ಬಂದದ್ದೆಲ್ಲಾ ಬರಲಿ, ಜನಗಣತಿಯೊಂದು ಆಗಿಯೇ ಬಿಡಲಿ : ಖ್ಯಾತ ಅರ್ಥಶಾಸ್ತ್ರಜ್ಞ ಜೀನ್‌ ಡ್ರಜೆ

Date:

Advertisements

ಜನಕಲ್ಯಾಣ ಕಾರ್ಯಕ್ರಮಗಳ ಜಾರಿಯೂ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಜನಗಣತಿಯ ಅಂಕಿಅಂಶಗಳು ಬೇಕೇಬೇಕಾಗುತ್ತವೆ. ಉದಾಹರಣೆಗೆ ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ಪಡಿತರವನ್ನು ವಿಸ್ತರಿಸಿದರೆ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯ ವ್ಯಾಪ್ತಿಗೆ ಹತ್ತು ಕೋಟಿ ಬಡವರು ಹೊಸದಾಗಿ ಸೇರಲಿದ್ದಾರೆ.


ಈಗಾಗಲೇ
ವಿಳಂಬವಾಗಿರುವ ಜನಗಣತಿಯು (ಸೆನ್ಸಸ್) ತುರ್ತಾಗಿ ಯಾಕೆ ನಡೆಯಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ ಜೀನ್ ಡ್ರಜೆ ಅವರು ಇತ್ತೀಚೆಗೆ ‘ದಿ ಹಿಂದೂ’ ಪತ್ರಿಕೆಗೆ ಬರೆದಿರುವ ಲೇಖನವೊಂದರಲ್ಲಿ ಕಳಕಳಿಯ ಮತ್ತು ಕಳವಳದ ವಾದವನ್ನು ಮಂಡಿಸಿದ್ದಾರೆ.

2021ರಲ್ಲಿ ನಡೆಯಬೇಕಿದ್ದ ದಶವಾರ್ಷಿಕ ಜನಗಣತಿ 2024 ಬಂದರೂ ಕಾಣದಾಗಿದೆ. ಇಷ್ಟು ಸುದೀರ್ಘ ವಿಳಂಬ ಯಾಕೆ? ಯಾಕಿರಬಹುದು ಎಂದರೆ ಭಾರತೀಯ ಜನತಾ ಪಕ್ಷವು 2029ರ ಲೋಕಸಭಾ ಚುನಾವಣೆಗಳಲ್ಲಿ ತನಗೆ ಅನುಕೂಲ ಆಗಲೆಂದು ಕ್ಷೇತ್ರ ಮರುವಿಂಗಡಣೆಯ ಕಸರತ್ತನ್ನು ತುರ್ತಾಗಿ ನಡೆಸಿಬಿಡುವ ಸನ್ನಾಹದಲ್ಲಿದೆ.

Advertisements

ಈ ವಾದ ಅಸಂಗತ ಎನಿಸಿದರೆ ಮತ್ತೊಮ್ಮೆ ನೀವೇ ಆಲೋಚಿಸಿ. ಮುಂದಿನ ಕ್ಷೇತ್ರ ಮರುವಿಂಗಡಣೆಯು 2026ರ ನಂತರದ ಮೊದಲ ಜನಗಣತಿಯನ್ನು ಆಧರಿಸಿ ನಡೆಯಬೇಕು ಎಂದು ಸಂವಿಧಾನಕ್ಕೆ ಮಾಡಲಾಗಿರುವ 84ನೆಯ ತಿದ್ದುಪಡಿ ನಿಚ್ಚಳವಾಗಿ ವಿಧಿಸುತ್ತದೆ. 2024 ಅಥವಾ 2025ರಲ್ಲಿ ಮುಂದಿನ ಜನಗಣತಿ ಜರುಗಿದರೆ ಮರುವಿಂಗಡಣೆಯು 2030ರ ನಂತರದ ತನಕ ಕಾಯಬೇಕಾಗುತ್ತದೆ. ಆದರೆ ಮರುವಿಂಗಡಣೆಯನ್ನು 2029ರ ಲೋಕಸಭಾ ಚುನಾವಣೆಯ ಒಳಗಾಗಿ ಮಾಡಿ ಮುಗಿಸಬಯಸುತ್ತದೆ ಬಿಜೆಪಿ. ಈ ಕಾರಣಕ್ಕಾಗಿ ಜನಗಣತಿಯನ್ನು 2026 ಅಥವಾ 2027ರ ತನಕ ಎಳೆಯ ಬಯಸುತ್ತದೆ ಮೋದಿ ಸರ್ಕಾರ.

ಲೋಕಸಭೆಯಲ್ಲಿ ನಾನಾ ರಾಜ್ಯಗಳ ಪ್ರಾತಿನಿಧ್ಯದ ಪಾಲು ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಇರಬೇಕು ಮತ್ತು ಎಲ್ಲ ಲೋಕಸಭಾ ಕ್ಷೇತ್ರಗಳ ಜನಸಂಖ್ಯೆಯು ಸಾಧ್ಯವಾದಷ್ಟೂ ಒಂದೇ ಪ್ರಮಾಣದಲ್ಲಿರಬೇಕು ಎಂಬುದು ಮರುವಿಂಗಡಣೆಯ ತತ್ವ. ಸಂವಿಧಾನದ 81ನೆಯ ಪರಿಚ್ಛೇದ ಈ ಮಾತನ್ನು ಹೇಳುತ್ತದೆ. ಈ ಹಿಂದೆ ಕ್ಷೇತ್ರ ಮರುವಿಂಗಡಣೆ ನಡೆದದ್ದು 1973ರಲ್ಲಿ. ಈ ಕಸರತ್ತು 1971ರ ಜನಗಣತಿಯನ್ನುಆಧರಿಸಿ ನಡೆದಿತ್ತು. ಮುಂದಿನ ಮರುವಿಂಗಡಣೆಯಲ್ಲಿ 1973ರಿಂದ ತ್ವರಿತಗತಿಯಲ್ಲಿ ಜನಸಂಖ್ಯೆ ಹೆಚ್ಚಾಗಿರುವ ರಾಜ್ಯಗಳಿಗೆ ಹೆಚ್ಚು ಲೋಕಸಭಾ ಕ್ಷೇತ್ರಗಳು ದೊರೆಯಲಿವೆ. ದಕ್ಷಿಣದ ರಾಜ್ಯಗಳ ಪಾಲಿಗೆ ಗಂಡಾಂತರ ಅಡಗಿರುವುದು ಇಲ್ಲಿಯೇ.

1973ರ ನಂತರ ಉತ್ತರಭಾರತದ ರಾಜ್ಯಗಳ ಜನಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿದೆ. ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ನೀತಿಯನ್ನು ಬಿಗಿಯಾಗಿ ಅನುಸರಿಸುತ್ತ ಬಂದಿವೆ. ಈ ಕಾರಣದಿಂದಾಗಿ ಅವುಗಳ ಜನಸಂಖ್ಯೆ ಭಾರೀ ಗತಿಯಲ್ಲಿ ಬೆಳೆದಿಲ್ಲ. ಕ್ಷೇತ್ರ ಮರುವಿಂಗಡಣೆಗೆ ಜನಸಂಖ್ಯೆಯೇ ಮೂಲಾಧಾರ. ಪರಿಣಾಮವಾಗಿ ಲೋಕಸಭೆಯಲ್ಲಿ ಉತ್ತರ ಭಾರತದ ರಾಜ್ಯಗಳ ಸೀಟುಗಳು ಹಿಗ್ಗಲಿವೆ. ದಕ್ಷಿಣದ ರಾಜ್ಯಗಳ ಸೀಟುಗಳು ಹಿಗ್ಗುವುದಿರಲಿ, ಈಗ ಇರುವುದಕ್ಕಿಂತ ಕಡಿಮೆ ಸಂಖ್ಯೆಗೆ ಕುಗ್ಗಲಿವೆ. ಈ ಬೆಳವಣಿಗೆಯನ್ನು ವಿರೋಧಿಸಿ ದಕ್ಷಿಣದ ಕೆಲ ರಾಜ್ಯಗಳು ಬಂಡಾಯ ಏಳಲೂಬಹುದು. ಏನಾದರೂ ಮಾಡಿ ಇಂತಹ ಮರುವಿಂಗಡಣೆಯನ್ನು ಬಿಜೆಪಿ ಜಾರಿಗೆ ತಂದಿದ್ದೇ ಆದರೆ, 2029ರ ಲೋಕಸಭಾ ಚುನಾವಣೆಯಲ್ಲಿ ಅದರ ಗೆಲುವಿನ ಅವಕಾಶಗಳು ಹೆಚ್ಚಲಿವೆ. ಯಾಕೆಂದರೆ ದಕ್ಷಿಣಕ್ಕಿಂತ ಉತ್ತರದಲ್ಲೇ ಬಿಜೆಪಿ ಹೆಚ್ಚು ಬಲಿಷ್ಠವಾಗಿದೆ. ಬಿಜೆಪಿಯ ಈ ಸನ್ನಾಹವನ್ನು ಪ್ರತಿಪಕ್ಷಗಳು ತಡೆಯಬಹುದು. ಅದಕ್ಕಾಗಿ ಜನಗಣತಿಯು 2026ರ ಒಳಗಾಗಿ ಸಕಾಲಕ್ಕೆ ಜರುಗುವಂತೆ ಆಗ್ರಹಿಸಬೇಕು. ನಿಶ್ಚಿತವಾಗಿಯೂ ಇಂತಹ ವಾದವು ವಸ್ತುನಿಷ್ಠವಾದದ್ದು.

ಜನಗಣತಿಯ ಅಂಕಿಅಂಶಗಳು ಹಲವು ಉದ್ದೇಶಗಳಿಗಾಗಿ ಬೇಕೇಬೇಕಾಗುತ್ತದೆ. ಜನಕಲ್ಯಾಣ ಕಾರ್ಯಕ್ರಮಗಳ ಜಾರಿಯೂ ಇಂತಹ ಉದ್ದೇಶಗಳಲ್ಲೊಂದು. ಉದಾಹರಣೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯನ್ನು ವ್ಯಾಪ್ತಿಯನ್ನು ಪರಿಷ್ಕರಿಸಬೇಕಿದೆ. ಹೊಸ ಜನಗಣತಿಯ ಪರಿಷ್ಕೃತ ಅಂಕಿಅಂಶಗಳನ್ನು ಅನ್ವಯಿಸಿದರೆ ದೇಶದ ಇನ್ನೂ 10 ಕೋಟಿ ಬಡ ಜನರು ಸಬ್ಸಿಡಿ ಪಡಿತರದ ಲಾಭ ಪಡೆಯಲಿದ್ದಾರೆ.

modi 49

ಜನಗಣತಿಯ ಮುಂದೂಡಿಕೆಯು ಗಣನೀಯ ಸಂಖ್ಯೆಯ ಜನರನ್ನು ತಮ್ಮ ಅತ್ಯಗತ್ಯ ಹಕ್ಕುಗಳಿಂದ ವಂಚಿತರನ್ನಾಗಿಸುತ್ತದೆ. ಹೀಗಾಗಿ ಜನಗಣತಿಯನ್ನು ಸಕಾಲಕ್ಕೆ ಮಾಡಿ ಮುಗಿಸುವಂತೆ ಮತ್ತು ಕ್ಷೇತ್ರ ಮರುವಿಂಗಡಣೆ ಮುಂದೆ ಹೋಗುವಂತೆ ಪ್ರತಿಪಕ್ಷ ಆಗ್ರಹಿಸಬೇಕಿದೆ. ಈ ವಿಷಯವನ್ನು ಸುಪ್ರೀಮ್ ಕೋರ್ಟಿಗೂ ಎಳೆಯಲು ಬರುತ್ತದೆ. ಜನಗಣತಿಯ ದಿನಾಂಕವನ್ನು ನಿಗದಿ ಮಾಡುವುದು ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ಸಂಗತಿ ಹೌದು. ಆದರೆ, 2021ರ ಜನಗಣತಿಯನ್ನು ಐದು ವರ್ಷಗಳಿಗಿಂತ ಹೆಚ್ಚು ಕಾಲ ಮುಂದೂಡುವುದು ಜನತೆಯ ಮೂಲಭೂತ ಹಕ್ಕುಗಳ ಉಲ್ಲಂಘನೆ ಮತ್ತು ಅಧಿಕಾರದ ದುರುಪಯೋಗ.

ಆದರೆ, ಇಲ್ಲೊಂದು ತೊಡಕಿದೆ ಅಥವಾ ತೊಡಕಿರುವಂತೆ ತೋರುತ್ತದೆ. ಇದು ಮಹಿಳಾ ಮೀಸಲಾತಿಗೆ ಸಂಬಂಧಿಸಿದ್ದು. ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಸಂವಿಧಾನಕ್ಕೆ 106ನೆಯ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೂರನೆಯ ಒಂದರಷ್ಟು ಮೀಸಲಾತಿಯನ್ನು ಕಲ್ಪಿಸುತ್ತದೆ. 2023ರ ನಂತರದ ಮೊದಲ ಜನಗಣತಿಯ ಅಂಕಿಅಂಶಗಳ ಪ್ರಕಟಣೆಯ ನಂತರ ಮಹಿಳಾ ಮೀಸಲಿನ ಉದ್ದೇಶಕ್ಕಾಗಿಯೇ ಕೈಗೊಳ್ಳಲಾಗುವ ಮರುವಿಂಗಡಣೆಯ ಕಸರತ್ತಿನ ನಂತರವೇ ಮಹಿಳಾ ಮೀಸಲು ಜಾರಿಗೆ ಬರಲಿದೆ. 106ನೆಯ ತಿದ್ದುಪಡಿ ಕಾಯಿದೆಯ ಐದನೆಯ ಸೆಕ್ಷನ್ ನಲ್ಲಿ ಈ ಅಂಶ ಸೂಚಿತವಾಗಿದೆ.
84ನೆಯ ಸಂವಿಧಾನ ತಿದ್ದುಪಡಿಯ ಪ್ರಕಾರ ಕೈಗೊಳ್ಳಲಾಗುವ ವಿಸ್ತೃತ ಮರುವಿಂಗಡಣೆಯ ನಂತರವೇ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ. ಈ ವ್ಯಾಖ್ಯಾನದ ಪ್ರಕಾರ ತ್ವರಿತ ಜನಗಣತಿಯು ಕ್ಷೇತ್ರ ಮರುವಿಂಗಡಣೆಯನ್ನು ಮುಂದೂಡುತ್ತದೆ. ಪರಿಣಾಮವಾಗಿ ಮಹಿಳಾ ಮೀಸಲಾತಿಯೂ ಮುಂದಕ್ಕೆ ಹೋಗುತ್ತದೆ.

ಆದರೆ ಸೆಕ್ಷನ್ 5ರಲ್ಲಿನ ‘ಈ ಉದ್ದೇಶಕ್ಕಾಗಿ’ ಎಂಬ ಪದಗಳನ್ನು ಗಮನಿಸಿ. ಈ ಶಬ್ದಾವಳಿಯ ಪ್ರಕಾರ ಮಹಿಳಾ ಮೀಸಲಾತಿಯು ತನ್ನದೇ ಪ್ರತ್ಯೇಕ ಮರುವಿಂಗಡಣೆಯ ಪ್ರಕಾರ ಮುಂದುವರೆಯಬಹುದು. ‘ಮಹಿಳೆಯರಿಗಾಗಿ ಮೀಸಲು’ ಎಂಬುದಾಗಿ ನಿರ್ದಿಷ್ಟ ಸಂಖ್ಯೆಯ ಕ್ಷೇತ್ರಗಳನ್ನು ಗೊತ್ತು ಮಾಡಿ ಹೆಸರಿಸಿದರೆ ಅಷ್ಟೇ ಸಾಕು. ಹೀಗಾಗಿ ತ್ವರಿತ ಜನಗಣತಿಗಾಗಿ ಒತ್ತಡ ಹೇರುವುದಕ್ಕೆ ಪ್ರತಿಪಕ್ಷಗಳಿಗೆ ಯಾವುದೇ ಅಡ್ಡಿ ಆತಂಕಗಳು ಇಲ್ಲ.

women reservation

ಕ್ಷೇತ್ರ ಮರುವಿಂಗಡಣೆಯಿಂದ ಬಿಜೆಪಿಗೆ ಎಷ್ಟರಮಟ್ಟಿಗೆ ಲಾಭವಾಗುವ ಸಂಭವವಿದೆ? 2024ರ ಜೂನ್ ನಾಲ್ಕರಂದು ಇತ್ತೀಚಿನ ಲೋಕಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾದವು. ಈ ಪ್ರಕಟಣೆಗೆ ಮುನ್ನ ಕಂಡು ಬಂದಿದ್ದ ಚಿತ್ರದ ಪ್ರಕಾರ ಕ್ಷೇತ್ರ ಮರುವಿಂಗಡಣೆಯಿಂದ ಬಿಜೆಪಿಗೆ ಉತ್ತರಭಾರತದಲ್ಲಿ ಭಾರೀ ಲಾಭವಾಗುವ ಸಂಭವ ಇತ್ತು. ಯಾಕೆಂದರೆ ಉತ್ತರದಲ್ಲಿ ಅದರ ಬೆಂಬಲನೆಲೆ ವ್ಯಾಪಕವೂ ಬಲಿಷ್ಠವೂ ಆಗಿತ್ತು. ದಕ್ಷಿಣದಲ್ಲಿ ಕೊಂಚವೇ ಲಾಭ ಗಳಿಸುವ ಸಾಧ್ಯತೆಯಿತ್ತು. ಆದರೆ ಜೂನ್ 4ರ ಫಲಿತಾಂಶಗಳ ನಂತರ ಚಿತ್ರ ಬದಲಾಗಿದೆ. ಉತ್ತರದಲ್ಲಿ ಬಿಜೆಪಿಯ ಜನಬೆಂಬಲ ಕ್ಷೀಣಿಸಿದೆ. ದಕ್ಷಿಣದಲ್ಲಿ ಕೊಂಚ ಮಟ್ಟಿಗೆ ಚೇತರಿಕೆ ಕಂಡು ಬಂದಿದೆ.

ಅದೇನೇ ಇರಲಿ, ಬಿಜೆಪಿ ಕ್ಷೇತ್ರ ಮರುವಿಂಗಡಣೆಯಿಂದಾಗಿ ಬಿಜೆಪಿ ಗಳಿಸಿಕೊಳ್ಳುವುದು ಅಥವಾ ಕಳೆದುಕೊಳ್ಳುವುದು ಬಹಳವಿದೆ, ರಾಜ್ಯಗಳು ಮತ್ತು ಪಕ್ಷಗಳ ಸೀಟುಗಳ ಪಾಲನ್ನು ಸ್ಥಿರವಾಗಿಟ್ಟುಕೊಂಡು ಲೋಕಸಭೆಯ ಒಟ್ಟು 543 ಸೀಟುಗಳನ್ನು ಎಲ್ಲ ರಾಜ್ಯಗಳಿಗೆ ಅವುಗಳ ಈಗಿನ ಜನಸಂಖ್ಯೆಯನ್ನು ಆಧರಿಸಿ ಮರುಹಂಚಿಕೆ ಮಾಡಿದ್ದೇ ಆದರೆ ಎನ್.ಡಿ.ಎ ಮತ್ತು ಇಂಡಿಯಾ ಒಕ್ಕೂಟಗಳ ಇಂದಿನ ಒಟ್ಟು ಸೀಟುಗಳು ಎಷ್ಟಿರಬಹುದು?

ಈ ಪ್ರಶ್ನೆಗೆ ಸಿಗುವ ಉತ್ತರ ಬೆರಗು ಬಡಿಸುವಂತಹುದು. ಎನ್.ಡಿ.ಎ.ಗೆ ಈಗಿನ 294ರ ಬದಲಾಗಿ 309 ಸೀಟುಗಳು ದೊರೆಯಲಿವೆ. ಅಂದರೆ ಹೆಚ್ಚುವರಿಯಾಗಿ 15 ಸೀಟುಗಳು! ಎನ್.ಡಿ.ಎ. ಸೀಟುಗಳ ಪಾಲು ಶೇ.3 ಪಾಯಿಂಟುಗಳಷ್ಟು ಏರಲಿದೆ. (ಶೇ.54ರಿಂದ ಶೇ.57). ಜೊತೆ ಜೊತೆಗೆ ಇಂಡಿಯಾದ ಪಾಲು ಶೇ.2 ಪಾಯಿಂಟುಗಳಷ್ಟು ಕುಸಿಯಲಿದೆ.

ಆದರೆ ಇದೇ ನಾಣ್ಯದ ಇನ್ನೊಂದು ಮುಖವನ್ನು ನೋಡುವುದೇ ಆದಲ್ಲಿ ಬಿಜೆಪಿ 2029ರ ಚುನಾವಣೆಯ ಸೇತುವೆಯನ್ನು ದಾಟಲು ಅಥವಾ ದಾಟದೆ ಇರಲು ತೀರ್ಮಾನಿಸಬಹುದು. ಯಾಕೆಂದರೆ ಕ್ಷೇತ್ರ ಮರುವಿಂಗಡಣೆಯ ಕಸರತ್ತು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭಾರೀ ದೊಡ್ಡ ತಿರುಗುಬಾಣವೂ ಆಗಬಹುದು.

ಮಹಿಳಾ ಮೀಸಲಾತಿ ಜಾರಿಗೆ ಬರಬೇಕಿದ್ದರೆ ಜನಗಣತಿ ಕಡ್ಡಾಯವಾಗಿ ನಡೆಯಲೇಬೇಕು. ಜನಗಣತಿಯ ಮುಂದೂಡಿಕೆಯಯನ್ನು ಸಮರ್ಥಿಸಿಕೊಳ್ಳುವುದು ಬಹಳ ಕಷ್ಟ. ಜನಗಣತಿಯ ಮುಂದೂಡಿಕೆಯು ಮಹಿಳಾ ಮೀಸಲಾತಿಯ ಜಾರಿಗೆ ಅಡ್ಡಿ ಉಂಟು ಮಾಡುವುದೇ ಅಲ್ಲದೆ ಕೋಟ್ಯಂತರ ಜನರನ್ನು ಅವರಿಗೆ ಸಿಗಲೇಬೇಕಾದ ಅತ್ಯಗತ್ಯ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಲಿದೆ. ಬಡಜನರನ್ನು ಯಾವುದೇ ಪಕ್ಷದ ರಾಜಕೀಯ ರಣತಂತ್ರಗಳ ಸೆರೆಯಾಳುಗಳನ್ನಾಗಿ ಮಾಡುವುದು ಸಲ್ಲದು.

ಕೃಪೆ: ದಿ ಹಿಂದೂ ಪತ್ರಿಕೆ

(ಲೇಖಕರು ರಾಂಚಿ ವಿಶ್ವವಿದ್ಯಾಲಯದ ಆರ್ಥಶಾಸ್ತ್ರ ವಿಭಾಗದ ಸಂದರ್ಶಕ ಪ್ರಾಧ್ಯಾಪಕರು)

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X