ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಬಿಜೆಪಿಗರೇ ಮೊದಲು ವಿಜಯೇಂದ್ರ ಅವರಿಂದ ರಾಜಿನಾಮೆ ಕೊಡಿಸಿ. ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಭಾಗಿಯಾಗಿರುವ ವಿರೋಧ ಪಕ್ಷದ ನಾಯಕರ ರಾಜೀನಾಮೆ ಕೇಳಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, “ಮೇಲ್ಮನೆಯ ವಿರೋಧ ಪಕ್ಷದ ನಾಯಕರು ಸಹ ಸಿಎ ಸೈಟ್ ವಿಚಾರದಲ್ಲಿ ಅಕ್ರಮ ಎಸಗಿದ್ದಾರೆ. ಇವರೆಲ್ಲರ ರಾಜೀನಾಮೆ ಕೇಳಿ, ನಂತರ ನಮ್ಮ ಸಿಎಂ ಬಗ್ಗೆ ಮಾತನಾಡಿ” ಎಂದು ತಿರುಗೇಟು ನೀಡಿದರು.
“ಚುನಾವಣಾ ಆಯೋಗಕ್ಕೆ ವಿಜಯೇಂದ್ರ ಅವರು ಸಲ್ಲಿಸಿರುವ ಅಫಿಡವಿಟ್ ಅಲ್ಲಿ ಅವರ ಮೇಲಿರುವ ಪ್ರಕರಣಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. 16.09. 2022 ರಂದು ಲೋಕಾಯುಕ್ತದಿಂದ ಇವರ ಮೇಲೆ ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ಸೆಕ್ಷನ್ 7 A, 9, 10, 13 ಹಾಗೂ 383, 384, 415, 418, 420 ಕಾಯ್ದೆಗಳಡಿ ದೂರು ದಾಖಲಿಸಲಾಗಿದೆ. ಅಕ್ರಮ ಹಣ ವರ್ಗವಣೆ ಪ್ರಕರಣದಲ್ಲಿ ಇವರಿಗೆ ಸಮನ್ಸ್ ಜಾರಿಯಾಗಿದೆ. ಮೊದಲು ಇವರ ರಾಜೀನಾಮೆ ಕೇಳಿ” ಎಂದರು.
ವಿಜಯೇಂದ್ರ ನಾಯಕತ್ವಕ್ಕೆ ಪ್ರಶ್ನೆ
“ಬಿಜೆಪಿಗರೇ ಮೂರು ಕಡೆ ಸಭೆ ನಡೆಸಿ ವಿಜಯೇಂದ್ರ ಅವರ ನಾಯಕತ್ವವನ್ನು ಪ್ರಶ್ನೆ ಮಾಡಿದ್ದಾರೆ. ಇವರ ನಾಯಕತ್ವವನ್ನು ಯಾರೂ ಸಹ ಒಪ್ಪಿಕೊಂಡಿಲ್ಲ. ಈಶ್ವರಪ್ಪ ಅವರು ನಿಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷದವರೇ ನಿಮಗೆ ಮರ್ಯಾದೆ ಕೊಡುತ್ತಾರೆ. ಬಿಜೆಪಿಯ ನೀತಿ ಪಾಠ ನೋಡಿದರೆ ನರಿಗಳು ನ್ಯಾಯ ಹೇಳಿದಂತೆ ಭಾಸವಾಗುತ್ತದೆ” ಎಂದು ಕುಟುಕಿದ್ದಾರೆ.
“ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯ ಎಂದು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದ್ದು ಇದೇ ಬಿಜೆಪಿಯವರು. 2010ರಲ್ಲಿ ಔಟ್ ಲುಕ್ ಪತ್ರಿಕೆಯ ಮುಖಪುಟದಲ್ಲಿ ಯಡಿಯೂರಪ್ಪ ಅವರ ಫೋಟೊ ಹಾಕಿ ಕರ್ನಾಟಕದ ಮರ್ಯಾದೆ ಹರಾಜು ಹಾಕಲಾಗಿತ್ತು. ಭ್ರಷ್ಟ ಇತಿಹಾಸ ಹೊಂದಿರುವ ಬಿಜೆಪಿಯವರು ನಮಗೆ ನೀತಿ ಪಾಠ ಹೇಳುತ್ತಿದ್ದಾರೆ. ಕರ್ನಾಟಕ ಮರ್ಯಾದೆ ತೆಗೆದವರು ಈಗ ನೈತಿಕತೆಯ ಪಾಠ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಶಯ ಪರಿಹರಿಸಿ, ನ್ಯಾಯಾಂಗದ ಘನತೆ ಎತ್ತಿ ಹಿಡಿದ ನ್ಯಾಯಮೂರ್ತಿ
“ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಬಿಟ್ಟರೆ ನಾನೇ ಶಕ್ತಿಯುತ ಎಂದು ಅಮಿತ್ ಶಾ ಅವರು ಬಿಂಬಿಸಿಕೊಳ್ಳುತ್ತಾರೆ. ಕಳೆದ 10 ವರ್ಷಗಳಲ್ಲಿ ಸುಮಾರು 5,297 ಅಕ್ರಮ ಹಣ ವರ್ಗಾವಣೆ ಕೇಸನ್ನು ಇ.ಡಿ. ಸಂಸ್ಥೆ ದಾಖಲಿಸಿದೆ. ಇದರಲ್ಲಿ 40 ಕೇಸ್ ಗಳು ಮಾತ್ರ ರುಜುವಾತಾಗಿದೆ. ಇದರಲ್ಲಿ ಶೇ 97 ರಷ್ಟು ಪ್ರಕರಣಗಳು ವಿರೋಧ ಪಕ್ಷಗಳ ವಿರುದ್ದ ದಾಖಲಿಸಲಾಗಿದೆ. ಇದು ರಾಜಕೀಯ ಪ್ರೇರಿತವಲ್ಲವೇ” ಎಂದು ಪ್ರಶ್ನಿಸಿದರು,
“ವಿಜಯೇಂದ್ರ ಅವರ ಮೇಲಿನ ಪ್ರಕರಣ ಇ.ಡಿ ಕಣ್ಣಿಗೆ ಬಿದ್ದಿಲ್ಲವೇ? ಅವರೇ ಸ್ವತಃ ಒಪ್ಪಿಕೊಂಡಿರುವಾಗ ಏಕೆ ಕ್ರಮ ತೆಗೆದುಕೊಳ್ಳಲು ತಡವಾಗುತ್ತಿದೆ. ಕಲ್ಕತ್ತಾ ಕಂಪೆನಿಯಿಂದ ಸುಮಾರು 12 ಕೋಟಿಗೂ ಹೆಚ್ಚು ಹಣ ವಿಜಯೇಂದ್ರ ಅವರಿಗೆ ಸಂದಾಯವಾಗಿದೆ. ಎಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ ಇರುವ ಖಾತೆ ಸಂಖ್ಯೆ 50100016772791 ಯಾರದ್ದು” ಎಂದು ವಿಜಯೇಂದ್ರ ಅವರಿಗೆ ಕೇಳಿದರು.
“ವಿಜಯೇಂದ್ರ ಅವರ ಮೇಲೆ ಏಕೆ ಇ.ಡಿ ಏಕೆ ಕ್ರಮ ತಗೆದುಕೊಳ್ಳುತ್ತಿಲ್ಲ. ಏಕೆಂದರೆ ಇದರ ವಿಸ್ತಾರ ಹೆಚ್ಚಿರಬಹುದು. ಯತ್ನಾಳ್ ಅವರು ಹೇಳಿದಂತೆ ಮಾರಿಷಸ್ ಸೇರಿದಂತೆ ಬೇರೆ ಕಡೆಗೂ ವಿಸ್ತಾರವಾಗಿರಬಹುದು. ಅಥವಾ ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿರಬಹುದು. ಯಡಿಯೂರಪ್ಪ ಅವರು ಕಣ್ಣೀರು ಹಾಕುತ್ತಾ ಕೆಳಗೆ ಇಳಿಯಲು ಇದೇ ಕಾರಣ” ಎಂದರು.
“ಕಾಂಗ್ರೆಸ್ ಸರ್ಕಾರ ಬೀಳಿಸಲು 1,200 ಕೋಟಿ ಯಾರು ತಯಾರು ಮಾಡಿಟ್ಟುಕೊಂಡಿದ್ದಾರೆ? ಯತ್ನಾಳ್ ಅವರ ಹೇಳಿಕೆಗಳನ್ನು ಗಮನಿಸಿದರೆ ಇದು ವಿಜಯೇಂದ್ರ ಎಂದು ಅನುಮಾನ ಬರುತ್ತದೆ. ಈ ಹಣ ಎಲ್ಲಿಂದ ಹೇಗೆ ಬಂದಿತು. ಬಿಜೆಪಿವರು ಭ್ರಷ್ಟಾಚಾರದಿಂದ ಮಾಡಿದ ದುಡ್ಡನ್ನು ವಿದೇಶದಿಂದ ತಂದು ಸರ್ಕಾರ ಬೀಳಿಸುವ ಕೃತ್ಯ ನಡೆಸುತ್ತಾರೆ ಎಂದರ್ಥವೇ” ಎಂದು ಪ್ರಶ್ನಿಸಿದರು.
ನೈತಿಕತೆ ಎನ್ನುವ ಹೊಸ ಪದ ಕಲಿತಿದ್ದಾರೆ
“ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎನ್ನುವ ಹೊಸ ಪದ ಕಲಿತಿರುವ ಬಿಜೆಪಿಗರು ತಮ್ಮ ನೈತಿಕತೆಯ ಬಗ್ಗೆ ಹೇಳುತ್ತಲೇ ಇಲ್ಲ. ಬೀದಿಗೆ ಇಳಿಯುತ್ತೇವೆ ಎಂದವರು ಒಮ್ಮೆಯೂ ಬೀದಿಗೆ ಇಳಿದಿಲ್ಲ. ನೈತಿಕತೆ ಬಗ್ಗೆ ಮಾತನಾಡುತ್ತಾರೆ ಎಂದರೆ ಮೊದಲು ವಿಜಯೇಂದ್ರ ಅವರು ರಾಜೀನಾಮೆ ನೀಡಬೇಕಾಗುತ್ತದೆ” ಎಂದರು.
ಮಾಧ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಅವರು ಉಪಸ್ಥಿತರಿದ್ದರು.