- ಬಿಜೆಪಿ ಸೋಲಿಸಿದ ರಾಜ್ಯದ ಮೇಲೆ ಕೇಂದ್ರ ದ್ವೇಷ ತೋರುತ್ತಿದೆ
- ಸ್ಥಳೀಯ ರೈತರಿಂದ ಅಕ್ಕಿ ಖರೀದಿಸಿ ಪ್ರೋತ್ಸಾಹ ನೀಡಲಿ
ಸರ್ಕಾರದ ಅನ್ನಭಾಗ್ಯ ಯೋಜನೆ ಹಾಗೂ ಪಡಿತರ ವಿತರಣೆಯಲ್ಲಿ ಅಕ್ಕಿ ಜೊತೆಗೆ ರಾಗಿ, ಜೋಳ ವಿತರಣೆ ಮಾಡುವಂತಾಗಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅಕ್ಕಿ ಹಂಚಿಕೆ ವಿಚಾರದಲ್ಲಿನ ಕೇಂದ್ರ ಸರ್ಕಾರದ ನಡೆಯನ್ನು ಅವರು ಖಂಡಿಸಿದರು.
“ಪಕ್ಷಗಳ ನಡುವಿನ ರಾಜಕೀಯ ಜಿದ್ದು ಸಾಮಾನ್ಯ. ಆದರೆ ಅಕ್ಕಿ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಜನರ ವಿರುದ್ಧವೂ ದ್ವೇಷದ ರಾಜಕಾರಣ ಮಾಡಹೊರಟಿದೆ” ಎಂದು ನಾಗೇಂದ್ರ ಟೀಕಿಸಿದರು.
“ಗೋದಾಮುಗಳಲ್ಲಿ ದಾಸ್ತಾನು ಇದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಬಿಡುಗಡೆ ಮಾಡುತ್ತಿಲ್ಲ. ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಸೋಲಿಸಿದ ರಾಜ್ಯದ ಮತದಾರರ ಮೇಲೆ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ” ಎಂದರು.
“ಮೊದಲೇ ನಮ್ಮ ರಾಜ್ಯದಲ್ಲಿ ಅಕ್ಕಿ, ರಾಗಿ, ಭತ್ತ ಮುಂತಾದ ಬೆಳೆಗಳಿಗೆ ಬೆಂಬಲ ಸಿಗದೇ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಸ್ಥಳೀಯ ರೈತರಿಂದ ಅಕ್ಕಿ ಖರೀದಿಸಿ ಪ್ರೋತ್ಸಾಹಿಸಬೇಕು” ಎಂದು ಅವರು ಒತ್ತಾಯಿಸಿದರು.
“ಇದರ ಜೊತೆಗೆ ಅಗತ್ಯವಿದ್ದ ಕಡೆ ಅಕ್ಕಿ ಇಲ್ಲದಿದ್ದಲ್ಲಿ ಅದರ ಬದಲಿಗೆ ರಾಗಿ ಮತ್ತು ಜೋಳವನ್ನು ಖರೀದಿಸಿ ಬೇಡಿಕೆಗನುಗುಣವಾಗಿ ಪಡಿತರ ವಿತರಣೆ ಮಾಡಬೇಕು” ಎಂದು ಬಡಗಲಪುರ ನಾಗೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?: ಅನ್ನ ಭಾಗ್ಯ | ರಾಜ್ಯದ ಜೋಳ, ರಾಗಿ, ಕುಚಲಕ್ಕಿ ಹಾಗೂ ಸಿರಿಧಾನ್ಯ ಖರೀದಿಸಿ ಹಂಚಿ: ರೈತ ಸಂಘಗಳ ಮನವಿ
ದಾಸ್ತಾನಿನ ಕೊರತೆ: ಸಿಎಂ ಸಿದ್ದರಾಮಯ್ಯ
ಮತ್ತೊಂದು ಕಡೆ ಅಕ್ಕಿ ಬದಲಿಗೆ ರಾಗಿ, ಜೋಳ ವಿತರಣೆ ಮಾಡುವ ವಿಚಾರದ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ಒದಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಾಜ್ಯದಲ್ಲಿ ರಾಗಿ, ಜೋಳವನ್ನು 6 ತಿಂಗಳವರೆಗೆ ತಲಾ 2 ಕೆಜಿ ಕೊಡುವಷ್ಟು ಮಾತ್ರ ದಾಸ್ತಾನು ಲಭ್ಯವಿದೆ” ಎಂದು ಹೇಳಿದರು.
“ಹಳೆ ಮೈಸೂರು ಭಾಗದ ಜನರಿಗೆ 2 ಕೆಜಿ ರಾಗಿ ಹಾಗೂ ಹೈದ್ರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಭಾಗದ ಜನರಿಗೆ 2 ಕೆಜಿ ಜೋಳ ನೀಡಬಹುದು. ಇನ್ನುಳಿದ 3 ಕೆಜಿ ಅಕ್ಕಿಯನ್ನು ರಾಜ್ಯದ ಜನರಿಗೆ ನೀಡಬೇಕಾಗುತ್ತದೆ. ಹೀಗಾಗಿ ಅಗತ್ಯಕ್ಕನುಗುಣವಾಗಿ ಅಕ್ಕಿ ಬದಲಿಗೆ ಬೇರೆ ಆಹಾರ ಧಾನ್ಯಗಳ ಖರೀದಿ ಮತ್ತು ಪೂರೈಕೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ” ಎಂದು ಸಿದ್ದರಾಮಯ್ಯ ಹೇಳಿದರು.