- ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ
- ಅಭ್ಯರ್ಥಿಗಳಿಗೆ ಜೊತೆಯಾದ ಕಾಂಗ್ರೆಸ್ ಮುಖಂಡರು, ನಾಯಕರುಗಳು
ತೆರವಾಗಿರುವ ಮೂರು ಸ್ಥಾನಗಳ ವಿಧಾನ ಪರಿಷತ್ ಚುನಾವಣೆ ಸುಲುವಾಗಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಜಗದೀಶ್ ಶೆಟ್ಟರ್, ಸಚಿವ ಬೋಸರಾಜು ಹಾಗೂ ತಿಪ್ಪಣ್ಣ ಕಮಕನೂರ ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಸಂಪುಟ ಸಚಿವರನೇಕರು ಹಾಜರಿದ್ದರು. ವಿಧಾನಸಭೆ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿಯವರಿಗೆ ಮೂವರು ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ತಿಪ್ಪಣ್ಣ ಕಮಕನೂರ್, “ಕೋಲಿ ಸಮಾಜದ ಪ್ರಮುಖ ನಾಯಕರಲ್ಲಿ ನಾನೂ ಒಬ್ಬ. ನನಗೆ ಪರಿಷತ್ ಸದಸ್ಯ ಸ್ಥಾನ ಕೊಡಬೇಕು ಎಂದು ಸಮಾಜದ ಬೇಡಿಕೆ ಇತ್ತು. ನಾನು ಹತ್ತು ಹಲವಾರು ಕೆಲಸಗಳನ್ನು ಮಾಡಿದ್ದೀನಿ. ಈ ಸ್ಥಾನ ಅನಿರೀಕ್ಷಿತವಾಗಿ ನೀಡಿದ್ದಲ್ಲ. ನನ್ನ ವ್ಯಕ್ತಿತ್ವ ನೋಡಿ ಕೊಟ್ಟಿರುವ ಅವಕಾಶ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಅನ್ನ ಭಾಗ್ಯ | ರಾಜ್ಯದ ಜೋಳ, ರಾಗಿ, ಕುಚಲಕ್ಕಿ ಹಾಗೂ ಸಿರಿಧಾನ್ಯ ಖರೀದಿಸಿ ಹಂಚಿ: ರೈತ ಸಂಘಗಳ ಮನವಿ
“ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಬೇಕಾದ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ. ನಮ್ಮದೂ ಪ್ರಭಾವಿ ಸಮುದಾಯವಾಗಿರುವ ಕಾರಣ ಅದರ ಸಂಘಟನೆಯನ್ನೂ ಮಾಡಬೇಕಿದೆ. ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಗೌರವಯುತ ಸ್ಥಾನ ಕಲ್ಪಿಸಿಕೊಡುತ್ತಿದೆ. ನಾನು ಪಕ್ಷದ ಕೆಲಸ ಮಾಡುವೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಾರಿ ಅಂತರದಲ್ಲಿ ಗೆಲ್ಲುತ್ತದೆ” ಎಂದು ಕಮಕನೂರು ವಿಶ್ವಾಸ ವ್ಯಕ್ತಪಡಿಸಿದರು.
“ನಮ್ಮ ಸಮಾಜಕ್ಕೆ ಎಸ್ಟಿ ಮೀಸಲಾತಿ ಸಿಗಬೇಕು, ಪರಿಷತ್ ಸದಸ್ಯನಾದ ಬಳಿಕ ಅದಕ್ಕೆ ನಾನು ಹೋರಾಟ ಮಾಡುತ್ತೇನೆ” ಎಂದು ತಿಪ್ಪಣ್ಣ ಹೇಳಿದರು. ಜಗದೀಶ್ ಶೆಟ್ಟರ್ ಪಕ್ಷದ ಕಾಳಜಿಗೆ ಧನ್ಯವಾದ ಸಲ್ಲಿಸಿದರೆ, ಬೋಸರಾಜು ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು.
ಅಂದ ಹಾಗೆ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನ. ಜೂನ್ 30 ರಂದು ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.