದಸ್ಯರನ್ನು ಆಯ್ಕೆ ಮಾಡಲು 2021ರಲ್ಲಿ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಬಿಜೆಪಿಯಿಂದ ಎಂ.ಕೆ ಪ್ರಾಣೇಶ್ ಮತ್ತು ಕಾಂಗ್ರೆಸ್‌ನಿಂದ ಗಾಯತ್ರಿ ಶಾಂತೇಗೌಡ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಾಣೇಶ್ 6 ಮತಗಳ ಅಂತರದಿಂದ ಗೆದ್ದಿದ್ದರು. ಸೋಲನುಭವಿಸಿದ ಗಾಯತ್ರಿ ಅವರ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
ಗಾಯತ್ರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಚುನಾವಣಾ ಮತದಾನ ಮತಗಳನ್ನು ಮರು ಎಣಿಕೆ ಮಾಡುವಂತೆ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಚುನಾವಣೆಯಲ್ಲಿ ಮತದಾನವಾಗಿದ್ದ ಸರ್ಕಾರದ 12 ನಾಮ ನಿರ್ದೇಶಿತರ ಮತಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಮತಗಳನ್ನು ಮರು ಎಣಿಕೆ ಮಾಡಬೇಕು. ಮಾರ್ಚ್ 7ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ.
ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಫೆಬ್ರವರಿ 28ರಂದು ಮತಗಳ ಮರು ಎಣಿಕೆ ಮಾಡುವುದಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ. ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಗಳ ಮರು ಎಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕಾಲೇಜು ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಶುಕ್ರವಾರ (ಫೆ.28) ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆ ಸಮಯದಲ್ಲಿ ಜನರು ಗುಂಪಾಗಿ ಕೇಲೇಜು ಬಳಿ ಓಡಾಡುವಂತಿಲ್ಲ. ಚಿಕ್ಕಮಗಳೂರು ನಗರದಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎಂದೂ ಆದೇಶಿಸಿದ್ದಾರೆ.
ಒಂದು ವೇಳೆ, ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಎಂ.ಕೆ ಪ್ರಾಣೇಶ್ ಸೋತರೆ, ಅವರು ಪರಿಷತ್ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ. ಉಪ ಸಭಾಪತಿ ಸ್ಥಾನವನ್ನೂ ಕೆಳದುಕೊಳ್ಳುತ್ತಾರೆ. ಆದಾಗ್ಯೂ, ಅವರೂ ಕೂಡ ಕಾನೂನು ಹೋರಾಟ ನಡೆಸುವ ಅವಕಾಶ ಇರುತ್ತದೆ. ಕಾಂಗ್ರೆಸ್‌ನ ಗಾಯತ್ರಿ ಅವರು ಗೆದ್ದರೆ, ಅವರು ಪರಿಷತ್ ಸದಸ್ಯರಾಗುವ ಬಗ್ಗೆ ನ್ಯಾಯಾಲಯ ನಿರ್ಧರಿಸಲಿದೆ. ಅಲ್ಲದೆ, ಚುನಾವಣೆ ನಡೆದು ಈಗಾಗಲೇ ನಾಲ್ಕು ವರ್ಷಗಳಾಗಿದ್ದು, ಇನ್ನು 2 ವರ್ಷಗಳು ಮಾತ್ರವೇ ಅವರಿಗೆ ಅಧಿಕಾರ ಇರಲಿದೆ.