ದುಡಿಯುವ ಜನರ 72 ಗಂಟೆಗಳ ಮಹಾ ಧರಣಿ, ರಾಜಭವನ್ ಚಲೋದಲ್ಲಿ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಪಾಲ್ಗೊಂಡು ಐತಿಹಾಸಿಕ ರೈತ ಹೋರಾಟದ ಕ್ಷಣಗಳನ್ನು ಮೆಲುಕು ಹಾಕಿದರು
“ಈ ಕೊರೆವ ಚಳಿಯಲ್ಲಿ ಏಕೆ ಕುಳಿತ್ತಿದ್ದೀರಿ, ಈ ವಯಸ್ಸಲ್ಲಿ ಏಕೆ ಬಂದಿದ್ದೀರಿ ಎಂದು ಕೇಳಿದರೆ, ಮನೆಯಲ್ಲಾದರೂ ಸಾಯೋದೆ, ಇಲ್ಲಿದ್ದರೂ ಸಾಯೋದೆ. ಇಲ್ಲಿ ಸತ್ತರೇ ಒಂದು ಕಾರಣಕ್ಕೆ ಸತ್ತಂತೆ ಆಗುತ್ತದೆ ಎಂದು ಇಳಿ ವಯಸ್ಸಿನವರು ಹೇಳುತ್ತಿದ್ದರು” ಎಂದು ದೆಹಲಿ ರೈತ ಹೋರಾಟದ ಕುರಿತು ವಿವರಿಸುತ್ತಾ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಮೆಲುಕು ಹಾಕಿದರು.
ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆಯಂತೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಆರಂಭವಾಗಿರುವ ದುಡಿಯುವ ಜನರ 72 ಗಂಟೆಗಳ ಮಹಾ ಧರಣಿ, ರಾಜಭವನ್ ಚಲೋದ ಸಂವಿಧಾನ ಸಂಕಲ್ಪದಲ್ಲಿ ಹೆಚ್.ಆರ್.ನವೀನ್‌ಕುಮಾರ್ ಅವರ ’ಕದನ ಕಣ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

“ಸರಿಯಾಗಿ ಮೂರು ವರ್ಷಗಳ ಹಿಂದೆ- ಇದೇ ಸಮಯ, ಇದೇ ತಿಂಗಳು, ರಾಜಧಾನಿ ದೆಹಲಿಗೆ ಉತ್ತರ ಪ್ರದೇಶ, ಪಂಜಾಬ್, ಹರ್ಯಾಣದಿಂದ ರೈತರು ಬಂದರು. ದೆಹಲಿಯ ಹೊರವಲಯದಲ್ಲಿ ಅವರ ಟ್ರಾಕ್ಟರ್‌ಗಳು ನಿಂತಿದ್ದವು. ಎಲ್ಲಿಗೆ ಹೋಗಬೇಕೆಂದು ಸರ್ಕಾರವನ್ನು ಕೇಳಿದರು. ಸರ್ಕಾರ ಸೂಚಿಸಿದ ಜಾಗದಲ್ಲಿ ಲಕ್ಷಾಂತರ ಜನರು ಬೀಡು ಬಿಡಲು ಸ್ಥಳವೇ ಇರಲಿಲ್ಲ. ಸುಮಾರು ಆರು ಲಕ್ಷ ರೈತರಿದ್ದರು. ದೆಹಲಿ ನಗರದ ಹೊರಭಾಗದಲ್ಲಿ ಐದು ಕಡೆ ಬೀಡುಬಿಟ್ಟರು” ಎಂದು ಆ ದಿನಗಳನ್ನು ನೆನೆದರು.
ಅಲ್ಲಿ ಚಿಕ್ಕಮಕ್ಕಳಿಂದ ಹಿಡಿದು ತೊಂಬತ್ತು ವರ್ಷದ ವೃದ್ಧರವರೆಗೂ ಭಾಗಿಯಾಗಿದ್ದರು. ಯಾಕೆ ನಾವು ಅಲ್ಲಿ ಕುಳಿತ್ತಿದ್ದೇವೆ ಎಂಬುದು ಅವರಿಗೆ ಗೊತ್ತಿತ್ತು. ನೂರಾರೂ ಉದ್ದೇಶಗಳು ಇರಲಿಲ್ಲ, ಏಕೋದ್ದೇಶ ಅವರಿಗಿತ್ತು. ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕೆಂಬುದು ಅವರು ಪಟ್ಟು ಹಿಡಿದರು. ಕೆಲವು ಮೇನ್‌ಸ್ಟ್ರೀಮ್ ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸಿ ಬೋರ್ಡ್ ಹಾಕಿದ್ದರು. ಪರ್ಯಾಯ ಮಾಧ್ಯಮಗಳನ್ನು ಗಟ್ಟಿಯಾಗಿ ಕಟ್ಟಿದರು. ಟ್ರಾಕ್ಟರ್ ಟು ಟ್ವಿಟರ್ ಖಾತೆ ಆರಂಭಿಸಿದರು. 21 ವರ್ಷದ ಹೆಣ್ಣುಮಗಳು ಇದನ್ನು ಹ್ಯಾಂಡಲ್ ಮಾಡುತ್ತಿದ್ದಳು. ಟೆಕ್ನಾಲಜಿಯನ್ನು ಹೇಗೆ ಬಳಕೆ ಮಾಡಬಹುದು ಎಂಬುದನ್ನು ರೈತ ಚಳವಳಿ ತೋರಿಸಿಕೊಟ್ಟಿತು ಎಂದು ತಿಳಿಸಿದರು.
780 ರೈತರು ಸತ್ತರು. ಕೊರೊನಾಕ್ಕೆ ಬಲಿಯಾದವರಲ್ಲ. ಕೊರೆವ ಚಳಿಯಲ್ಲಿ ಹೋರಾಡುತ್ತಾ ಗೋಣಿಚೀಲದ ಮೇಲೆ ಮಲಗಿ ಪ್ರಾಣಬಿಟ್ಟವರನ್ನು ನೋಡಿದ್ದೇನೆ. ಈ ಹೋರಾಟದಲ್ಲಿ ಭಾಗಿರುವವರು ಒಂದು ವರ್ಗದ ಜನರೆಂದು ಕೆಲವರು ಫೇಸ್‌ಬುಕ್‌ನಲ್ಲಿ ಬರೆದರು. ಅಂಥವರು ನವೀನ್ ಅವರ ರೀತಿಯಲ್ಲಿ ದೆಹಲಿಗೆ ಬಂದು ನೋಡಿದರೆ ಜಾತಿ ಮತ ಮೀರಿದ ಹೋರಾಟ ಇದೆಂದು ಅರಿಯುತ್ತಿದ್ದರು. ನವೀನ್ ಅವರು ರೈತರ ನಡುವೆ ಓಡಾಡಿದರು. ತಮ್ಮೆಲ್ಲ ಅನುಭವಗಳನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲೂ ಅಂತಹ ಹೋರಾಟ ನಡೆದಿವೆ. ಕಾಗೋಡು ಸತ್ಯಗ್ರಹ ಇದಕ್ಕೊಂದು ಉದಾಹರಣೆ ಎಂದರು.
ಸ್ವಾಮಿನಾಥನ್ ವರದಿಯು ರೈತರ ಸಮಸ್ಯೆಗಳನ್ನು ಪಟ್ಟಿ ಮಾಡಿದೆ. ಆದರೆ ಆ ವರದಿ ಏಕೆ ಬೇಡ ಎಂದು ಮನಮೋಹನ್ ಸಿಂಗ್ ಅವರಾಗಲಿ ಮೋದಿಯವರೂ ಹೇಳಲಿಲ್ಲ. ನಾವು ಕೂಡ ಕೇಳಲಿಲ್ಲ. ಕೊರೊನಾ ಕಾಲದಲ್ಲಿ ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ತಂದಿತು. ಲೋಕಸಭೆಯಲ್ಲಿ ಒಂದಿಷ್ಟು ಚರ್ಚೆಯಾಯಿತು. ಆದರೆ ರಾಜ್ಯಸಭೆಯಲ್ಲಿ ಚರ್ಚೆಯಾಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿಐಟಿಯು ಮುಖಂಡ ಕೆ.ಎನ್.ಉಮೇಶ್ ಮಾತನಾಡಿ, “ಇಡಿ ದೇಶದಾದ್ಯಂತ ನಿನ್ನೆ ಶಿಮ್ಲಾದಲ್ಲಿ ಹೋರಾಟ ಆರಂಭವಾಗಿದೆ. ಎಲ್ಲ ರಾಜ್ಯಗಳ ರಾಜಧಾನಿಗಳಲ್ಲೂ ಈ ಹೋರಾಟ ನಡೆಯುತ್ತಿದೆ. ಕರ್ನಾಟಕ ಹೋರಾಟದಲ್ಲಿ ದಲಿತರು, ಕಾರ್ಮಿಕರು, ವಿದ್ಯಾರ್ಥಿಗಳು, ರೈತರು ಭಾಗಿಯಾಗಿದ್ದಾರೆ. ಇದೊಂದು ಮಾದರಿ ಹೋರಾಟ” ಎಂದು ಬಣ್ಣಿಸಿದರು.

ಬ್ರಿಟಿಷರಾದರೂ ಪರವಾಗಿರಲಿಲ್ಲ. ಕೋರ್ಟ್ ಆಫ್ ಜಸ್ಟೀಸ್ ಎನ್ನುತ್ತಿದ್ದರು. ಆದರೆ ಅಮಿತ್ ಷಾ ಅವರು ಹೊಸ ಮಸೂದೆಯಲ್ಲಿ ಕೋರ್ಟ್ ಎಂದಷ್ಟೇ ಹೇಳುತ್ತಿದ್ದಾರೆ. ಭಾರತೀಕರಣ ಎನ್ನುತ್ತಾರೆ. ಮೊಟ್ಟಮೊದಲ ಬಾರಿಗೆ ಮಾಬ್ ಲಿಂಚಿಂಗ್ ಅನ್ನು ಅಪರಾಧವಾಗಿ ಗುರುತಿಸಿರುವುವಾಗಿ ಹೇಳುತ್ತಿದ್ದಾರೆ. ಕೊಲೆ ಅಪರಾಧಕ್ಕೆ ಜೀವಾವಧಿ, ಗಲ್ಲು ಶಿಕ್ಷೆ ನೀಡಬಹುದು. ಆದರೆ ಜಾತಿ, ಧರ್ಮ, ಭಾಷೆ ಕಾರಣಕ್ಕೆ ಒಬ್ಬರಗಿಂತ ಐದು ಜನ ಸೇರಿ ಕೊಲೆ ಮಾಡಿದರೆ ಏಳು ವರ್ಷ ಶಿಕ್ಷೆ ವಿಧಿಸಲು ಹೊರಟಿದ್ದಾರೆ ಎಂದು ತಿಳಿಸಿದರು.
ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಯಾರು ಅಮೃತ ಕುಡಿಯುತ್ತಿದ್ದಾರೆ, ಯಾರು ವಿಷ ಕುಡಿಯುತ್ತಿದ್ದಾರೆ? ’ತಳಮಟ್ಟದ ಕನಿಷ್ಠ ವೇತನ’ ಎಂಬುದನ್ನು ಮೋದಿ ಅನ್ವೇಷಣೆ ಮಾಡಿದ್ದಾರೆ. ದಿನಕ್ಕೆ ಕೇವಲ 174 ರೂಪಾಯಿ ಕೊಡಲು ಹೊರಟಿದ್ದಾರೆ. ಕರಾಳ ಕೃಷಿ ಕಾಯ್ದೆಯ ಅವಧಿಯಲ್ಲೇ ಅಪಾಯಕಾರಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಮಾಡಿದರು. ಆದರೆ ಅವುಗಳನ್ನು ಜಾರಿಗೊಳಿಸಲು ಬಿಡಲಿಲ್ಲ. ಹೋರಾಟಗಾರರನ್ನು ಯುಎಪಿಎ ಅಡಿ ತರಲು ಹೊರಟಿದ್ದಾರೆ. ಜನಪರ ನ್ಯೂಸ್ ಕ್ಲಿಕ್ ಸಂಸ್ಥೆಯ ಮೇಲೆ ದಾಳಿ ಮಾಡಿ, ರೈತ ಹೋರಾಟಕ್ಕೆ ಅಷ್ಟೊಂದು ಪ್ರಚಾರ ಕೊಟ್ಟಿದ್ದು ಏತಕ್ಕೆ? ಎಷ್ಟು ಭತ್ಯೆ ಪಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮನ್ನು ವಿಭಜನೆ ಮಾಡಲು ರಾಮನನ್ನು ತರುತ್ತಾರೆ. ಮೊದಲೆಲ್ಲ ನಮಸ್ಕಾರ ಎಂಬುದಕ್ಕೆ ರಾಮ್ ರಾಮ್ ಎನ್ನುತ್ತಿದ್ದೆವು. ಆದರೆ ಬಾಬ್ರಿ ಮಸೀದಿ ಕೆಡವಿದ ಮೇಲೆ ಜೈ ಶ್ರೀರಾಮ್ ಘೋಷಣೆ ಹುಟ್ಟು ಹಾಕಿದರು. ಕಾರ್ಪೊರೇಟ್ ಕೋಮುವಾದಿ ದುಷ್ಟಕೂಟ ಅಧಿಕಾರ ನಡೆಸುತ್ತಿದೆ. ನಿಮಗೆ ಎಷ್ಟೇ ಬಹುಮತವಿದ್ದರೂ ಆಟ ನಡೆಯಲ್ಲ ಎಂದು ತೋರಿಸಿದ್ದು ರೈತ ಹೋರಾಟ ಎಂದು ಎಚ್ಚರಿಸಿದರು.
ಇದನ್ನೂ ಓದಿರಿ: ಜಾತಿ ಸಮೀಕ್ಷೆ ವಿರೋಧಿಸುತ್ತಿರುವವರು ಲೂಟಿಕೋರರು, ದರೋಡೆಕೋರರು: ಪ್ರೊ.ರವಿವರ್ಮಕುಮಾರ್
ದಲಿತ ಸಂಘರ್ಷ ಸಮಿತಿಯ ಮುಖಂಡರಾದ ವಿ.ನಾಗರಾಜ್ ಮಾತನಾಡಿ, “ದಲಿತ ಸಂಘಟನೆಗಳು ಅನೇಕ ಹೋರಾಟಗಳನ್ನು ಮಾಡಿರುವುದು ನಿಮಗೆ ಗೊತ್ತಿದೆ. ಆದರೂ ಪ್ರಜಾಪ್ರಭುತ್ವದಲ್ಲಿ ಮಲ ಹೊರುವುದು ನಿಂತಿಲ್ಲ. ಭೂಮಿಗಾಗಿ, ವಸತಿಗಾಗಿ ಮಲ ಸುರಿದುಕೊಂಡು ಹೋರಾಡುವಂತಾಗಿದೆ” ಎಂದು ವಿಷಾದಿಸಿದರು.

ಆರ್ಥಿಕ ತಜ್ಞರಾದ ಪ್ರಕಾಶ ಕಮ್ಮರಡಿ ಮಾತನಾಡಿ, “ಸಂವಿಧಾನ ಸಾಕಾರಗೊಂಡಿದೆಯೇ ಎಂಬ ಪ್ರಶ್ನೆ ನಮ್ಮ ಮುಂದಿದೆ. ಹೋರಾಟ ನಿರತ ರೈತರ ಮೇಲೆ ವಾಹನ ಚಲಾಯಿಸಿ ಲಖಿಂಪುರ್ ಕೇರಿಯಲ್ಲಿ ಕೊಲ್ಲಲಾಯಿತು. ಆದರೆ ಲಖಿಂಪುರ್ ಭಾಗದಲ್ಲಿ ಬಿಜೆಪಿ ಗೆದ್ದಿತು” ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಸಂವಿಧಾನದ ಮಹತ್ವದ ಕುರಿತು ಮಾತನಾಡಿದರು. ಹೋರಾಟಗಾರ್ತಿ ಡಾ.ವಿಜಯಮ್ಮ ಸಂವಿಧಾನ ಪೀಠಿಕೆ ಬೋಧನೆ ಮಾಡಿದರು. ರೈತ ಸಂಘಟನೆಗಳ ಪರವಾಗಿ ಅಮೀನ್ ಪಾಷ ದಿದ್ಗಿ ಹಾಜರಿದ್ದರು. ಹೋರಾಟಗಾರರಾದ ಚಾಮರಸ ಮಾಲಿ ಪಾಟೀಲ್, ಶ್ರೀನಿವಾಸ್, ಎಚ್.ಆರ್.ನವೀನ್‌ಕುಮಾರ್, ದೀಪಕ್, ಅಬ್ಬಣಿ ಶಿವಪ್ಪ, ಎಚ್.ಎನ್.ಗೋಪಾಲಗೌಡ, ಡಾ.ಸಿದ್ಧನಗೌಡ ಪಾಟೀಲ್, ನಾಗನಾಥ್, ಪುಟ್ಟಮಾದು, ಕೆ.ವಿ.ಭಟ್, ನಾಗಮ್ಮಾಳ್, ಎಂ.ಝಡ್ ಅಲಿ, ಗುರುಪ್ರಸಾದ್ ಕೆರೆಗೋಡು, ಮೈತ್ರಿ, ಕೆ.ಎಸ್.ವಿಮಲಾ, ಕಾಳಪ್ಪ, ಕರಿಯಪ್ಪ ಗುಡಿಮನಿ, ಇಕೆಎನ್ ರಾಜನ್, ಡಿ.ಎಚ್.ಪೂಜಾರ್, ಧನಶೇಖರ್, ಸಿದ್ಧಗೌಡ ಮೋದಗಿ, ಸುಷ್ಮಾ ವರ್ಮ, ಎಸ್.ಆರ್.ಹಿರೇಮಠ, ಮುನಿಯಪ್ಪ ಹೋರಾಟದ ಅಧ್ಯಕ್ಷೀಯ ಮಂಡಳಿಯಲ್ಲಿದ್ದಾರೆ.