ವಿಧಾನ ಪರಿಷತ್ ನಾಮನಿರ್ದೇಶನ: ನಾಲ್ಕು ಸ್ಥಾನಗಳಿಗೆ ಇವರೇ ಬಹುತೇಕ ಖಚಿತ!

Date:

Advertisements
ಮೇಲ್ಮನೆ ಎನ್ನುವುದು ಚಿಂತಕರ ಚಾವಡಿ ಎಂಬ ಪ್ರತೀತಿ ಇದೆ. ನಾಮನಿರ್ದೇಶನ ಎನ್ನುವುದು ಚುನಾವಣೆಯಲ್ಲಿ ಸೋತವರಿಗೆ ರಾಜಕೀಯವ ಪುನರ್ವಸತಿ ಕೇಂದ್ರವಾಗಬಾರದು.

ಕರ್ನಾಟಕ ಭವನ ಉದ್ಘಾಟನೆ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಹೈಕಮಾಂಡ್‌ ನಾಯಕರ ಜೊತೆಗೆ ವಿಧಾನ ಪರಿಷತ್‌ನಲ್ಲಿ ಬಾಕಿ ಇರುವ ನಾಲ್ಕು ಸ್ಥಾನಗಳನ್ನು ತುಂಬಿಕೊಳ್ಳುವ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಅವರೊಂದಿಗೆ ವಿಧಾನ ಪರಿಷತ್‌ನ ನಾಮನಿರ್ದೇಶನ ಸ್ಥಾನ ಭರ್ತಿ ವಿಚಾರವಾಗಿ ಚರ್ಚೆ ನಡೆದಿದ್ದು, ಹಲವು ನಾಯಕರ ಹೆಸರುಗಳು ಪ್ರಸ್ತಾಪವಾಗಿವೆ.

ವಿಧಾನ ಪರಿಷತ್‌ನಲ್ಲಿ ಸದ್ಯ ಕಾಂಗ್ರೆಸ್‌ 33 ಸ್ಥಾನಗಳನ್ನು ಹೊಂದಿದೆ. ಈ ನಾಲ್ಕು ಸದಸ್ಯರ ನಾಮನಿರ್ದೇಶನದ ಬಳಿಕ ಕಾಂಗ್ರೆಸ್‌ನ ಬಲವು 37ಕ್ಕೆ ಹೆಚ್ಚಾಗಲಿದೆ. ಇದರಿಂದ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತವೂ ಸಿಗಲಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಸಮುದಾಯದ ಸಮೀಕರಣದ ಮೇಲೆ ನಾಯಕರ ಆಯ್ಕೆ ಪರಿಗಣಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ್‌ ಖರ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವಾಗ ಮುಖ್ಯವಾಗಿ ಒಕ್ಕಲಿಗ, ಇತರೆ ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯಕ್ಕೆ ಒತ್ತು ಕೊಡಬೇಕು ಎಂದು ಹೈಕಮಾಂಡ್‌ ಮುಂದೆ ಸಿದ್ದರಾಮಯ್ಯ ಮನವಿ ಇಟ್ಟಿದ್ದಾರೆ. ‌

Advertisements

ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್‌ ನಾಯಕರ ದೆಹಲಿ ಭೇಟಿ: ಬಣ ಬಡಿದಾಟ ನಿರ್ಲಕ್ಷ್ಯ, ರಾಹುಲ್ ಗಾಂಧಿ ಕೊಟ್ಟ ಸಂದೇಶವೇನು?

ಸಂಭಾವ್ಯ ಸದಸ್ಯರ ಪಟ್ಟಿ ಹೀಗಿದೆ

ಒಕ್ಕಲಿಗ ಸಮುದಾಯದಿಂದ ಬಿ.ಎಲ್‌.ಶಂಕರ್‌, ರಘುನಂದನ್‌ ರಾಮಣ್ಣ ಹಾಗೂ ವಿನಯ್‌ ಕಾರ್ತಿಕ್‌ ಹೆಸರುಗಳು ಮುನ್ನೆಲೆಗೆ ಬಂದಿವೆ. ಇನ್ನು ಒಬಿಸಿ ಸಮುದಾಯದಿಂದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು ಮತ್ತು ಈಡಿಗ ಸಮುದಾಯದ ಹಿರಿಯ ಪತ್ರಕರ್ತ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್‌ ಅಮಿನ್‌ಮಟ್ಟು ಹಾಗೂ ಹಿಂದುಳಿಗ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್‌ ದ್ವಾರಕಾನಾಥ್ ಅವರ ಹೆಸರು ಪ್ರಸ್ತಾಪವಾಗಿದೆ. ಹಾಗೆಯೇ ದಲಿತ ಸಮುದಾಯದಿಂದ ಡಿ.ಜಿ.ಸಾಗರ್ ಅಥವಾ ಮೈಸೂರು ಮೂಲದ ಪತ್ರಕರ್ತ ಶಿವಕುಮಾರ್ ಅವರನ್ನು ಪರಿಗಣಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಪರಿಷತ್‌ನ ನಾಲ್ಕು ಸ್ಥಾನಗಳಲ್ಲಿ ಎರಡು ಸ್ಥಾನಕ್ಕೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರೆ, ಡಿ.ಕೆ ಶಿವಕುಮಾರ್‌ ಸಹ ತಾವೂ ಎರಡು ಸ್ಥಾನಕ್ಕೆ ಹಠ ಹಿಡಿದಿದ್ದಾರೆ. ದಲಿತ ಕೋಟಾದಲ್ಲಿ ಡಿ.ಜಿ.ಸಾಗರ್ ಅಥವಾ ಪತ್ರಕರ್ತ ಶಿವಕುಮಾ‌ರ್ ಅವರನ್ನು ಪರಿಗಣಿಸಬೇಕು ಎಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರೇ ದಲಿತ ಕೋಟಾವನ್ನು ನಿರ್ಧರಿಸಲಿದ್ದು, ಕಲಬುರಗಿ ಭಾಗದ ನಾಯಕರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಮನಸಿನಲ್ಲಿಯ ಹೆಸರು ಇನ್ನೂ ನಿಗೂಢವಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಲಿಸ್ಟ್‌ನಲ್ಲಿ ಒಕ್ಕಲಿಗ ಸಮುದಾಯದಿಂದ ಬಿ.ಎಲ್‌ ಶಂಕರ್‌ ಮತ್ತು ಮಾಧ್ಯಮ ವಿಭಾಗದ ಒಬಿಸಿ ಕೋಟಾದಿಂದ ದಿನೇಶ್‌ ಅಮೀನ್‌ ಮಟ್ಟು ಹೆಸರು ಬಹುತೇಕ ಫೈನಲ್‌ ಆಗಿದೆ ಎನ್ನಲಾಗಿದೆ. ಬಿ.ಎಲ್‌.ಶಂಕರ್ ಅವರನ್ನು ಪರಿಷತ್‌ಗೆ ನಾಮನಿರ್ದೇಶನ ಮಾಡಿ, ಸಭಾಪತಿ ಸ್ಥಾನ ಕೊಡಬೇಕು ಎಂಬ ಚಿಂತನೆ ಸಿದ್ದರಾಮಯ್ಯ ಅವರದ್ದು. ಹಾಗೆಯೇ ಮಾಧ್ಯಮ ವಿಭಾಗದಲ್ಲೂ ಅಹಿಂದದ ಪ್ರಾಶಸ್ತ್ಯ ಇರಲಿ ಎನ್ನುವ ಕಾರಣಕ್ಕೆ ದಿನೇಶ್‌ ಅಮೀನ್‌ ಮಟ್ಟು ಹೆಸರು ಕೇಳಿಬಂದಿದೆ. ದಿನೇಶ್‌ ಅಮೀನ್‌ ಮಟ್ಟು ಸಹ ಸೈದ್ಧಾಂತಿಕವಾಗಿ ಬಿಜೆಪಿಯನ್ನು ಕಟುವಾಗಿ ಟೀಕಿಸುವ ಎದೆಗಾರಿಕೆ ಉಳ್ಳವರು. ವೈಚಾರಿಕವಾಗಿ ಆಳ ಜ್ಞಾನ ಸಹ ಇದೆ. ಇಂತವರು ಪರಿಷತ್‌ಗೆ ಬರುವುದರಿಂದ ಸದನದ ಚರ್ಚೆಗಳ ತೂಕವು ಹೆಚ್ಚಾಗುತ್ತದೆ ಎಂಬುದು ಸಿಎಂ ನಿಲುವು.

ಅತ್ತ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದ ಕೋಟಾ ಬಿಟ್ಟುಕೊಡದಿರಲು ಪಟ್ಟು ಹಿಡಿದಿದ್ದಾರೆ. ಡಿ.ಕೆ ಶಿವಕುಮಾರ್‌ ಲಿಸ್ಟ್‌ನಲ್ಲಿ ಕೆಪಿಸಿಸಿ ಖಜಾಂಚಿ ವಿನಯ್‌ ಕಾರ್ತಿಕ್ ಹೆಸರು ಫೈನಲ್‌ ಆಗಿದ್ದು, ರಘುನಂದನ್‌ ರಾಮಣ್ಣ ಅವರಿಗೂ ಸ್ಥಾನ ಕೊಡಿಸಲು ಕಸರತ್ತು ನಡೆಸಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಘುನಂದನ್‌ ರಾಮಣ್ಣ ಅವರನ್ನ ಪರಿಷತ್ ಸದಸ್ಯರನ್ನಾಗಿ ಮಾಡುವುದಾಗಿ ಡಿಕೆಶಿ ಭರವಸೆ ನೀಡಿದ್ದರು. ಹೀಗಾಗಿ ಪರಿಷತ್‌ಗೆ ನಾಮನಿರ್ದೇಶನ ಮಾಡಲು ರಘುನಂದನ್‌ ಹೆಸರು ರೇಸ್‌ನಲ್ಲಿದೆ.

ನಾಮನಿರ್ದೇಶನ ಪ್ರಕ್ರಿಯೆ ಅಂತಿಮಗೊಳಿಸುವ ಸಂಬಂಧ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದ್ದಾರೆ. ಖರ್ಗೆ ಅವರು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಸಹಮತಕ್ಕೆ ಬಂದು ಸಂಭಾವ್ಯರ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿ ಎಂದಿದ್ದಾರೆ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ಎಲೆಮರೆ ಕಾಯಿಯಂತೆ ದುಡಿಯುತ್ತಿರುವ ಸಣ್ಣ ಸಮುದಾಯಗಳ ನಾಯಕರಿಗೂ ಅವಕಾಶ ಸಿಗಲಿ ಎಂದು ಖರ್ಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ 3 24

ಈ ಹಿಂದೆ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಲು ಸಿದ್ದರಾಮಯ್ಯ ಒಲವು ತೋರಿದಾಗ ವಿಧಾನಸಭಾ ಚುನಾವಣೆಯಲ್ಲಿ ಸೋತವರಿಗೆ ಆದ್ಯತೆ ನೀಡುವುದು ಬೇಡ ಎಂದು ಡಿ.ಕೆ ಶಿವಕುಮಾರ್ ವಾದಿಸಿದ್ದರು. ಅದೇ ಸೂತ್ರವನ್ನು ಇಲ್ಲಿ ಅನುಸರಿಸಿದರೆ 2013ರಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಂತು ಸೋತಿರುವ ಬಿ. ಎಲ್‌ ಶಂಕರ್‌ ಅವರಿಗೆ ಸ್ಥಾನ ಸಿಗುತ್ತದೆಯೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ವಿಧಾನಪರಿಷತ್‌ ನಾಮನಿರ್ದೇಶನದ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಹಾಗೂ ಪಕ್ಷದ ಪರ ದನಿ ಎತ್ತುವವರಿಗೆ ನೀಡಬೇಕು. ನಿರುದ್ಯೋಗಿಗಳಿಗೆ ಬೇಡ ಎಂದು ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದ್ದನ್ನು ಇಲ್ಲಿ ಗಮನಿಸಬಹುದು.

ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬಿ.ಎಲ್‌ ಶಂಕರ್‌ ಅವರು ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ನಾಲ್ಕು ಅವಧಿಗೆ ಅಧ್ಯಕ್ಷರಾಗಿದ್ದು, ಜೊತೆಗೆ ಸರ್ಕಾರ ಕೂಡ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ನೀಡಿದೆ. ಆದಾಗ್ಯೂ ಈ ಸಲ ಅವರಿಗೆ ಅವಕಾಶ ಕೊಡಬೇಕೆಂದು ಪಕ್ಷದೊಳಗಿನ ಒಂದು ಗುಂಪು ಶಂಕರ್ ಪರ ಲಾಬಿ ಮಾಡಿದೆ. ಸಿದ್ದರಾಮಯ್ಯ ಅವರು ಬಿ.ಎಲ್‌ ಶಂಕರ್‌ ಪರವಾಗಿದ್ದು, ಡಿ.ಕೆ.ಶಿವಕುಮಾರ್ ಸಹ ಒಪ್ಪಿದರೆ ಅವರಿಗೆ ಪರಿಷತ್‌ ಸ್ಥಾನ ಸಿಗುವ ಸಾಧ್ಯತೆ ಇದೆ. ಹೈಕಮಾಂಡ್ ಚಿತ್ತ ಯಾರ ಕಡೆ ಎಂಬುದು ಮಾತ್ರ ಕುತೂಹಲ ಕೆರಳಿಸಿದೆ.

ಮಾಜಿ ಎಂಎಲ್‌ಸಿ ರಮೇಶ್‌ ಬಾಬು ಅವರನ್ನು 2024ರಲ್ಲಿ ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷರನ್ನಾಗಿ ಸಿದ್ದರಾಮಯ್ಯ ಸರ್ಕಾರ ನೇಮಿಸಿತ್ತು. ಆದರೆ ಅಲ್ಲಿಯ ಬಿಜೆಪಿ ಸರ್ಕಾರದ ಹಗರಣದಿಂದಾಗಿ ಆ ಸ್ಥಾನ ಅಲಂಕರಿಸಲು ರಮೇಶ್‌ ಬಾಬು ನಿರಾಕರಿಸಿದರು. ಸದ್ಯ ಅವರು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಟ್ಟಾರೆ ಮೇಲ್ಮನೆ ಎನ್ನುವುದು ಚಿಂತಕರ ಚಾವಡಿ ಎಂಬ ಪ್ರತೀತಿ ಇದೆ. ನಾಮನಿರ್ದೇಶನ ಎನ್ನುವುದು ಚುನಾವಣೆಯಲ್ಲಿ ಸೋತವರಿಗೆ ರಾಜಕೀಯವ ಪುನರ್ವಸತಿ ಕೇಂದ್ರವಾಗಬಾರದು. ಕಲೆ, ಸಾಹಿತ್ಯ, ರಂಗಭೂಮಿ, ಸಿನೆಮಾ, ಪತ್ರಿಕಾ ರಂಗ, ಸಂಗೀತ ಹೀಗೆ ವಿವಿಧ ಕ್ಷೇತ್ರಗಳಿಂದ ನಾಮನಿರ್ದೇಶನಗೊಳ್ಳುವ ಸಂಪ್ರದಾಯ ಮುಂದುವರಿದರೆ, ಬೇರೆ ಬೇರೆ ವಲಯದ ವಿಷಯ ತಜ್ಞರು ಪರಿಷತ್‌ನೊಳಗೆ ಬರುತ್ತಾರೆ. ಸದನದಲ್ಲೂ ಗಹನವಾದ ಚರ್ಚೆಗಳಿಗೆ ಆಸ್ಪದವಿರುತ್ತದೆ. ಅದು ನಾಡಿನ ಅಸ್ಮಿತೆಗೆ, ಅಭಿವೃದ್ಧಿಗೆ ಅನುಕೂಲವಾಗುತ್ತದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X