ಶಿವಾನಂದ ಪಾಟೀಲ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಬಸವನಬಾಗೇವಾಡಿ ಕ್ಷೇತ್ರದ ಜನ ನಿಜಕ್ಕೂ ನಾಚಿಕೆ ಪಟ್ಟುಕೊಳ್ಳುವಂತಾಗಿದೆ, ತಾವು ಎಂಥ ಮತಿಗೇಡಿಯನ್ನು ಶಾಸಕರನ್ನಾಗಿ ಆಯ್ಕೆ ಮಾಡಿದೆವು ಎಂದು. ಸಿದ್ದರಾಮಯ್ಯನವರು ತಕ್ಷಣವೇ ಶಿವಾನಂದ ಪಾಟೀಲರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ರೈತರಷ್ಟೇ ಅಲ್ಲ, ಯಾವ ದುಡಿಯುವ ವರ್ಗದ ಬಗ್ಗೆಯೂ ಯಾವ ಶಾಸಕ, ಸಚಿವನೂ ಬಾಯಿಗೆ ಬಂದಂತೆ ಮಾತನಾಡಬಾರದು.
ಸಚಿವ ಶಿವಾನಂದ ಪಾಟೀಲ ಮತ್ತೆ ಬಾಲ ಬಿಚ್ಚಿದ್ದಾರೆ. ರೈತರ ಬಗ್ಗೆ ಸಂಸ್ಕಾರವಿಲ್ಲದವರಂತೆ ಮಾತಾಡಿ ರೈತರಿಂದ ಛೀ ಥೂ ಅನ್ನಿಸಿಕೊಳ್ಳುತ್ತಿದ್ದಾರೆ.
‘ಕೃಷ್ಣಾ ನದಿ ನೀರು ಫ್ರೀ, ಕರೆಂಟ್ ಫ್ರೀ, ಬೀಜ ಫ್ರೀ, ಗೊಬ್ಬರ ಫ್ರೀ… ಆದರೂ ರೈತರು ಪದೇ ಪದೆ ಬರಗಾಲ ಬರಲಿ ಎಂದು ಬಯಸುತ್ತಾರೆ, ಸಾಲ ಮನ್ನಾ ಆಗಲಿ ಅಂತ…’ ಎಂದು ಪಾಟೀಲ ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ. ರೈತರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಪಾಟೀಲಗೆ ಒಂದು ರೋಗವೇ ಆಗಿಬಿಟ್ಟಂತಿದೆ ಎನ್ನುವ ಆಕ್ರೋಶದ ಮಾತುಗಳು ಕೇಳಿಬಂದಿವೆ.
ಈ ಹಿಂದೆಯೂ ಶಿವಾನಂದ ಪಾಟೀಲ ರೈತರ ಬಗ್ಗೆ ಇದೇ ರೀತಿಯ ಮಾತುಗಳನ್ನು ಆಡಿದ್ದರು. ಪರಿಹಾರದ ಹಣಕ್ಕಾಗಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದರು. ‘ನಾವು ನಿಮಗೆ ಅಷ್ಟು ಪರಿಹಾರ ಕೊಡುತ್ತೇವೆ, ನೀವು ಆತ್ಮಹತ್ಯೆ ಮಾಡಿಕೊಂಡು ಸಾಯಿರಿ’ ಎಂದು ಪಾಟೀಲಗೆ ರೈತ ಸಂಘದವರು ಸವಾಲು ಹಾಕಿದ್ದರು. ಈ ಬಾರಿಯೂ ಪಾಟೀಲ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಅನ್ನ ತಿನ್ನುವ ನಾಲಿಗೆಯಾಗಿದ್ದರೆ ರೈತ ವಿರೋಧಿ ಹೇಳಿಕೆ ಕೊಡುತ್ತಿರಲಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಇದೇ ಚಾಳಿ ಮುಂದುವರಿಸಿದರೆ, ಅವರ ಮುಖಕ್ಕೆ ಮಸಿ ಬಳಿಯುತ್ತೇವೆ ಎಂದೂ ಎಚ್ಚರಿಕೆ ನೀಡಿದ್ದಾರೆ.
ಆಕಸ್ಮಿಕವಾಗಿ ಏನೋ ಮಾತನಾಡಲು ಹೋಗಿ ಎಡವಟ್ಟಿನಿಂದ ಪಾಟೀಲ ಈ ರೀತಿ ಮಾತನಾಡಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಒಮ್ಮೆ ಈ ರೀತಿ ಆಗಿದ್ದರೆ ಅದು ಆಕಸ್ಮಿಕ ಎನ್ನಬಹುದಿತ್ತು. ಆದರೆ, ಪದೇ ಪದೆ ಪಾಟೀಲ ಈ ರೀತಿ ಮಾತನಾಡುತ್ತಿರುವುದು ನೋಡಿದರೆ, ರೈತರ ಬಗ್ಗೆ ಶಿವಾನಂದ ಪಾಟೀಲನಿಗೆ ಆಳದಲ್ಲಿ ತಿರಸ್ಕಾರವಿದ್ದಂತಿದೆ. ಅದು ಬೇರೆ ಬೇರೆ ಸಂದರ್ಭಗಳಲ್ಲಿ ಈ ರೀತಿಯ ಮಾತುಗಳ ಮೂಲಕ ವ್ಯಕ್ತವಾಗುತ್ತಿದೆ.
"Farmers have only one wish–they want a drought every year so they can demand the govt to waive off farm loans"
I do not understand kannada, but am told that these words, were spoken by Karnataka Congress Minister Shivanand Patil, if true then this minister is a freakin disgrace pic.twitter.com/c9FVYS68tI
— Ramandeep Singh Mann (@ramanmann1974) December 25, 2023
ವಿಚಿತ್ರವೆಂದರೆ, ಈ ಪಾಟೀಲ ಅದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಆದರೂ ಕಾಂಗ್ರೆಸ್ ಸರ್ಕಾರ ಇವರ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳದಿರುವುದು ಆಶ್ಚರ್ಯಕರ.
ರೈತರಿಗೆ ಅಗತ್ಯ ನೆರವು ಒದಗಿಸುವುದು ಕಾಂಗ್ರೆಸ್ ಭರವಸೆಗಳಲ್ಲೊಂದು. ರಾಹುಲ್ ಗಾಂಧಿ ಸೇರಿದಂತೆ ಸಿದ್ದರಾಮಯ್ಯರವರೆಗೆ ಎಲ್ಲರೂ ಈ ಕುರಿತು ರಾಜ್ಯದ ರೈತರಿಗೆ ವಾಗ್ದಾನ ನೀಡಿದ್ದಾರೆ. ಅದು ಕಾಂಗ್ರೆಸ್ ಶಾಸಕರಾದ, ಸಚಿವರೂ ಆದ ಶಿವಾನಂದ ಪಾಟೀಲಗೆ ಗೊತ್ತಿಲ್ಲದೇ ಇರುವುದು ವಿಚಿತ್ರ. ಈ ಹಿಂದೆ ಜನತಾ ದಳ, ಬಿಜೆಪಿಯಲ್ಲಿದ್ದ ಶಿವಾನಂದ ಪಾಟೀಲ, ಈಗಲೂ ಮಾನಸಿಕವಾಗಿ ಬಿಜೆಪಿಯಲ್ಲೇ ಇರುವಂತಿದೆ. ಈ ಕಾಂಗ್ರೆಸ್ ಶಾಸಕನಿಗೆ ಯಾರಾದರೂ ಅವರ ಪಕ್ಷದ ಪ್ರಣಾಳಿಕೆಯನ್ನು ಓದಿ ಹೇಳಬೇಕಿದೆ.
ಶಾಸಕ, ಸಚಿವರಾದ ಈ ಶಿವಾನಂದ ಪಾಟೀಲಗೆ ಯಾವ ಯಾವ ವರ್ಷ ಸಾಲ ಮನ್ನಾ ಆಗಿದೆ, ಯಾವ ಬ್ಯಾಂಕುಗಳ ಸಾಲ ಮನ್ನಾ ಆಗಿದೆ, ಅದರ ಮೊತ್ತ ಎಷ್ಟು? ರಾಜ್ಯದ ಒಟ್ಟು ಬಜೆಟ್‌ನಲ್ಲಿ ಅದರ ಪ್ರಮಾಣ ಎಷ್ಟು? ಸರ್ಕಾರ ಯಾವ ಯಾವ ಬಾಬತ್ತುಗಳಿಗೆ, ಯಾವ ಯಾವ ವರ್ಗಗಳಿಗೆ ಎಷ್ಟು ಖರ್ಚು ಮಾಡುತ್ತಿದೆ? ಅದರಲ್ಲಿ ವ್ಯವಸಾಯದ ಪ್ರಮಾಣ ಎಷ್ಟು ಎನ್ನುವ ಕನಿಷ್ಠ ಮಾಹಿತಿಯೂ ಇದ್ದಂತಿಲ್ಲ.
ಶಿವಾನಂದ ಪಾಟೀಲ ಬಸವನಬಾಗೇವಾಡಿ ಶಾಸಕ. ಬಸವನ ಬಾಗೇವಾಡಿ ಬಸವಣ್ಣನವರ ಹುಟ್ಟೂರು. ಈತ ಎಂದೂ ಬಸವಣ್ಣನವರ ವಚನಗಳನ್ನು ಓದಿದಂತೆ ಕಾಣುವುದಿಲ್ಲ. ಕಾಯಕದ ಮಹತ್ವವನ್ನು ಸಾರಿದವರು ಬಸವಣ್ಣ. ರೈತರನ್ನು ಕಾಯಕ ಯೋಗಿ ಎನ್ನುತ್ತಾರೆ. ಅಂಥ ರೈತರ ಬದುಕಿನ ಕಾಯಕ ತತ್ವವನ್ನು ಪದೇ ಪದೆ ಅವಮಾನಿಸುತ್ತಿರುವ ಶಿವಾನಂದ ಪಾಟೀಲ ನಿಜವಾದ ಅರ್ಥದಲ್ಲಿ ಲಿಂಗಾಯತ ಅಲ್ಲ. ಈತ ಕೇವಲ ಲಿಂಗಾಯತ ಜಾತಿಯ ಹೆಸರಲ್ಲಿ ರಾಜಕಾರಣ ಮಾಡುತ್ತಿರುವ ಯಕಃಶ್ಚಿತ್ ರಾಜಕಾರಣಿ, ಅಷ್ಟೇ.
ಈ ಸುದ್ದಿ ಓದಿದ್ದೀರಾ: ಆಂಧ್ರಪ್ರದೇಶದ ಚುನಾವಣಾ ಲೆಕ್ಕಾಚಾರ ಬದಲಿಸುವರೇ ಪ್ರಶಾಂತ್ ಕಿಶೋರ್?
ಶಿವಾನಂದ ಪಾಟೀಲರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಬಸವನಬಾಗೇವಾಡಿ ಕ್ಷೇತ್ರದ ಜನ ನಿಜಕ್ಕೂ ನಾಚಿಕೆ ಪಟ್ಟುಕೊಳ್ಳುವಂತಾಗಿದೆ, ತಾವು ಎಂಥ ಮತಿಗೇಡಿಯನ್ನು ಶಾಸಕರನ್ನಾಗಿ ಆಯ್ಕೆ ಮಾಡಿದೆವು ಎಂದು. ಸಿದ್ದರಾಮಯ್ಯನವರು ತಕ್ಷಣವೇ ಶಿವಾನಂದ ಪಾಟೀಲರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ರೈತರಷ್ಟೇ ಅಲ್ಲ, ಯಾವ ದುಡಿಯುವ ವರ್ಗದ ಬಗ್ಗೆಯೂ ಯಾವ ಶಾಸಕ, ಸಚಿವನೂ ಬಾಯಿಗೆ ಬಂದಂತೆ ಮಾತನಾಡಬಾರದು. ಕಾಂಗ್ರೆಸ್ ತತ್ವಕ್ಕೆ ವಿರುದ್ಧವಾಗಿರುವ, ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವ ಶಿವಾನಂದ ಪಾಟೀಲರನ್ನು ಸಂಪುಟದಿಂದ ವಜಾ ಮಾಡಿದರೆ, ಅದೊಂದು ದಾಖಲೆಯಾಗಿ ಉಳಿಯುತ್ತದೆ. ಹಾಗೆಯೇ ಉಳಿದವರು ಅದರಿಂದ ಉಳಿದವರು ಬುದ್ಧಿ ಕಲಿಯುತ್ತಾರೆ.