- ‘ಹಸಿವು ಮುಕ್ತಗೊಳಿಸಲು ಮೊದಲ ಹೆಜ್ಜೆ ಇರಿಸಿರುವ ಕರ್ನಾಟಕ ಸರ್ಕಾರವನ್ನು ಅಭಿನಂದಿಸಿ’
- ‘ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಕೈಜೋಡಿಸಬೇಕು’
ಕೇಂದ್ರ ಸರ್ಕಾರವು ಸಂವಿಧಾನದ ಗಣತಂತ್ರ ಮತ್ತು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಹಸಿವು ಮುಕ್ತಗೊಳಿಸಲು ಮೊದಲ ಹೆಜ್ಜೆ ಇರಿಸಿರುವ ಕರ್ನಾಟಕ ಸರ್ಕಾರವನ್ನು ಅಭಿನಂದಿಸಿ, ಅಕ್ಕಿಗಾಗಿ ಮಾಡಿರುವ ಮನವಿ ಈಡೇರಿಸುವ ಮೂಲಕ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಜಾರಿಗೊಳಿಸಲು ಕೇಂದ್ರ ಕೈಜೋಡಿಸಬೇಕು ಎಂದು ʼಸಮಾನ ಮನಸ್ಕರ ಒಕ್ಕೂಟ-ಕರ್ನಾಟಕʼ ಆಗ್ರಹಿಸಿದೆ.
ʼಸಮಾನ ಮನಸ್ಕರ ಒಕ್ಕೂಟದ ಅಡಾ. ಕೆ ಎಂ ಮರುಳಸಿದ್ದಪ್ಪ, ಪ್ರೊ. ಎಸ್ ಜಿ ಸಿದ್ದರಾಮಯ್ಯ, ಡಾ. ನಿರಂಜನಾರಾಧ್ಯ ವಿ ಪಿ, ದಿನೇಶ್ ಅಮಿನಮಟ್ಟು, ಎಲ್ ಎನ್ ಮುಕುಂದರಾಜ್, ಡಾ. ಬಂಜಗೆರೆ ಜಯಪ್ರಕಾಶ್, ಡಾ. ವಸುಂಧರಾ ಭೂಪತಿ, ಡಾ. ಲೀಲಾ ಸಂಪಿಗೆ ಸೇರಿದಂತೆ 18 ಜನರು ಸಹಿ ಮಾಡಿ ಸೋಮವಾರ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
“ಆಹಾರ ಅಭದ್ರತೆಯ ಪರಿಣಾಮಗಳ ಬೆಳಕಿನಲ್ಲಿ, ಪ್ರತಿಯೊಬ್ಬರ ಮೇಲೆ, ವಿಶೇಷವಾಗಿ ಬಡವರು ಮತ್ತು ಅತ್ಯಂತ ದುರ್ಬಲರ ಮೇಲೆ ಗಣನೀಯ ಪರಿಣಾಮ ಬೀರುವ ದೊಡ್ಡ ಆಘಾತಗಳ ಅಪಾಯ ತಗ್ಗಿಸಲು ಆಹಾರ ಪೂರೈಕೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ತ್ವರಿತ ಕ್ರಮಗಳ ಅಗತ್ಯವಿದೆ ಎಂದು ವಿಶ್ವ ಸಂಸ್ಥೆ ಹೇಳುತ್ತದೆ” ಎಂದು ಹೇಳಿದ್ದಾರೆ.
“ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ-2, 2030ರ ಹೊತ್ತಿಗೆ ಹಸಿವು ಮುಕ್ತ ಜಗತ್ತನ್ನು ಸೃಷ್ಟಿಸುವ ಗುರಿ ಹೊಂದಿದೆ. 2020ರ ಅಂಕಿ ಅಂಶಗಳ ಅನ್ವಯ, ಪ್ರಪಂಚದಾದ್ಯಂತ 720 ಮಿಲಿಯನ್ ಮತ್ತು 811 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಹಾಗೆಯೇ ಸುಮಾರು 2.4 ಶತಕೋಟಿ ಜನರು ಅಥವಾ ಪ್ರಪಂಚದ ಜನಸಂಖ್ಯೆಯ ಶೇ. 30ಕ್ಕಿಂತ ಹೆಚ್ಚು ಜನರು ತೀವ್ರವಾಗಿ ಆಹಾರ-ಅಭದ್ರತೆಯಿಂದ ಬಳಲುತ್ತಿದ್ದಾರೆ” ಎಂದು ವಿವರಿಸಿದ್ದಾರೆ.
“ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಹಸಿವಿನಿಂದ ಮತ್ತು ಆಹಾರದ ಅಭದ್ರತೆಯಿಂದ ಬಳಲುತ್ತಿರುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ.
ಕೋವಿಡ್- 19 ಬಿಕ್ಕಟ್ಟು ಹಸಿವಿನ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ ಮತ್ತು ಎಲ್ಲ ರೀತಿಯ ಅಪೌಷ್ಟಿಕತೆ ಉಲ್ಬಣಗೊಳಿಸಿದೆ. ಎರಡನೆಯ ಮಹಾಯುದ್ಧದ ನಂತರ ಅತಿದೊಡ್ಡ ಜಾಗತಿಕ ಆಹಾರ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ ವಿತರಣೆಗೆ ಮುಂದಾಗಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಂಡವಾಳಶಾಹಿ ಸ್ನೇಹಿತರ ಲಾಭಕ್ಕೆ ಪಿಎಸ್‌ಯುಗಳಿಂದ 2 ಲಕ್ಷ ಉದ್ಯೋಗ ಕಡಿತ: ರಾಹುಲ್ ಗಾಂಧಿ ಆಕ್ರೋಶ
“ಅನ್ನಭಾಗ್ಯ ಈ ಕಾರ್ಯಕ್ರಮದ ಪರಿಣಾಮಕಾರಿ ಜಾರಿಗೆ ಕೇಂದ್ರದ ನೆರವನ್ನು ಕೋರಿ ರಾಜ್ಯ ಸರ್ಕಾರ ಪತ್ರ ಬರೆದಿತ್ತು. ಇದೇ ಸಂದರ್ಭದಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಎಫ್‌ಸಿಐ ಗೋದಾಮುಗಳಲ್ಲಿ 185.58 ಲಕ್ಷ ಟನ್ ಧಾನ್ಯಗಳ ಹೆಚ್ಚುವರಿ ದಾಸ್ತಾನು ಇದೆ. ಇದರಿಂದ ರಾಜ್ಯಕ್ಕೆ ಅಗತ್ಯವಿರುವ 1.66 ಲಕ್ಷ ಟನ್ ಹೆಚ್ಚುವರಿ ಅಕ್ಕಿ ಕೊಡಲು ಕಷ್ಟವೇನಿಲ್ಲ. ಆದರೂ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಿರಾಕರಿಸುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯನ್ನು ಅವಮಾನಿಸಿದಂತೆ” ಎಂದು ಆರೋಪಿಸಿದ್ದಾರೆ.
“ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಪ್ರಕಾರ ರಾಜ್ಯಗಳಿಗೆ ಅಗತ್ಯವಿರುವ ಹೆಚ್ಚುವರಿ ಧಾನ್ಯವನ್ನು ಹಂಚಿಕೆ ಮಾಡಬೇಕು.
ಬದಲಾಗಿ, ಕೇಂದ್ರ ಸರ್ಕಾರವು ಈ ವಿಷಯವನ್ನು ರಾಜಕೀಯಕರಣಗೊಳಿಸಿ, ಕರ್ನಾಟಕ ಸರ್ಕಾರ ಸಲ್ಲಿಸಿರುವ ಹೆಚ್ಚುವರಿ ಅಕ್ಕಿಯನ್ನು ಬಿಡುಗಡೆ ಮಾಡಲು ನಿರಾಕರಿಸಿರುವ ಕ್ರಮವನ್ನು ‘ಸಮಾನ ಮನಸ್ಕರ ಒಕ್ಕೂಟ’ ಬಲವಾಗಿ ಖಂಡಿಸುತ್ತದೆ” ಎಂದು ಹೇಳಿದ್ದಾರೆ.
“ಈಗಲಾದರೂ ಕೇಂದ್ರ ಸರ್ಕಾರ ಸಂವಿಧಾನದ ಒಕ್ಕೂಟ ತತ್ವಗಳಿಗೆ ಅನುಗುಣವಾಗಿ, ರಾಜ್ಯ ಸರ್ಕಾರಗಳು ಸಲ್ಲಿಸುವ ಮನವಿಗಳಿಗೆ ಪೂರಕವಾಗಿ ಸ್ಪಂದಿಸಬೇಂದು ಒತ್ತಾಯಿಸುತ್ತದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಕರ್ನಾಟಕಕ್ಕೆ ಅಗತ್ಯ ಅಕ್ಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತದೆ” ಎಂದು ಕೋರಿದ್ದಾರೆ.
ಕೇಂದ್ರ ಸರ್ಕಾರ ಸಂವಿಧಾನದ ಒಕ್ಕೂಟ ತತ್ವಗಳಿಗೆ ಅನುಗುಣವಾಗಿ ನಡೆದುಕೊಳ್ಳಲಿ: ಸಮಾನ ಮನಸ್ಕರ ಒಕ್ಕೂಟ ಆಗ್ರಹ