ವಾಲ್ಮೀಕಿ ಅಭಿವೃದ್ಧಿ ನಿಗಮದ ಭಾರಿ ಹಗರಣಕ್ಕೆ ಸಂಬಂಧಿಸಿ ನಿಗಮದ ಅಧ್ಯಕ್ಷ ಮತ್ತು ಶಾಸಕ ಬಸನಗೌಡ ದದ್ದಲ್ ಮತ್ತು ಸಚಿವ ಶರಣಪ್ರಕಾಶ್ ಪಾಟೀಲರ ರಾಜೀನಾಮೆ ಪಡೆಯಬೇಕು. ಈ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳೂ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಒಂದಾದ ನಂತರ ಒಂದು ಸಾಕ್ಷ್ಯಾಧಾರಗಳು ಸಿಗುತ್ತಿವೆ. ಇದು ದಲಿತರ ಹಣ ಲೂಟಿಯ ಬ್ರಹ್ಮಾಂಡ ಭ್ರಷ್ಟಾಚಾರದ ಪ್ರಕರಣ” ಎಂದು ಆರೋಪಿಸಿದರು.
“ಲೆಕ್ಕಾಧಿಕಾರಿ ಪರಶುರಾಮ್ ಅವರು 24ರಂದು ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಸಭೆ ಕುರಿತು ಮಾಹಿತಿ ನೀಡಿದ್ದಾರೆ. ಈಗಾಗಲೇ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಯಾಕೆ ರಾಜೀನಾಮೆ ಕೊಟ್ಟಿಲ್ಲ? ಅವರನ್ನು ಮುಖ್ಯಮಂತ್ರಿಗಳು ರಕ್ಷಿಸುತ್ತಿರುವುದು ಯಾವ ಕಾರಣಕ್ಕೆ” ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ಹಗರಣ ಕುರಿತು ರಾಹುಲ್ ಗಾಂಧಿಯವರ ಉತ್ತರ ಏನು?
“ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದ್ದಾಗ ಶೇ 40 ಕಮಿಷನ್ ಇತ್ತು ಎಂದು ಆರೋಪಿಸಿದ ಸಂಬಂಧ ಬಿಜೆಪಿ ದೂರಿನಡಿ ಕೋರ್ಟ್ ವಿಚಾರಣೆಗೆ ನಿನ್ನೆ ರಾಹುಲ್ ಗಾಂಧಿಯವರು ಹಾಜರಾಗಿದ್ದರು. ಈಗ ಅವರು ಜಾಮೀನು ತೆಗೆದುಕೊಂಡಿದ್ದಾರೆ. ಶೇ 40 ಕಮಿಷನ್ ಅನ್ನು ಅವರು ಸಾಬೀತು ಪಡಿಸಬೇಕಿದೆ. ಕಾಂಗ್ರೆಸ್ಸಿನವರದು ಸತ್ಯ ಹರಿಶ್ಚಂದ್ರರ ಸರಕಾರ ಎನ್ನುತ್ತಿದ್ದರು. ಈ ಸರಕಾರದಲ್ಲಿ 187 ಕೋಟಿ ಭ್ರಷ್ಟಾಚಾರ ಆದ ಬಗ್ಗೆ ರಾಹುಲ್ ಗಾಂಧಿಯವರು ಏನು ಹೇಳುತ್ತಾರೆ” ಎಂದು ರವಿಕುಮಾರ್ ಪ್ರಶ್ನಿಸಿದರು.

ಮಹಾಶಯ ಇಲೆಕ್ಟೋರಲ್ ಬಾಂಡ್ ಮುಖಾಂತರ ಸಾವಿರಾರು ಕೋಟಿ ದೇಣಿಗೆ ನುಂಗಿ ನೀರು ಕುಡಿದವರು ಯಾರುಂತ ಜಗತ್ತಿಗೆ ಗೊತ್ತಾಗಿದೆ ,,,ತಳವರ್ಗದವರ ಮೇಲೆ ದೌರ್ಜನ್ಯಗಳು ನಡೆದಾಗ ನವರಂದ್ರಗಳನ್ನೂ ಮುಚ್ಚಿಕೊಂಡು ಸುಮ್ಮನಿರುವ ಪುಣ್ಯಾತ್ಮ ಆ ವರ್ಗಗಳ ಹೆಸರಲ್ಲಿ ರಾಜಕೀಯ ಲಾಭ ಪಡೆಯಲು ಮುಂದಿರುವನು