ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಹಿರಿಯ ಮುಖಂಡ, ದೇಶದ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಅವರು, “ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವ ವಿಚಾರವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇದು ನನಗೆ ತುಂಬಾ ಸಂತಷದ ವಿಷಯ. ಈ ಬಗ್ಗೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಈ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಅಭಿನಂದಿಸಿದ್ದೇನೆ” ಎಂದು ತಿಳಿಸಿದ್ದಾರೆ.
“ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಅಡ್ವಾಣಿ ಕೂಡ ಒಬ್ಬರು. ದೇಶದ ಅಭಿವೃದ್ಧಿಗೆ ಅವರ ಕೊಡುಗೆ ಸ್ಮರಣೀಯವಾದುದು. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ದೇಶದ ಉಪಪ್ರಧಾನಿಯಾಗಿ ದೇಶಸೇವೆ ಮಾಡುವವರೆಗಿನ ಅವರ ಜೀವನ ಮಾದರಿಯಾದುದು. ಅವರು ನಮ್ಮ ಗೃಹ ಮಂತ್ರಿ ಮತ್ತು ಮಾಹಿತಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಯಾವಾಗಲೂ ಆದರ್ಶಪ್ರಾಯವಾಗಿವೆ” ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ರಾಮಮಂದಿರ-ಬಾಬರಿ ಮಸೀದಿಯ ವಿವಾದ ರೂವಾರಿ
ರಾಮಮಂದಿರ ನಿರ್ಮಾಣಕ್ಕೆ ರಥಯಾತ್ರೆ, ರಾಮಮಂದಿರ ನಿರ್ಮಾಣ ಹೋರಾಟ, ಬಾಬರಿ ಮಸೀದಿ ವಿವಾದ ಸೇರಿದಂತೆ ಇನ್ನಿತರೆ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದರು. ವಾಜಪೇಯಿ ಸರ್ಕಾರದಲ್ಲಿ ಗೃಹ ಸಚಿವ, ಉಪಪ್ರಧಾನಿಯಾಗಿ ಕೆಲಸ ಮಾಡಿದ್ದರು.
ಎಲ್ ಕೆ ಅಡ್ವಾಣಿ, ಎಂ ಎಂ ಜೋಷಿಗೆ ರಾಮಮಂದಿರ ಉದ್ಘಾಟನೆಗೆ ಬರಬೇಡಿ ಎಂದಿದ್ದ ಟ್ರಸ್ಟ್!
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಆಂದೋಲನದ ಮುಂಚೂಣಿಯಲ್ಲಿದ್ದ ಬಿಜೆಪಿಯ ಹಿರಿಯರಾದ ಎಲ್‌ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರು ಜ.22ರಂದು ನಡೆದ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಬರದಂತೆ ಟ್ರಸ್ಟ್ ಸೂಚಿಸಿತ್ತು.
“ಎಲ್‌ಕೆ ಅಡ್ವಾಣಿ ಮತ್ತು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಅವರನ್ನು ಬರದಂತೆ ಕೇಳಿಕೊಳ್ಳಲಾಗಿದೆ” ಎಂದು ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು.
ಆ ಬಳಿಕ ಜ.22ರಂದು ಚಳಿ ಮತ್ತು ಪ್ರತಿಕೂಲ ಹವಾಮಾನದ ಕಾರಣಕ್ಕೆ 96 ವರ್ಷ ವಯಸ್ಸಿನ ಅಡ್ವಾಣಿ ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಿರಲಿಲ್ಲ.