ಮಹಿಳೆಯರಿಗೆ ಅಪಮಾನ, ಹೀನ ಮಾತುಗಳೇ ನಮ್ಮ ಸಂಸ್ಕೃತಿ ಎಂದು ಬಿಜೆಪಿ ಒಪ್ಪಿಕೊಳ್ಳಲಿ. ನಾವು ತಕರಾರು ಮಾಡುವುದಿಲ್ಲ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿ, “ಸಿ.ಟಿ. ರವಿ ಕೇವಲ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಮಾತ್ರ ಮಾತನಾಡಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆಯೂ ಹೀನ ಮಾತು ಆಡಿದ್ದಾರೆ. ಸದನದಲ್ಲಿ ನಿತ್ಯ ಸುಮಂಗಲಿ ಎಂದು ಪದ ಬಳಕೆ ಮಾಡಿದ್ದಾರೆ. ರವಿ ಅವರ ಮಾತುಗಳು ಸರಿಯೋ ತಪ್ಪೋ ಎಂದು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ” ಎಂದು ತಿಳಿಸಿದರು.
“ಚಿಕ್ಕಮಗಳೂರು ಜನ ಎಂದರೆ ಸುಸಂಸ್ಕೃತ ಜನ. ಅಂತಹವರ ನಡುವಿನಿಂದ ಇಂತಹ ವ್ಯಕ್ತಿ ಬಂದಿರುವುದು ದುರಂತ. ನಮ್ಮ ಪಕ್ಷದ ಯಾವುದೇ ನಾಯಕರು ಈ ರೀತಿ ಮಾತನಾಡಿದ್ದರೆ ನಾನು ಖಂಡಿಸುತ್ತಿದ್ದೆ. ಆದರೆ ಬಿಜೆಪಿ ನಾಯಕರು ತಮ್ಮ ಪಕ್ಷದ ನಾಯಕರ ರಕ್ಷಣೆಗೆ ನಿಂತಿದ್ದಾರೆ. ಮುನಿರತ್ನ ಪ್ರಕರಣ ಇದೇ ಆರ್.ಅಶೋಕ್ ಏನು ಹೇಳಿದ್ದರು? ಎಫ್ ಎಸ್ ಎಲ್ ವರದಿಯಲ್ಲಿ ಸತ್ಯಾಂಶ ಬಂದ ನಂತರ ಪಕ್ಷದಿಂದ ಹೊರಹಾಕುವುದಾಗಿ ಹೇಳಿದ್ದರು. ಈ ಪ್ರಕರಣದಲ್ಲಿ ಅವರು ಒಂದು ಭಾಗವಾಗಿದ್ದರೂ ಆತನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದೇ ಅವರ ನಾಯಕತ್ವ. ಅವರ ಮುತ್ತು ರತ್ನಗಳನ್ನು ಅವರೇ ಇಟ್ಟುಕೊಳ್ಳಲಿ” ಎಂದು ಕಿಡಿಕಾರಿದರು.
ಅವರ ಮನೆ, ಪಕ್ಷದಲ್ಲಿ ಏನಾದರೂ ನಾನೇ ಕಾರಣ!
ಸಿ. ಟಿ. ರವಿ ಅವರನ್ನು ರಾತ್ರಿಯಿಡೀ ಪೊಲೀಸರು ಸುತ್ತಾಡಿಸಿದರು ಎಂದು ನಿಮ್ಮ ವಿರುದ್ಧ ಬೆಟ್ಟು ಮಾಡಿ ತೋರುತ್ತಿದ್ದಾರೆ ಎಂದು ಕೇಳಿದಾಗ, “ಈ ವಿಚಾರದಲ್ಲಿ ನೀವುಂಟು, ಪೊಲೀಸ್ ಉಂಟು. ಅವರ ಮನೆಯಲ್ಲಿ ಏನಾದರೂ ನಾನೇ ಕಾರಣ. ಅವರ ಪಕ್ಷದಲ್ಲಿ ಏನಾದರೂ ನಾನೇ ಕಾರಣ. ಹೊರಗಡೆ ಏನಾದರೂ ನಾನೇ ಕಾರಣ. ನನ್ನ ಸ್ಮರಿಸದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ” ಎಂದು ತಿಳಿಸಿದರು.
ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಲೆಕ್ಕ ಚುಕ್ತಾ
ಇದಕ್ಕೆಲ್ಲ ಕೊನೆಯಾಡುತ್ತೇವೆ ಎಂಬ ಸಿ.ಟಿ ರವಿ ಹೇಳಿಕೆ ಬಗ್ಗೆ ಕೇಳಿದಾಗ, “ಇಂತಹ ಲೆಕ್ಕ ಚುಕ್ತಾಗಳನ್ನು ಬಹಳ ನೋಡಿದ್ದೇವೆ. ಬಹಳ ಸಂತೋಷ. ಅವರೊಬ್ಬರೇ ಲೆಕ್ಕ ಚುಕ್ತಾ ಮಾಡುತ್ತಾರ? ಎಲ್ಲರೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಲೆಕ್ಕ ಚುಕ್ತಾ ಮಾಡುತ್ತಾರೆ. ಬಿಜೆಪಿಯವರು ತಮ್ಮ ಹೇಳಿಕೆ ಮುಚ್ಚಿಕೊಳ್ಳಲು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರ ಆಡಳಿತದಲ್ಲಿ ಪೊಲೀಸರನ್ನು ಹೇಗೆ ಬಳಸಿಕೊಂಡಿದ್ದರು” ಎಂದು ಮಾರ್ಮಿಕವಾಗಿ ಹೇಳಿದರು.